Tuesday, October 27, 2009

ಪಾಪ ಉಲ್ಲಾಸ

ನಿಮಗೆ ಹಿಂದೊಮ್ಮೆ ಸವಾರಿ ಲೇಖನದಲ್ಲಿ ಉಲ್ಲಾಸನ ಆವಾಂತರವನ್ನು ಹೇಳಿದ್ದೆ. ಈಗ ನಮ್ಮ ಅದೇ ಉಲ್ಲಾಸನ ಇನ್ನೊಂದು ನೆನಪಿನ ಪುಟ ನಿಮಗಾಗಿ.
ಉಲ್ಲಾಸ್ ಗುಲ್ಬರ್ಗದಲ್ಲಿ ಓದುತ್ತಿರುವಾಗ, ಅಲ್ಲೇ ವಾಸವಾಗಿದ್ದ ತನ್ನ ಹಳೆಯ ಸಂಬಂಧಿಕರ ಮನೆಗೆ ಮಾತನಾಡಿಸಲು, ಮೊದಲ ಬಾರಿ ಅವರ ಮನೆಗೆ ಹೋದ. ಅವರು ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ಇಂದು ಇಲ್ಲೇ ಊಟ ಮಾಡಿ ಹೋಗು ಎಂದು ಬಲವಂತ ಮಾಡಿದರು. ನಮ್ಮ ಉಲ್ಲಾಸನಿಗೂ ದಿನಾಲೂ ಹೋಟೆಲ್ ಊಟ ಮಾಡಿ ಬೇಸರವಾಗಿತ್ತು. ಸರಿ ಆಯ್ತು ಮಾಡಿ ಹೋಗ್ತೀನಿ ಎಂದು ಹೇಳಿದ.
ಬಿಸಿ ಬಿಸಿ ಆಡುಗೆ ಸಿದ್ದ ಮಾಡಿದರು. ಅವರೆಲ್ಲರ ಜೊತೆ ನಮ್ಮ ಉಲ್ಲಾಸ ಊಟಕ್ಕೆ ಕೂತ. ಮೊದಲು ರೊಟ್ಟಿ ಪಲ್ಯ ಊಟ. ನಮ್ಮ ಉಲ್ಲಾಸನಿಗೆ ರೊಟ್ಟಿ ತಿನ್ನೋ ಅಭ್ಯಾಸ ಇರ್ಲಿಲ್ಲ. ಆದರೂ ಒಂದು ರೊಟ್ಟಿ ತಿಂದ. ನಂತರ ಅನ್ನ ಬಡಿಸಲು ಅವರ ಮನೆಯವರು ಮುಂದಾದರು. ಆದರೆ ಅನ್ನ ಸ್ವಲ್ಪ ಸೀದಿಹೊಗಿತ್ತು (ಒತ್ತಿ ಹೋಗಿತ್ತು, ಒತ್ತಿತ್ತು). ಅವರ ಮನೆಯವರು ಉಲ್ಲಾಸನಿಗೆ ಅನ್ನ ಸೀದಿರುವ ಸಂಗತಿ ಹೇಳಿ, ಕ್ಷಮೆ ಕೇಳಿ, ರೊಟ್ಟಿನೆ ತಗೋಳಿ ಎಂದರು. ನಮ್ಮ ಉಲ್ಲಾಸನಿಗೆ ಅನ್ನ ತಿನ್ನದೇ ಇದ್ದರೆ, ಊಟ ಮಾಡಿದ ಹಾಗೆ ಆಗುವುದಿಲ್ಲ. ಮೊದಲೇ ರೊಟ್ಟಿ ತಿನ್ನುವ ಅಭ್ಯಾಸವಿಲ್ಲ. ಅನ್ನ ಸೀದಿದ್ದರು ಸರಿ, ಅದನ್ನೇ ತಿನ್ನೋಣ ಎಂದು ಮನಸ್ಸಿನಲ್ಲಿ ಅಂದುಕೊಂಡು, ಅವರಿಗೆ ಒಂದು ಸುಳ್ಳು ಹೇಳಿದ.
'ನನಗೆ ಸೀದಿರುವುದೆಂದರೆ ತುಂಬಾ ಇಷ್ಟ, ನನಗೆ ಅದನ್ನೇ ಬಡಿಸಿ' ಎಂದ.
ಅವರ ಮನೆಯವರು ಸ್ವಲ್ಪ ನಿಟ್ಟುಸಿರು ಬಿಟ್ಟು, ಅದನ್ನೇ ಬಡಿಸಿದರು. ನಮ್ಮ ಉಲ್ಲಾಸ ಸ್ವಲ್ಪ ಕಷ್ಟ ಪಟ್ಟು ಊಟ ಮಾಡಿದ. ಊಟವಾದ ನಂತರ ಅವರಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದ.

೨ ವರ್ಷಗಳ ನಂತರ.........

ಮತ್ತೊಮ್ಮೆ ನಮ್ಮ ಉಲ್ಲಾಸನಿಗೆ, ಅವರ ಮನೆಗೆ ಹೊಗಿಬರಬೇಕಾದ ಪ್ರಸಂಗ ಬಂತು. ಮತ್ತೊಮ್ಮೆ ಅವರ ಮನೆಗೆ ಹೋದ.
'ಇಲ್ಲೇ ಓದ್ತಾ ಇದ್ರು, ಅವಾಗವಾಗ ಮನೆಗೆ ಬರ್ತಾ ಇರಬಾರದ.. ?' ಎಂದು ಅವರ ಮನೆಯವರು ಕೇಳಿ, ಮತ್ತೊಮ್ಮೆ ಅತ್ಮಿಯತೆಯಿಂದ ಮಾತನಾಡಿಸಿದರು. ಬಂದ ಕೆಲಸವಾದ ನಂತರ, ನಾನು ಹೋಗಿಬರ್ತೀನಿ ಎಂದು ಹೇಳಿ, ಎದ್ದು ನಿಂತ.
'ಹೇ, ಕೂತ್ಕೊಳೋ, ಊಟ ಮಾಡ್ಕೊಡು ಹೋಗು...' ಎಂದರು.
ಬೇಡವೆಂದರೂ, ಬಲವಂತ ಮಾಡಿದರು. ನಮ್ಮ ಉಲ್ಲಾಸ ಅವರೆಲ್ಲರ ಜೊತೆ ಊಟಕ್ಕೆ ಕೂತ. ಮತ್ತದೇ ರೊಟ್ಟಿ ಪಲ್ಯ. ಇಷ್ಟವಿಲ್ಲದಿದ್ದರೂ ಒಂದು ರೊಟ್ಟಿ ತಿಂದ. ನಂತರ ಅನ್ನ ಬಡಿಸಲು ಮುಂದಾದರು..
ನಮ್ಮ ಉಲ್ಲಾಸನದು, ಏನು ಕೆಟ್ಟ ಹಣೆಬರಹವೋ ಏನೋ... ಇವತ್ತು ಕೂಡ ಅನ್ನ ಸೀದಿತ್ತು...
ಅದನ್ನು ಗಮನಿಸಿದ ಮನೆಯವರು 'ಅನ್ನ ಸೀದಿದೆ...' ಎಂದರು.
ಅವರ ಮನೆಯಲ್ಲಿರುವ ಇನ್ನೊಬ್ಬ ವ್ಯಕ್ತಿ... 'ಒಹ್, ಅನ್ನ ಸೀದಿದೆಯ... ? ನಮ್ಮ ಉಲ್ಲಾಸನಿಗೆ ಸೀದಿರೋದು ಅಂದ್ರೆ ತುಂಬಾ ಇಷ್ಟ. ಅವನಿಗೆ ಬಡಿಸಿ...' ಎಂದರು.
ನಮ್ಮ ಉಲ್ಲಾಸ ಮನದಲ್ಲೇ ಕೊರಗಿದ. ಅವತ್ತು ನಾನು ಹೇಳಿದ ಸುಳ್ಳಿನಿಂದ ಇವತ್ತು ಕೂಡ ನನಗೆ ಸೀದಿರುವ ಊಟ... :(
ಆ ಮನೆಯವರು ನಮ್ಮ ಉಲ್ಲಾಸನಿಗೆ ಸೀದಿರುವುದು ಇಷ್ಟವೆಂದು ತಿಳಿದ ಬಳಿದ, ಕೆಳಗೆ ಸೀದಿರುವುದನ್ನೆಲ್ಲ ಹುಡುಕಾಡಿ ಬಡಿಸಿದರು.
ಪಾಪ, ನಮ್ಮ ಉಲ್ಲಾಸನಿಗೆ ಬೇರೆ ದಾರಿಯಿಲ್ಲದೆ ಸುಮ್ಮನೆ ಕಣ್ಣು ಮುಚ್ಚಿಕೊಂಡು ತಿಂದ..
Share/Save/Bookmark

Monday, October 12, 2009

ಸಾಗುತ ದೂರ ದೂರ...



ಮೂರು ವರ್ಷಗಳ ಹಿಂದೆ ನಡೆದ ಘಟನೆ.
ನಾನು ಹಾಗು ನಟ ಇಬ್ಬರು ಸೇರಿ ಬೆಂಗಳೂರಿನಿಂದ ಬಳ್ಳಾರಿಗೆ ಹೋಗಬೇಕಾಗಿತ್ತು. ಬಳ್ಳಾರಿ ಹತ್ತಿರ ಇರುವ 'ಕುಡತಿನಿ' ನನ್ನ ಊರು. ಆದರೆ ನಾವು ಹೋಗುತ್ತಿದ್ದುದು ಬೇರೆ ಕೆಲಸದ ನಿಮಿತ್ತ. ಅಲ್ಲಿ ಸ್ವಲ್ಪ ಸುತ್ತುವ ಕೆಲಸಗಳಿದ್ದರಿಂದ, ತಿರುಗಾಡಲು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋದರೆ ಒಳಿತು ಎಂದು ನಿರ್ಧರಿಸಿದೆವು. ೩೦೦ ಕಿಲೋಮೀಟರುಗಳ ಪ್ರಯಾಣವನ್ನು ಬೈಕಿನಲ್ಲೇ ಮಾಡಲು ಸಜ್ಜಾದೆವು. ಜೀವನದಲ್ಲಿ ಮೊದಲಬಾರಿಗೆ, ಬೈಕಿನಲ್ಲಿ ಇಷ್ಟು ದೂರದ ಪ್ರಯಾಣ ಮಾಡ್ತಾ ಇರೋದು. ಬೆಂಗಳೂರನ್ನು ಬೆಳಗಿನಜಾವ ಬಿಡುವ ಯೋಚನೆ ಮಾಡಿದ್ರು. ಕೆಲವು ಸಣ್ಣ ಪುಟ್ಟ ಕೆಲಸಗಳು ಇದ್ದುದರಿಂದ, ನಾವು ಬಿಡುವುದು ತಡವಾಯಿತು. ನಾವು ಬೆಂಗಳೂರು ಬಿಟ್ಟಾಗ ಮಧ್ಯಾನ ೪ ಗಂಟೆ. ಬೆಂಗಳೂರು ದಾಟುವುದರೊಳಗೆ ಒಂದು ಗಂಟೆ ಜಾರಿ ಹೋಯಿತು. ನಾವು ತುಮಕೂರು ಸೇರಿದಾಗ ಸಮಯ ಸಂಜೆ ೬ ಗಂಟೆ.

ಆಗಸದ ಸೂರ್ಯನಿಗೆ ಅವತ್ತು ಏನು ಕೆಲಸವಿತ್ತೇನೋ..?..
ಸ್ವಲ್ಪ ಬೇಗಾನೆ ಮರೆಯಾಗಲು ಶುರು ಮಾಡಿದ...
ಸರಿ, ತುಮಕೂರಿನಲ್ಲಿ ಒಂದು ಕಪ್ ಟೀ ಕುಡಿದು, ಸ್ವಲ್ಪ ವಿಶ್ರಾಂತಿ ಪಡೆದು ಮುಂದುವರೆದೆವು.
ಸೂರ್ಯ ಮರೆಯದಂತೆ, ಕತ್ತಲು ಕವಿಯಾಲರಂಬಿಸಿತು. ಬೈಕಿನ ಹೆಡ್ ಲೈಟ್ ಹೊತ್ತಿಸಿದೆವು. ಅದೇನು ತೊಂದರೆಯಾಗಿತ್ತೋ ಏನೋ ಹೆಡ್ ಲೈಟ್ ನಿಂದ ಬೆಳಕು ತುಂಬಾ ಕಡಿಮೆ ಬರುತ್ತಿತ್ತು..ಅದನ್ನು ಹಾಕುವುದು ಒಂದೇ. ಹಾಕದಿರುವುದು ಒಂದೇ. ಮುಂಚೆ ಎಲ್ಲ ಸರಿಯಾಗಿತ್ತು. ಇದ್ದಕ್ಕಿದ್ದ ಹಾಗೆ ಈ ಹೆಡ್ ಲೈಟ್ ಕೈಕೊಟ್ಟಿದೆ. ಕತ್ತಲದಂತೆ ಮುಂದೆ ಏನು ಕಾಣಿಸದಾಯ್ತು. ಹಾಗೆ ನಿಧಾನವಾಗಿ ರಸ್ತೆಯಲ್ಲಿ ಬಿಡಿಸಿದ ಬಿಳಿಪಟ್ಟಿಯ ಮೇಲೆ ನಾನೊಂದು ೫೦ ಕಿಲೋಮೀಟರು ನಡೆಸೋದು, ಅವನೊಂದು ೫೦ ಕಿಲೋಮೀಟರು ನಡೆಸೋದು.. ಹೀಗೆ "ಸಾಗುತ ದೂರ ದೂರ......, ಬಾ ಬಳ್ಳಾರಿ ಬೇಗ....."

ಬಳ್ಳಾರಿಗೆ ಇನ್ನು ೪೦ ಕಿಲೋಮೀಟರು ಬಾಕಿಯಿತ್ತು. ಆಗ ಸಮಯ ರಾತ್ರಿ ೧೨ ಗಂಟೆ. ಕೆಲವು ಪೊಲೀಸರು ರಸ್ತೆಯಲ್ಲಿ ಹೋಗಿಬರುತ್ತಿದ್ದ ವಾಹನಗಳ ವಿಚಾರಣೆ ನಡೆಸುತ್ತ ನಿಂತಿದ್ದರು. ಹಾಗೆ ನಮ್ಮ ಬೈಕನ್ನು ನಿಲ್ಲಿಸಿದರು. ಗಾಡಿಯ ಪುಸ್ತಕ ಹಾಗು ಗಾಡಿ ನಡೆಸುತ್ತಿದ್ದ ನನ್ನ ಲೈಸನ್ಸ್ ಕೇಳಿದ್ರು. ಕೊಟ್ವಿ. ಎಲ್ಲ ಸರಿಯಾಗಿ ಇತ್ತು..
"ಯಾಕೆ ಇಷ್ಟು ಹೊತ್ತಿನಲ್ಲಿ ಹೋಗ್ತಾ ಇದ್ದೀರಾ...?"
ನಾವು ಸಮಂಜಸವಾದ ಕಾರಣಗಳನ್ನು ಕೊಟ್ಟೆವು.
ಆಗ ಅವರು... "ಸರಿ, ಇಷ್ಟು ಹೊತ್ತಿನಲ್ಲಿ ಹೋಗೋದು ಸೂಕ್ತವಲ್ಲ, ಇದು ಹೈವೆ (ಹೆದ್ದಾರಿ).. ಬಹಳ ಹುಷಾರ್ ಆಗಿ ಹೋಗ್ಬೇಕು. ಮುಂದೆ ಸ್ವಲ್ಪ ಡೇಂಜರ್ ದಾರಿ ಇದೆ. ನಿಧಾನವಾಗಿ ನೋಡ್ಕೊಂಡು ಹೋಗಿ.." ಎಂದು ಸಲಹೆಯನಿತ್ತರು.
ನಾವು "ಸರಿ ಸರ್" ಎಂದು ಹೇಳಿ.. ನಮ್ಮ ಪಯಣ ಮುಂದುವರೆಸಿದೆವು.

ನಾನು ತುಂಬಾ ನಿಧಾನವಾಗಿ ಗಾಡಿ ನಡೆಸುತ್ತಿದ್ದೆ..
ಹಿಂದೆ ಕೂತಿದ್ದ ನಟ.... "ಲೋ, ಸ್ವಲ್ಪ ಜೋರಾಗಿ ನಡೆಸೋ...ಬೇಗ ಊರು ತಲುಪೋಣ"
ನಾನು : "ನಟ, ಮುಂದೆ ಏನು ಕಾಣಿಸ್ತಾ ಇಲ್ಲ... ಜೋರಾಗಿ ನಡೆಸೋದು ಕಷ್ಟ..."
ನಟ : "ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೇನೇ....., ಬಿಡು ನಾನೇ ನಡೆಸ್ತೀನಿ..."
ಸರಿ, ನೀನೆ ನಡೆಸು ಬಾ ಅಂತ ಹೇಳಿ ನಾನು ಹಿಂದಕ್ಕೆ ಕುಳಿತೆ.
ಈಗ ನಟ ಗಾಡಿ ನಡೆಸಲು ಶುರು ಮಾಡಿದ.
ಒಂದು ೨ ಕಿಲೋಮೀಟರು ಇದ್ದದ್ರಲ್ಲೇ ಜೋರಾಗಿ ಗಾಡಿ ಸಾಗ್ತಾ ಇತ್ತು...
ಏನಾಯ್ತೋ ಗೊತ್ತಿಲ್ಲ.. ಇಬ್ಬರು ಇದ್ದಕಿದ್ದ ಹಾಗೆ ಮದ್ಯರಸ್ತೆಯಲ್ಲಿ ಬಿದ್ದುಬಿಟ್ಟೆವು...
ಸುತ್ತ ಮುತ್ತ ಒಂದು ನರಪ್ರಾಣಿ ಸಹಿತ ಇಲ್ಲ. ಸುತ್ತಲು ಬರಿ ಕತ್ತಲು ಮಾತ್ರ ಕಾಣಿಸ್ತಿದೆ.
ಹೆದ್ದಾರಿಯ ರಸ್ತೆ ಮದ್ಯದಲ್ಲಿ ಇಬ್ಬರು ಅನಾಥರಾಗಿ ಬಿದ್ದಿದಿವಿ.
ನಟನಿಗೆ ಜಾಸ್ತಿ ಪೆಟ್ಟಾಗಿತ್ತು. ನನಗೂ ಸ್ವಲ್ಪ ಪೆಟ್ಟಾಗಿತ್ತು.
ನಾನು ಬೇಗನೆ ಎದ್ದು, ನಟನನ್ನು ಎಬ್ಬಿಸಿ, ಬೈಕನ್ನು ರಸ್ತೆಯ ಪಕ್ಕಕ್ಕೆ ತಂದು ನಿಲ್ಲಿಸಿದೆ.
ಸ್ವಲ್ಪ ಸಮಯ ನಟನಿಗೆ "ಏನಾಯ್ತು..?" ಎನ್ನುವ ಪ್ರಜ್ಞೆ ಸಹಿತ ಇರಲಿಲ್ಲ. ನಂತರ ನಿಧಾನವಾಗಿ ಚೇತರಿಸಿಕೊಂಡ.
ರಸ್ತೆಯ ಮೇಲೆ ದೊಡ್ಡ ಹುಲ್ಲಿನ ಬಣವೆ ಹಾಕಿದ್ದರು. ಆ ಹುಲ್ಲಿನ ರಾಶಿ ಅರ್ಧ ರಸ್ತೆಯನ್ನು ಆಕ್ರಮಿಸಿತ್ತು. ಆ ಹುಲ್ಲಿನ ರಾಶಿಯು ನಮ್ಮ ಬೈಕಿನ ಒಂದು ಭಾಗವನ್ನು ತಾಕಿದ್ದರಿಂದ ನಾವು ರಸ್ತೆಯಲ್ಲಿ ಬಿದ್ದದ್ದು ಎಂದು ತಿಳಿಯುತು.
ಈ ಅನಾಹುತದ ನಂತರ, ನಟ ಮತ್ತೆ ಬೈಕ್ ನಡೆಸುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಬಹಳ ಗಾಯಗಳಾಗಿದ್ದವು.
ನಾನೇ ಗಾಡಿ ನಡೆಸಲು ಶುರು ಮಾಡಿದೆ. ನಟ ಹಿಂದೆ ಕೂತಿದ್ದ.
ನಾನು ಈಗ ತುಂಬಾ ತುಂಬಾ ನಿಧಾನವಾಗಿ ಜಾಗುರತೆಯಿಂದ ಬೈಕ್ ನಡೆಸುತ್ತಿದ್ದೆ.
ಹಿಂದಿನಿಂದ ನಟ, ನನ್ನ ಬುಜವನ್ನು ಒತ್ತಿ ಹಿಡಿದು ಹೇಳಿದ... "ಲೋ......"
ನಾನು : "ಏನೋ..."
ನಟ : "ನಿಧಾನವಾಗಿ ನಡೆಸೋ..."
ನಾನು ತುಂಬಾ ತುಂಬಾ ನಿಧಾನವಾಗಿ ಬೈಕ್ ನಡೆಸುತ್ತಿದ್ದೆ. ನನ್ನ ಗಾಡಿ ಬಹುಶ ೫ ಕಿಲೋಮೀಟರು ವೇಗದಲ್ಲಿ ಹೋಗುತ್ತಿತ್ತು ಅನ್ಸುತ್ತೆ.
ನಾನು : "ಲೋ ನಟ, ನಾನು ತುಂಬಾ ನಿಧಾನವಾಗೆ ನಡಿಸ್ತಾ ಇದೀನಿ.. ಇದಕ್ಕಿಂತ ನಿಧಾನಾನ...?"
ನಟ : "ಲೋ, ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ, ಅಸ್ಟು ನಿಧಾನವಾಗಿ ಹೋಗು..ಸ್ವಲ್ಪ ನನ್ನ ಪರಿಸ್ಥಿತಿ ಅರ್ಥ ಮಾಡ್ಕೋ."
ನನಗೆ ಗಂಭೀರವಾದ ಪರಿಸ್ಥಿತಿಯಲ್ಲೂ ನಗು ಬಂತು... ಹತ್ತು ನಿಮಿಷದ ಮುಂಚೆ "ಇಷ್ಟು ನಿಧಾನವಾಗಿ ಹೋದರೆ, ನಾವು ಊರು ತಲುಪಿದ ಹಾಗೆ" ಎನ್ನುವವನು, ಈಗ "ಎಷ್ಟು ನಿಧಾನವಾಗಿ ಹೋಗಲು ಸಾಧ್ಯವೋ ಅಸ್ಟು ನಿಧಾನವಾಗಿ ಹೋಗು" ಅಂತ ಇದಾನೆ...

ಅಂತು ಆಮೆ ವೇಗದಲ್ಲಿ ಬಳ್ಳಾರಿಯನ್ನು ಸೇರಿದೆವು.
ನನಗೆ ಅಂಗಾಲಿನ ಮೇಲೆ ಪೆಟ್ಟಾಗಿತ್ತು. ಆ ಪೆಟ್ಟನ್ನು ನನ್ನ ಪ್ಯಾಂಟ್ ಮುಚ್ಚಿಕೊಂಡಿತ್ತು.
ಆದರೆ ನಟನಿಗೆ, ಗಲ್ಲದ ಮೇಲಾಗಿರುವ ಪೆಟ್ಟನ್ನು ಹೇಗೆ ಮುಚ್ಚಿಕೊಳ್ಳುವುದು... ?.
ಪೋಷಕರು "ಬೈಕಿನಲ್ಲಿ ದೂರದ ಪ್ರಯಾಣ ಮಾಡಬೇಡಿ" ಎಂದು ಸಲಹೆ ಕೊಟ್ಟಿದ್ದರು, ನಾವು ಅವರನ್ನು ಸುಮ್ಮನಿರಿಸಿ ಬಂದಿದ್ದೇವೆ. ಈಗ ಅವರಿಗೆ ನಿಜ ಹೇಳಿದರೆ, ಮುಂದೆ ನಮ್ಮನ್ನು ಬೈಕ್ ಹತ್ತಲು ಬಿಡುವರೇ ?... ಹಾಗಾಗೆ ಒಂದು ಸುಂದರ ಸುಳ್ಳು ಹೇಳಲು ಸಿದ್ದವಾದೆವು...
ಕೇಳಿದವರಿಗೆಲ್ಲ... "ದಾರಿಯಲ್ಲಿ, ಒಂದು ಹೋಟೆಲ್ಲಿಗೆ ಹೋದೆವು. ಆ ಹೋಟೆಲ್ ಎರಡು ಮಹಡಿಯನ್ನು ಹೊಂದಿತ್ತು. ನಾವು ಮೇಲ್ಮಹಡಿಗೆ ಹೋಗಲು, ಮೆಟ್ಟಲು ಹತ್ತುತ್ತಿರುವಾಗ ನಟ ಜಾರಿ(ಸ್ಕಿಡ್ ಆಗಿ) ಬಿದ್ದ. ಅದಕ್ಕೆ ನಟನಿಗೆ ಪೆಟ್ಟಾಯ್ತು..." ಅಂತ ಹೇಳಿ ಪ್ರಕರಣವನ್ನು ಮುಚ್ಚಿಹಾಕಿದೆವು. ನಿಜ ಹೇಳಬೇಕೆಂದರೆ, ನಟನಿಗೆ ಗಾಯಗಳು ವಾಸಿಯಾಗಲು ಕೆಲವು ವಾರಗಳು ಹಿಡಿಯಿತು.

ನನಗೆ ಈ ಘಟನೆ ನೆನಪಾದಾಗಲೆಲ್ಲ ನಟ ಆಡಿದ ಮಾತುಗಳನ್ನು ನೆನೆದು ನಗ್ತಾ ಇರ್ತೀನಿ.
Share/Save/Bookmark

Thursday, October 8, 2009

ಉಪ್ಪಿಗಿಂತ ರುಚಿ ಬೇರೆ ಇಲ್ಲ


ಮೈಸೂರಿನಲ್ಲಿದ್ದಾಗ ನಾವು ದಿನಾಲೂ ರಾತ್ರಿ ಊಟಕ್ಕೆ ಒಂದು ಮೆಸ್ಸ್'ಗೆ ಹೋಗ್ತಾ ಇದ್ವಿ.
ಊಟ ಪರವಾಗಿಲ್ಲ. ಬೇರೆ ಹೋಟೆಲುಗಳಿಗೆ ಹೋಲಿಸಿದರೆ ಚನ್ನಾಗೆ ಮಾಡ್ತಾ ಇದ್ರು..
ನಾವು ದಿನಾಲೂ ತಪ್ಪಿಸದೇ ಹೋಗ್ತಾ ಇದ್ದುದರಿಂದ, ಹೋಟೆಲ್ ನಡೆಸುತ್ತಿದ್ದ ಅಂಕಲ್, ಆಂಟಿ, ಅವರ ಮಗಳು ಹಾಗು ಅವರ ಮಗ ಎಲ್ರೂ ಪರಿಚಯವಾಗಿದ್ರು.
ಊಟ ಆದ ನಂತರ ಒಂದು ಲೋಟದಲ್ಲಿ ಮಜ್ಜಿಗೆ ಕೂಡ ಕೊಡ್ತಾ ಇದ್ರು. ಮಜ್ಜಿಗೆಗೆ ಸ್ವಲ್ಪ ಉಪ್ಪು ಕಮ್ಮಿ ಹಾಕ್ತ ಇದ್ರು. ನಾನು ಮಜ್ಜಿಗೆ ಕುಡಿತ ಇರುವಾಗ, ಕಡಿಮೆ ಉಪ್ಪು ಇರುವುದು ಗಮನಿಸಿ, ಮತ್ತೊಮ್ಮೆ ಉಪ್ಪು ತರಿಸಿ ಹಾಕಿಕೊಳ್ಳುತ್ತಿದ್ದೆ. ಊಟದ ನಂತರ ಮಜ್ಜಿಗೆ ಕುಡಿಯುವಾಗ ದಿನಾಲೂ ಉಪ್ಪು ಜಾಸ್ತಿ ಹಾಕಿಸಿಕೊಂಡು ಕುಡಿತ ಇದ್ದೆ.. ಎಸ್ಟೆ ಆಗ್ಲಿ ನಾನು ಉಪ್ಪು-ಖಾರ ತಿನ್ನೋ ಹುಡುಗ ಅಲ್ವಾ :P

ಸರಿ, ಎಲ್ಲ ಪರೀಕ್ಷೆಗಳು ಮುಗಿದವು. ಮರುದಿನ ಮೈಸೂರಿಗೆ ವಿದಾಯ ಹೇಳೋ ದಿನ. ಹಾಗಾಗಿ ಆ ಮೆಸ್ಸಿನಲ್ಲಿ ಕೊನೆಯ ದಿನ ಊಟ ಮಾಡಲು ಹೋದೆವು. ಹೋಟೆಲಿನ ಆಂಟಿ, ಅಂಕಲ್'ಗೆ ಹೇಳಿದ್ವಿ. "ಇದು ನಿಮ್ಮ ಮೆಸ್ಸಿನಲ್ಲಿ ಕೊನೆ ದಿನ" ಅಂತ.
ಅವರು ಅಂದು ನಮ್ಮನ್ನು ಮನೆ ಮಕ್ಕಳಂತೆ ತುಂಬಾ ಆತ್ಮಿಯಾವಾಗಿ ಸಲುಗೆಯಿಂದ ಊಟ ಬಡಿಸಿದರು.
"ಅವಾಗವಾಗ ಮೈಸೂರಿಗೆ, ನಮ್ಮ ಮನೆಗೆ ಬರ್ತಾ ಇರಿ..." ಅಂತ ಹೇಳಿದ್ರು...
ನಾವು "ಗ್ಯಾರೆಂಟಿ" ಬರ್ತಿವಿ ಅಂತ ಆಶ್ವಾಸನೆ ಕೊಟ್ವಿ..

ಪ್ರತಿದಿನದ ಹಾಗೆ ಊಟ ಮುಗಿಯುತ್ತಿರುವಾಗ ನನ್ನ ಟೇಬಲ್ಲಿನ ಮೇಲೆ ಮಜ್ಜಿಗೆ ಲೋಟವನ್ನು ಇಟ್ಟರು. ಆಂಟಿ, ಅಂಕಲ್, ಅವರ ಮಗಳು ಹಾಗು ಅವರ ಮಗ ಎಲ್ಲರು ನನ್ನನ್ನೇ ನೋಡ್ತಾ ಇದ್ರು.. ಬಹುಶ ಇದು ಕೊನೆ ದಿನ ಅಂತ ಸ್ವಲ್ಪ ಸೆಂಟಿಮೆಂಟ್ ಆಗಿರಬಹುದು ಅನ್ಕೊಂಡು ಸುಮ್ಮನಿದ್ದೆ. ಸರಿ, ಊಟದ ನಂತರ ಮಜ್ಜಿಗೆಯನ್ನು ಕುಡಿದೆ. ಆದರೆ ಇಂದು ಉಪ್ಪು ಹಾಕಿಕೊಳ್ಳುವುದನ್ನು ಮರೆತೆ. ಇನ್ನೂ ಅವರು ನನ್ನನ್ನೇ ನೋಡುತ್ತಿದ್ದುದು ನೋಡಿ...
ತಡೆದುಕೊಳ್ಳಲಾಗದೆ ಕೊನೆಗೆ ಕೇಳೆಬಿಟ್ಟೆ... "ಯಾಕೆ ಆವಗ್ಲಿಂದ ಆ ಥರ ನೋಡ್ತಾ ಇದ್ದೀರಾ....??"
ಅವರು ನಗುತ್ತ ಕೇಳಿದರು... "ಮಜ್ಜಿಗೆ ಹೇಗಿತ್ತು.. ?"
ನಾನು.. "ಚನ್ನಾಗಿತ್ತು...."
ಅವರು.. "ಮತ್ತೆ.. ಉಪ್ಪು ಜಾಸ್ತಿ ಇರ್ಲಿಲ್ವ...?"
ನಾನು... "ಇಲ್ಲ. ಸರಿಯಾಗೆ ಇತ್ತು"
ಅವರು... "ಅಯ್ಯೋ ದೇವರೇ, ನಾವು ನಿಮ್ಮನ್ನು ಚೂಡಯಿಸಲು ಬಹಳ ಜಾಸ್ತಿ ಉಪ್ಪು ಹಾಕಿದರೂ, ನೀವು ಅದೇನು ಲೆಕ್ಕವಿಲ್ಲದಂತೆ ಕುಡಿದಿರಲ್ವಾ...?"
ನಾನು... "ಒಹ್.. ಹಾಗಾ... ನನಗೆ ಹಾಗೇನೂ ಅನ್ನಿಸಲಿಲ್ಲ... "
ಆಗ ಅವರು... "ನೀವು ಸಾಮಾನ್ಯದವರು ಅಲ್ಲ ಬಿಡಿ" ಅಂತ ನಗುತ್ತ ನುಡಿದರು...

NO BP, BE HAPPY.... :)
Share/Save/Bookmark