ಅಂದು ನಾನು ಕೆಲವು ಕಾರಣಗಳಿಂದ ಹತ್ತಿರದ ಪಟ್ಟಣಕ್ಕೆ ಹೋಗಲು ತಯಾರಿ ನಡೆಸುತ್ತಿದ್ದೆ.
ನಾನು ಪಟ್ಟಣಕ್ಕೆ ಹೋಗುವುದು ತಿಳಿದು, ಪಕ್ಕದ ಮನೆಯ ಇಬ್ಬರು ಹುಡುಗರು ನನ್ನ ಹತ್ತಿರ ಬಂದು ಕೇಳಿದರು..
"ಅಣ್ಣ, ಪೇಟೆಗೆ ಹೋಗುತ್ತಿದ್ದಿಯಾ ? "
"ಹೌದು" ಅಂದೆ ನಾನು,
ಅವರು : "ಅಣ್ಣ ನಮ್ಮ PUC ಪರೀಕ್ಷೆಯ ಫಲಿತಾಂಶ ಬಂದಿದೆ ಅಂತೆ. ನಮ್ಮ ಪರೀಕ್ಷಾ ಫಲಿತಾಂಶವನ್ನು ಇಂಟರ್ನೆಟ್ ನಲ್ಲಿ ನೋಡ್ಕೊಂಡು ಬರ್ತಿರಾ ?."
ನಾನು: "ಆಯ್ತು. ನಿಮ್ಮ ರೆಜಿಸ್ಟರ್ ನಂಬರ್ ಕೊಡಿ.. ನೋಡ್ಕೊಂಡು ಬರ್ತೀನಿ."
ಅವರು: "ಥ್ಯಾಂಕ್ಸ್ ಅಣ್ಣ ..."
ನಾನು: " its ok."
(ನನ್ನ ಊರು ಅತ್ತ ಪಟ್ಟಣವಲ್ಲ,
ಇತ್ತ ಹಳ್ಳಿಯಲ್ಲ,
ನನ್ನುರಲ್ಲಿ ಅಂತರ್ಜಾಲ ಶೋಧಿಸಲು (internet browse), ಒಂದು ಸೈಬರ್ ಸೆಂಟರ್ ಕೂಡ ಇರಲಿಲ್ಲ. )
ನಾನು ಪೇಟೆಗೆ ಹೋಗಿ, ಅಲ್ಲಿ ನನ್ನ ಕೆಲಸ ಕಾರ್ಯಗಳನ್ನು ಮುಗಿಸಿ, ನಂತರ ಬ್ರೌಸಿಂಗ್ ಸೆಂಟರ್ ಗೆ ಹೋದೆ...
ಬ್ರೌಸಿಂಗ್ ಸೆಂಟರ್ ಗೆ ಹೋಗಿ ಅವರ ರೆಜಿಸ್ಟರ್ ನಂಬರ್ ಕೊಟ್ಟೆ.
(ಕೆಲವು ಬ್ರೌಸಿಂಗ್ ಸೆಂಟರ್ ನಲ್ಲಿ ಫಲಿತಾಂಶ ತೋರಿಸುವ ಸೈಟ್ ಗಳನ್ನೂ ನಿಷೇದ (ಬ್ಲಾಕ್) ಮಾಡಿರುತ್ತಾರೆ, ಆದಕಾರಣ ಅವರೇ ಪ್ರತಿ ಫಲಿತಾಂಶಕ್ಕೆ ಹತ್ತು ರುಪಾಯಿಗಳನ್ನು ಪಡೆದು ಫಲಿತಾಂಶ ಹೇಳುತ್ತಾರೆ. ನಾನು ಹೋಗಿದ್ದು ಅದೇ ತರಹದ ಬ್ರೌಸಿಂಗ್ ಸೆಂಟರ್ ಗೆ).
ಆ ಬ್ರೌಸಿಂಗ್ ಸೆಂಟರ್ ನವರು ನಾನು ಕೊಟ್ಟ ಎರಡು ನಂಬರ್ ಗಳನ್ನು ಆ ತೆಗೆದುಕೊಂಡು,
ಸೈಟ್ ನಲ್ಲಿ ಎಂಟರ್ ಮಾಡಿ.
ನನ್ನನ್ನು "ಫಲಿತಾಂಶ ಬರಿದುಕೋ, ಹೇಳುತ್ತೇನೆ" ಅಂದರು...
ಸರಿ, ನಾನು ಪೆನ್ನು ಹಾಗು ಒಂದು ಪುಟ್ಟ ಕಾಲಿ ಹಾಳೆಯನ್ನು ಹಿಡಿದು, ಅವರ ಫಲಿತಾಂಶವನ್ನು ಬರೆದುಕೊಳ್ಳ ತೊಡಗಿದೆ.
ಆ ಆಪರೇಟರ್ ಹೇಳಿದ.
"ಹೆಸರು : ಅಭ್ಯರ್ತಿ ೧
ಫಲಿತಾಂಶ: ಫೇಲ್."
ನಾನು ಮನಸಲ್ಲೇ ಅಯ್ಯೋ ಪಾಪ ಅಂದುಕೊಂಡೆ, ಸರಿ ಅಂಕಗಳನ್ನು ಹೇಳಿ ಅಂತ ಕೇಳಿದೆ..
ಸರಿ ಬರೆದುಕೊಳ್ಳಿ ಅಂದ..
"ಇಂಗ್ಲಿಷ್ : ೫" ಅಂದ
ಇಷ್ಟು ಕಮ್ಮಿ ಅಂಕವೇ ಅಂದುಕೊಳ್ಳುತ್ತ, ಬರೆದುಕೊಂಡೆ..
ಆಮೇಲೆ ಅವನು ನನ್ನ ಮುಖವನ್ನೇ ನೋಡುತ್ತಾ
"ಕನ್ನಡ : ೪ , ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ... ಏನ್ರಿ ಇಷ್ಟು ಕಮ್ಮಿ ಮಾರ್ಕ್ಸ ? ಅದು ಕನ್ನಡದಲ್ಲಿ..."
ನಾನು ಅವರಿಗೆ: "ಇದು ನನ್ನ ಫಲಿತಾಂಶವಲ್ಲ, ಇದು ನನ್ನ ಪಕ್ಕದ ಮನೆ ಹುಡುಗನದು" ಅಂದೆ...
ಅವನು ನಂಬಿದನೋ ಇಲ್ಲವೊ ಗೊತ್ತಿಲ್ಲ, ನಾನು ಮಾತ್ರ ಅವರಿಗೆ ದಡ್ದನಂತೆ ಕಾಣಿಸಿದೆ...
ಸರಿ, ಹೀಗೆ ಎಲ್ಲ ವಿಷಯಗಳ ಅಂಕಗಳನ್ನು ಬರೆದುಕೊಂಡೆ..
ಎಲ್ಲ ವಿಷೆಯಗಳ ಅಂಕಗಳು ಸೇರಿ ೫೦ ಆಗಿತ್ತು...
ನಾನು ಸುಸ್ತೋ ಸುಸ್ತು..
ಅಲ್ಲಿರುವವರಿಗೆಲ್ಲ ನನ್ನ ಮೇಲೆಯೇ ಕಣ್ಣು..
ಸರಿ ಈಗ ಅಭ್ಯರ್ತಿ ೨, ಫಲಿತಾಂಶ ಬರೆದುಕೊಳ್ಳಿ ಅಂದ..
ನಾನು ಹೇಳಿ ಅಂದೆ.
ಫಲಿತಾಂಶ : ಫೇಲ್
ನಾನು ಮನಸಲ್ಲೇ, ಇವನು ಕೂಡ ನನ್ನ ಮರ್ಯಾದೆ ಕಳಿತ ಇದಾನಲ್ಲಪ್ಪ ಅಂದುಕೊಂಡೆ, ಸರಿ ಅಂಕಗಳನ್ನು ಹೇಳಿ ಅಂದೆ.
"ಇಂಗ್ಲಿಷ್: ೬",
ಅವನು ಮತ್ತೊಮ್ಮೆ ನನ್ನ ಮುಖವನ್ನೇ ದಿಟ್ಟಿಸಿ ನೋಡುತ್ತಾ
"ಕನ್ನಡ : ೨ " ಅಂದ...
ನಾನು ಪುನಃ ಸಂಕಟದಲ್ಲಿ ಅವರಿಗೆ " ರೀ, ನಿಜವಾಗಿಯೂ ಇದು ನನ್ನ ಫಲಿತಾಂಶವಲ್ಲ "
"ಹೋಗ್ಲಿ ಬಿಡಿ, ಬೇರೆ ವಿಷೆಯಗಳ ಅಂಕಗಳನ್ನು ಬರೆದುಕೊಳ್ಳಿ" ಅಂದ..
ನಾನು ಬ್ರೌಸಿಂಗ್ ಸೆಂಟರ್ ಗೆ ಬಂದ ಕರ್ಮಕ್ಕಾಗಿ ಎಲ್ಲ ವಿಷಯಗಳ ಅಂಕಗಳನ್ನು ಬರೆದುಕೊಂಡೆ.
ಇವನ ಎಲ್ಲ ವಿಷಯಗಳ ಅಂಕಗಳು ಸೇರಿ, ೩೫ ಆಗಿತ್ತು.
ಯಾವುದೇ ವಿಷಯದಲ್ಲಿ ಒಬ್ಬರ ಅಂಕಗಳು ಹತ್ತರ ಗಡಿ ದಾಟಿರಲಿಲ್ಲ ( ಎಲ್ಲ single digit)
ಸರಿ ಅವರಿಬ್ಬರ ಫಲಿತಾಂಶ ಪಟ್ಟಿ ಹಿಡಿದು, ನನ್ನ ಊರಿಗೆ ಹೊರೆಟೆ.
ಊರ ತಲುಪಿದ ಬಳಿಕ, ನಾನು ಅವರ ಹತ್ತಿರ ಹೋಗಲಿಲ್ಲ .
ಅವರೇ, ನಾನು ಪೇಟೆಯಿಂದ ಬಂದಿರುವ ವಿಷಯ ತೆಳಿದು ಓಡೋಡಿ ಬಂದರು..
ನಾನು ಅವರನ್ನು ಯಾರು ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋದೆ..
"ಅಣ್ಣ, ನಮ್ಮಿಬ್ಬರ ಫಲಿತಾಂಶ ಏನಾಯ್ತು ?"
"ಇಬ್ಬರು ಫೇಲ್ ಆಗಿದ್ದೀರಿ" ಅಂದೆ.
"ಯಾಕೋ ಹೀಗಾಯ್ತು ?.. " ಅಂದೆ
ಅವರು.. "ನಮಗೆ ಓದೋ ಇಂಟರೆಸ್ಟ್ ಇರ್ಲಿಲ್ಲ ಅಂದ್ರು."
ನಾನು: "ಫೇಲ್ ಆದ್ರಿ ಅಂತ ಬೇಜಾರ್ ಮಾಡ್ಕೋಬೇಡಿ ಅಂದೆ..."
ಅವರು: "ನೀವೇನು ಅಸ್ಟೊಂದು ಸೀರಿಯಸ್ ಆಗಿ ತೊಗೋಬೇಡಿ, ನಮಗೆ ಮುಂಚೆನೇ ಗೊತ್ತಿತ್ತು, ನಮಗೆ ಇದೆಲ್ಲ ಲೆಕ್ಕಕಿಲ್ಲ.."
ನನಗಿಂತ ಅವರೇ ತುಂಬಾ ಧೈರ್ಯದಿಂದ ಇದ್ದದ್ದು ನೋಡಿ ನನಗೆ ವಿಚಿತ್ರ ಅನಿಸಿತು..
ಸರಿ, ತೆಗೆದುಕೊಳ್ಳಿ ನಿಮ್ಮ ನಿಮ್ಮ ಅಂಕಪಟ್ಟಿ ಎಂದು ಅವರಿಗೆ ಅವರ ಅಂಕಪಟ್ಟಿಯನ್ನು ಕೊಟ್ಟೆ.
ಅವರು ಅಂಕಗಳನ್ನು ನೋಡುತ್ತಾ, ಒಬ್ಬ ಇನ್ನೊಬ್ಬನಿಗೆ
"ಲೋ, ನನಗೆ ಗಣಿತದಲ್ಲಿ ನಿನಗಿಂತ ೪ ಅಂಕ ಜಾಸ್ತಿ" ಅಂತ ಕುಶಿಯಿಂದ ಹೇಳಿದ..
ಆಗ ಇನ್ನೊಬ್ಬ ಹೇಳಿದಾ,
" ಲೋ, ಕನ್ನಡದಲ್ಲಿ ನಿನಗಿಂತ ನನಗೆ ೨ ಅಂಕ ಜಾಸ್ತಿ.." ಅಂದ.
ಅವರಿಗೆ ಫೇಲ್ ಆದ ಯಾವುದೇ ದುಃಖ ಇರಲಿಲ್ಲ. ಅದರ ಬದಲಾಗಿ ಅವರು "ನನಗೆ ಅದರಲ್ಲಿ ಹೆಚ್ಚು ಅಂಕ, ನನಗೆ ಇದರಲ್ಲೇ ಹೆಚ್ಚು ಅಂಕ" ಅಂತ ಕಚ್ಚಡುತ್ತಿದ್ದರು...
ನನಗೆ ಇದ್ದಕ್ಕಿದ್ದ ಹಾಗೆ ನಗು ಬಂದುಬಿಟ್ಟಿತ್ತು...