Monday, December 28, 2009

ಸೊನ್ನೆ


(ಚಿತ್ರ ಕೃಪೆ: ಅಂತರ್ಜಾಲ)

ಎಂದಿನಂತೆ ಬೆಳಿಗ್ಗೆ ಬೇಗನೆ ಎದ್ದು (ನಿಜ ಹೇಳ್ತಾ ಇದೀನಿ ರೀ) ಕಾಲೇಜ್'ಗೆ ಹೋದೆ. ಕಾಲೇಜ್'ನ ಆವರಣದ ಒಳಗೆ, ಕ್ಲಾಸ್ ಗೆ ಹೋಗುವ ದಾರಿಯಲ್ಲಿ Placement ಆಫೀಸಿನ ಮುಂದೆ ಕಾಲೇಜ್'ನ ಹುಡುಗರು ದೊಡ್ಡದಾದ ಒಂದು ಸಾಲಿನಲ್ಲಿ ನಿಂತಿದ್ದರು. ನನ್ನ ಕೆಲವು ಮಿತ್ರರು ಕೂಡ ಅದೇ ಸಾಲಿನಲ್ಲಿ ನಿಂತಿದ್ದರು. ಅಲ್ಲೇ ಹಾಕಿದ್ದ ಬ್ಯಾನೆರ್ ನೋಡಿದೆ. "ಉಚಿತ ಕಣ್ಣಿನ ಪರೀಕ್ಷೆ" ಎಂದಿತ್ತು. ನನ್ನ ಮಿತ್ರರು ನನ್ನನ್ನು ಕರೆದು "ಸಾಲಿನಲ್ಲಿ ನಿಂತ್ಕೋ" ಎಂದರು. ನಾನು ಸಾಲಿನಲ್ಲಿ ನಿಂತೆ.
ಒಬ್ಬೊಬ್ಬರು ಕಣ್ಣು ಪರೀಕ್ಷೆ ಮಾಡುತ್ತಿದ್ದ ಕೋಣೆಯ ಒಳಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಹೊರ ಬರುತ್ತಿದ್ದರು. ಹೀಗೆ ಹೊರಬಂದ ನನ್ನ ಸ್ನೇಹಿತರು, ಕೈಯಲ್ಲಿ ಹಿಡಿದ ಒಂದು ಚೀಟಿಯನ್ನು ತೋರಿಸಿ "ಮಗ, ನನಗೆ ೦.೨೫ ಇದೆ", "ಮಗ, ನನಗೆ ೪.೫ ಇದೆ"... ಎಂದು ಒಬ್ಬೊಬ್ಬರು ಒಂದೊಂದು ಅಂಕಿ ಹೇಳುತ್ತಿದ್ದರು. ಅದು ಅವರಿಗೆ ಇರುವ ದೃಷ್ಟಿ ದೋಷದ ಅಂಕಿ. ತಪಾಸಣೆ ಮಾಡಿದ ವೈದ್ಯರು, ಅವರಿಗೆ ಕನ್ನಡಕ ಧರಿಸಲೋ, ಅಥವಾ ಇರುವ ಕನ್ನಡಕವನ್ನು ಬದಲಿಸಲೋ ಹೇಳಿರುವುದಾಗಿ ಹೇಳಿಕೊಂಡರು.
ನನಗೂ ಕನ್ನಡಕ ಧರಿಸಲು ಹೇಳಬಹುದು ಎಂದುಕೊಂಡು ಸಾಲಿನಲ್ಲಿ ನಿಂತೆ.
ನನ್ನ ಸರದಿ ಬಂತು. ಕೋಣೆಯ ಒಳ ಹೋದೆ.
ಅಲ್ಲೊಂದು ಕಣ್ಣಿನ ಪರೀಕ್ಷೆಯ ಉಪಕರಣವನ್ನು ಇಟ್ಟಿದ್ದರು.
ಅದರ ಒಂದು ತುದಿಯಲ್ಲಿ ಅವರು ಕೂತು, ಇನ್ನೊಂದು ತುದಿಯಲ್ಲಿ ನನ್ನನ್ನು ಕೂರಲು ಹೇಳಿದರು. (ಮೇಲಿನ ಚಿತ್ರದಲ್ಲಿ ಇರುವ ಹಾಗೆ).
ಆ ಉಪಕರಣದ ಒಂದು ತುದಿಯಲ್ಲಿ ಕಣ್ಣಿಟ್ಟು ನೋಡಲು ಹೇಳಿದರು. ಇನ್ನೊಂದು ತುದಿಯಲ್ಲಿ ಅವರು ನೋಡುತ್ತಿದ್ದರು.
ಅವರು ನೋಡುತ್ತಾ... "ಸರಿಯಾಗಿ ಕಣ್ಣಿಟ್ಟು ನೋಡ್ತಾ ಇದ್ದೀರಾ...?" ಎಂದು ಕೇಳಿದರು.
"ಹಾ ಸರ್, ನೋಡ್ತಾ ಇದೀನಿ" ಎಂದು ಹೇಳಿದೆ.
ಎರೆಡು ಮೂರು ಬಾರಿ ಹೀಗೆ ಕೇಳಿದರು.
"ನಾನು ನೋಡುತ್ತಲೇ ಇದ್ದೇನೆ" ಎಂದು ಹೇಳಿದೆ.
ಒಂದು ನಿಮಿಷ ಇನ್ನೊಂದು ತುದಿಯಿಂದ ನನ್ನ ಕಣ್ಣನ್ನು ನೋಡಿ, ಪರೀಕ್ಷಿಸಿದರು.
ನಂತರ... ಒಂದು ಚೀಟಿಯಲ್ಲಿ ಏನೋ ಅಂಕಿ ಬರೆದು ನನ್ನ ಕೈಯಿಗೆ ಇಟ್ಟರು.
ನಾನು "ಸರ್, ಕನ್ನಡಕ ಏನಾದ್ರು ಬೇಕಾಗುತ್ತ...?" ಎಂದೆ.
"ಏನು ಬೇಕಿಲ್ಲ ಹೋಗಿ" ಎಂದರು.
"ಎಸ್ಟಿದೆ ಸರ್..." ಎಂದೆ.
"ಎಷ್ಟು ಇಲ್ಲ ಹೋಗಿ" ಎಂದರು.
ಆ ಚೀಟಿಯನ್ನೊಮ್ಮೆ ತೆರೆದು ನೋಡಿದೆ. ಅದರಲ್ಲಿ ಒಂದು ದೊಡ್ಡ "೦" (ಸೊನ್ನೆ) ಬರೆದಿದ್ದರು. ಸ್ವಲ್ಪ ನಿರಾಸೆಯಲ್ಲೇ ಆ ಚೀಟಿಯನ್ನು ಜೇಬಿನಲ್ಲಿಟ್ಟುಕೊಂಡು ಹೊರಬಂದೆ.
ಹೊರಗಡೆ ನಿಂತಿದ್ದ ಸ್ನೇಹಿತರೆಲ್ಲ ನನ್ನ ಕರೆದು... "ಎಸ್ಟಿದೆ ಮಗ...?" ಎಂದರು.
ತಾಪಸನೆ ಮಾಡಿದ ವೈದ್ಯರು ಕೊಟ್ಟ ಆ ಚೀಟಿಯನ್ನು ಅವರ ಕೈಗಿಟ್ಟೆ.
ಅದನ್ನು ನೋಡುತ್ತಾ.... "ಮಗ.. ನೀನು ಇಂಜಿನಿಯರಿಂಗ್'ನಲ್ಲಿ ಏನಾದ್ರು ಓದಿದಿಯೋ, ಇಲ್ವೋ.?... ಎಲ್ಲ ಸೆಮಿಸ್ಟರ್ ಓದಿ ಪಾಸಗಿದಿಯೋ ಅಥವಾ ಕಾಪಿ ಹೊಡೆದು ಪಾಸ್ ಆಗಿದಿಯಾ...?" ಎಂದು ಕೀಟಲೆ ಮಾಡಿದರು.

ನಿಮ್ಮೆಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
Share/Save/Bookmark

Sunday, December 20, 2009

ಹೇಳು

"ಹೇಯ್ ಶಿವ, ನಿನ್ನ G-Talk ನಲ್ಲಿ ಹಾಕಿರುವ status message ನ ಅರ್ಥವೇನು..?" ಎನ್ನುತ್ತಾ ನನ್ನ ಸಹೋದ್ಯೋಗಿ ಸ್ನೇಹ, ನನ್ನ ಡೆಸ್ಕ್ ಹತ್ರ ಬಂದಳು. ನಾನು ಯಾವುದೊ ಒಂದು ಸಾಲನ್ನು ಕನ್ನಡದಲ್ಲಿ ಗೀಚಿ ಹಾಕಿಕೊಂಡಿದ್ದೆ. ಅವಳು ಹೊರ ರಾಜ್ಯದವಳು. ಅವಳಿಗೆ ಕನ್ನಡ ಬರುವುದಿಲ್ಲ. ನಾನು ಯಾವುದೇ ಹೊಸ status message ಹಾಕಿದರೂ, ಅದರ ಅರ್ಥವೇನೆಂದು ಕೇಳಿ ತಿಳಿದುಕೊಳ್ಳುತ್ತಾಳೆ. ಹಾಗೆ, "ನನಗೆ ಕನ್ನಡ ಕಲಿಸು" ಎಂದು ಆಗಾಗ ಕೇಳುತ್ತಿರುತ್ತಾಳೆ. ಸಮಯವಿದ್ದಾಗಲೆಲ್ಲ ಸಾಮಾನ್ಯವಾಗಿ ಬಳಸುವ ಪದಗಳನ್ನು ಹೇಳಿಕೊಡುತ್ತಿರುತ್ತೇನೆ.
status message ನ ಅರ್ಥ ಹೇಳಿದೆ. ನಂತರ ಕನ್ನಡದಲ್ಲಿ ಇದಕ್ಕೆ ಏನು ಹೇಳಬೇಕು ?, ಅದಕ್ಕೆ ಏನು ಹೇಳಬೇಕು ? ಎಂದು ಪ್ರೆಶ್ನೆಗಳ ಸುರಿಮಳೆಗೈದಳು. ನಾನು ಎಲ್ಲವನ್ನು ಹೇಳುತ್ತಾ ಹೋದೆ.
"tell me" ಅನ್ನೋದನ್ನ ಕನ್ನಡದಲ್ಲಿ ಹೇಗೆ ಹೇಳ್ತಾರೆ..?
"ನನಗೆ ಹೇಳು" ಎನ್ನಬೇಕು ಎಂದೆ.
ಅವಳು ಅದನ್ನು.. "ನನಗೆ ಹೇಲು" ಎಂದಳು.
ನಗು ಬಂದರೂ, ನಿಯಂತ್ರಿಸಿಕೊಂಡು "ಛೆ ಛೆ ಛೆ.. ಅದನ್ನು ಹಾಗೆ ಹೇಳಬಾರದು. ಅದನ್ನು "ಹೇಳು" ಅಂತ ಹೇಳ್ಬೇಕು" ಅಂದೆ.
ಪುನಃ ಅವಳು "ಳ" ಎನ್ನುವ ಬದಲು "ಲ" ಎನ್ನುತ್ತಿದ್ದಳು.
ಅಸ್ಟರಲ್ಲಿ ಇನ್ನೊಬ್ಬ ಸಹೋದ್ಯೋಗಿ (ಕೇರಳದವನು) ಬಂದ.
ಅವನು ಕೂಡ "ಹೇಳು" ಅನ್ನುವ ಬದಲು "ಹೇಲು, ಹೇಲು" ಎಂದ.
ಅವರಿಬ್ಬರೂ ಎಷ್ಟು ಪ್ರಯತ್ನಿಸಿದರೂ, ಅವರ ಬಾಯಲ್ಲಿ "ಳ" ಬರಲೇ ಇಲ್ಲ.
ಕೊನೆಗೆ, ನನ್ನ ಪ್ರಯತ್ನಗಳೆಲ್ಲ ವಿಫಲವಾದಾಗ, "ದಯವಿಟ್ಟು ಈ ಪದವನ್ನು ಎಲ್ಲೂ ಉಪಯೋಗಿಸಬೇಡಿ" ಎಂದು ಕೈಮುಗಿದು ಬೇಡಿಕೊಂಡೆ. ಆಮೇಲೆ ಯಾರಾದರು ನನ್ನ "ಹೇಳಿಕೊಟ್ಟ ಗುರು ಯಾರು..?" ಎಂದು ಹುಡುಕಿಕೊಂಡು ಬಂದರೆ ಕಷ್ಟ ಅಲ್ವಾ..?. :(

Share/Save/Bookmark

Tuesday, December 1, 2009

ಮಾತು ಮಾತಲ್ಲಿ

ನನ್ನ ಮೊಬೈಲ್'ಗೆ ಒಂದು ಕರೆ ಬಂತು. ಫೋನ್ ನಂಬರ್ ಗಮನಿಸಿದೆ. ಲ್ಯಾಂಡ್'ಲೈನ್ (Landline) ಫೋನಿನಿಂದ ಬಂದಿತ್ತು. ಕೊನೆಯ ಸಂಕೆಗಳು ೪೦೦೦ ಅಂತಿತ್ತು. ಇದು ನನಗೆ ಗೊತ್ತಿರುವ ಫೋನ್ ನಂಬರ್.
ನನ್ನ ಸ್ನೇಹಿತ ಶಿವಪ್ರಸಾದ್ ಬಿ. ಎಂ, ತನ್ನ ಆಫೀಸಿನಿಂದ ನನಗೆ ಆಗಾಗ ಕರೆ ಮಾಡುತ್ತಿದ್ದ ಫೋನ್ ನಂಬರ್.
ನಾವಿಬ್ಬರು ಒಬ್ಬರಿಗೊಬ್ಬರು ಫೋನ್ ಮಾಡಿದರೆ, ಮೊದಲು ಸ್ವಲ್ಪ ತರ್ಲೆ ಮಾತುಗಳನ್ನಾಡಿ ನಂತರ ಕರೆ ಮಾಡಿದ ವಿಷಯಕ್ಕೆ ಬರೋದು.
ಸರಿ ಫೋನ್ ಎತ್ತಿ, 'ಹಲೋ' ಎಂದೆ.
ಆ ಕಡೆಯಿಂದ ನನ್ನ ಸ್ನೇಹಿತ, ಮೊದಲೇ ನಾ ಹೇಳಿದ ರೀತಿಯಲ್ಲಿ ತರ್ಲೆ ಮಾಡುತ್ತಾ ಇಂಗ್ಲೀಷಿನಲ್ಲಿ ಮಾತಾಡಿದ.. ಆ ಸಂಭಾಷಣೆ ಇಂಗ್ಲಿಷಿನಲ್ಲೇ ನಡಿತು.....
ಅದನ್ನು ಇಲ್ಲಿ ಕನ್ನಡದಲ್ಲಿ ಬರಿತ ಇದೀನಿ. ನಮ್ಮ ಸಂಭಾಷಣೆ ಹೀಗಿತ್ತು ನೋಡಿ.
"ಹಲೋ , ನಾನು ಶಿವಪ್ರಕಾಶ್ ಎನ್ನುವವರ ಜೊತೆ ಮಾತಾಡಬಹುದೇ....?" ಎಂದ ನನ್ನ ಗೆಳೆಯ ಶಿವಪ್ರಸಾದ್.
ಆಗ ನಾನು ಹೇಳಿದೆ : "ಇಲ್ಲ, ಸಾಧ್ಯವಿಲ್ಲ. ನೀವು ಅವರ ಜೊತೆ ಮಾತನಾಡಲು ಆಗುವುದಿಲ್ಲ. ಅವರು ಸಾಮಾನ್ಯ ವ್ಯಕ್ತಿಯಲ್ಲ. ಅವರು ದೊಡ್ಡ ಬುಸ್ಸಿನೆಸ್ಸ್ ಮಗ್ನೆಟ್ (Business Magnet). ಅವರು ಈಗ ಬಿಲ್ ಗೇಟ್ಸ್ ಜೊತೆ ಮೀಟಿಂಗ್'ನಲ್ಲಿ ಇದಾರೆ. ಅವರ ಜೊತೆ ನೀವು ನೇರವಾಗಿ ಮಾತನಾಡಲು ಸಾಧ್ಯವಿಲ್ಲ. ನಾನು ಶಿವಪ್ರಕಾಶ್ ಅವರ ಸಹೋದರ. ಅವರು ಅಸ್ಟು ಸುಲಭವಾಗಿ ನಿಮಗೆ ಮಾತನಾಡಲು ಸಿಗುವುದಿಲ್ಲ. ಮೊದಲು ಅಪಾಯಿಂಟ್ಮೆಂಟ್ ತಗೋಳಿ. ನಂತರ ಸಂದರ್ಶಿಸಿ. ಏನಾದ್ರು ತುಂಬಾ ಮುಖ್ಯವಾದ ವಿಷಯ ಇದ್ರೆ ಹೇಳಿ. ಅವರಿಗೆ ಬಿಡುವು ಸಿಕ್ಕಾಗ ಹೇಳುತ್ತೇನೆ..' ಎಂದು ಅವನಿಗೆ ಮಾತಾಡಲು ಬಿಡದೆ ಒಂದೈದು ನಿಮಿಷ ಹೀಗೆ ಚನ್ನಾಗಿ ದಬಾಯಿಸಿದೆ.
ಅ ಕಡೆಯಿಂದ ನನ್ನ ಗೆಳೆಯ... "ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ ಸರ್, ಅವರ ಜೊತೆ ಸ್ವಲ್ಪ ಮಾತನಾಡಬೇಕಿತ್ತು. ಅವರು ತಮ್ಮ Resume ಅನ್ನು Job Portal ನಲ್ಲಿಹಾಕಿದ್ದಾರೆ. ಅದಕ್ಕೆ ಹೊಂದುವ ಕೆಲಸ ನಮ್ಮ ಕಂಪನಿಯಲ್ಲಿ ಇತ್ತು. ಅದಕ್ಕೆ ಕರೆ ಮಾಡಿದಿವಿ ಸರ್...."
ಈ ಸಾರಿ ಮಾತಾಡಿದಾಗ ಅವನ ಧ್ವನಿಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಯಾಕೋ ಸಂದೇಹ ಬಂತು. ಮತ್ತೊಮ್ಮೆ ಕರೆಬಂದ ಸಂಕೆಯನ್ನು ಗಮನಿಸಿದೆ.
ಅಯ್ಯೋ... ಇವನು ನನ್ನ ಗೆಳೆಯನಲ್ಲ. ಅವನು ಫೋನ್ ಮಾಡಲು ಉಪಯೋಗಿಸುತ್ತಿದ್ದ ಫೋನ್ ನಂಬರಿಗೂ, ಇದಕ್ಕೂ ಸ್ವಲ್ಪವೇ ಸ್ವಲ್ಪ ವ್ಯತ್ಯಾಸವಿತ್ತು. ಬೇರೆ ಯಾರೋ ವ್ಯಕ್ತಿಗೆ, ಸುಮ್ಮನೆ ಸಿಕ್ಕಾಪಟ್ಟೆ ತಲೆ ತಿಂದು ಬಿಟ್ಟಿದ್ದೇನೆ. ಅಪರಿಚಿತ ವ್ಯಕ್ತಿಯೊಡನೆ ನಾನಾಡಿದ ಮಾತುಗಳನ್ನು ನೆನೆದು ನಗು ಬಂತು.
ಮಾಡಿದ ತಪ್ಪಿಗೆ, ಕ್ಷಮೆ ಕೇಳಿ ಫೋನ್ ಇಟ್ಟೆ.

ಗೆಳೆಯರೇ ಹಾಗು ಗೆಳತಿಯರೇ (ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ.... ಸ್ವಲ್ಪ ಜಾಸ್ತಿ ಆಯ್ತು ಅಲ್ವಾ...?),
ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟು(ಕೈಯಿಟ್ಟು), ಒಂದು ವರ್ಷವಾಗುತ್ತ ಬಂತು.
ನೀವು ನನ್ನನ್ನು ಹಾಗು ನನ್ನ ಲೇಖನಗಳನ್ನು ಪ್ರೋತ್ಸಾಹಿಸುತ್ತಾ ಬಂದಿದಿರಿ.
ನಿಮ್ಮ ಸಹಕಾರ ಹೀಗೆ ಇರವುದೆಂದು ಆಶಿಸುತ್ತೇನೆ.

ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್
Share/Save/Bookmark