Thursday, September 16, 2010

Bureaucrats

ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೀತಾ ಇತ್ತು. ಮೊದಲ ಸುತ್ತಿನಲ್ಲಿ ತೇರ್ಗಡೆಯಾಗಿ ಎರಡನೇ ಸುತ್ತಾದ Group Discussion ಗೆ ನನ್ನ ಇಬ್ಬರು ಸ್ನೇಹಿತರಾದ ತರುಣ್ ಮತ್ತು ನವೀನ ಅರ್ಹತೆ ಪಡೆದಿದ್ದರು.
ಮೇಲ್ವಿಚಾರಕರು ಎರಡನೇ ಸುತ್ತಿಗೆ ಅರ್ಹತೆ ಪಡೆದ ಎಂಟು ಅಭ್ಯರ್ಥಿಗಳ ಗುಂಪು ಮಾಡಿ, ಚರ್ಚಿಸಬೇಕಾಗಿದ್ದ ವಿಷಯ "Should bureaucrats rule the nation?" ಎಂದು ತಿಳಿಸಿದರು.
ನನ್ನ ಇಬ್ಬರು ಸ್ನೇಹಿತರು ಒಂದೇ ಗುಂಪಿನಲ್ಲಿ ಇದ್ದರು.
ನನ್ನ ಇಬ್ಬರು ಸ್ನೇಹಿತರಿಗೂ "Bureaucrats" ಎನ್ನುವ ಪದದ ಅರ್ಥ ಗೊತ್ತಿರಲಿಲ್ಲ. ಸುಮ್ಮನಿರುವುದಕ್ಕಿಂತ ಕೇಳಿಬಿಡುವುದೇ ವಾಸಿಯೆಂದು ನವೀನ ಮೇಲ್ವಿಚಾರಕರಲ್ಲಿ "Bureaucrats" ಎನ್ನುವ ಪದದ ಅರ್ಥ ತಿಳಿಸುವಂತೆ ಮನವಿ ಮಾಡಿದ. ಆದರೆ, ಆ ಮೇಲ್ವಿಚಾರಕರು "ಕ್ಷಮಿಸಿ, ನಾವು ಹೇಳುವ ಹಾಗಿಲ್ಲ" ಎಂದು ನಯವಾಗಿ ತಿರಸ್ಕರಿಸಿದರು. ಬೇರೆ ದಾರಿಯಿಲ್ಲದೆ ನವೀನ ಸುಮ್ಮನಾದ.
ಚರ್ಚೆ ಪ್ರಾರಂಭವಾಯ್ತು. ನನ್ನ ಇನ್ನೊಬ್ಬ ಸ್ನೇಹಿತ ತರುಣ್ ಆ ಪದದ ಅರ್ಥ ಗೊತ್ತಿರದ ಕಾರಣ, ಅವನು ಬೇರೆಯವರು ಮಾತಾಡುವುದನ್ನು ಗ್ರಹಿಸಿಕೊಂಡು, ಅದೇ ಸಾಲಿಗೆ ತನ್ನ "I totally agree with you my friend" ಸೇರಿಸಿ ಹ್ಯಾಗೋ ಹೇಳುತ್ತಿದ್ದ. ಆದರೆ ನಮ್ಮ ನವೀನ ಮಾತ್ರ ಪದದ ಅರ್ಥ ತಿಳಿಯದೆ ಸುಮ್ಮನೆ ಕೂತುಬಿಟ್ಟಿದ್ದ.
ಚರ್ಚೆಯ ಸಮಯ ಮುಗಿಯುತ್ತ ಬಂತು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು (ನನ್ನ ಸ್ನೇಹಿತ ನವೀನ ಒಬ್ಬ ಬಿಟ್ಟು).
ಕೊನೆಯಲ್ಲಿ ಸುಮ್ಮನೆ ಕೂತಿದ್ದ ನನ್ನ ಸ್ನೇಹಿತ ನವೀನನನ್ನು ನೋಡಿದ ಮೇಲ್ವಿಚಾರಕರು "Do you have any questions?" ಎಂದರು.
"Yes. May i know the meaning of Bureaucrats ??" ಎಂದ ನಮ್ಮ ನವೀನ.
Share/Save/Bookmark