ಇಲ್ಲಿ ನಾನು ಕಳೆದಿದ್ದು ಸರಿಯಾಗಿ ಮೂರು ವರ್ಷಗಳು.
ಆದ್ರೆ ನೆನಪುಗಳು ಸಾವಿರಾರು. ನನ್ನ ನೆನಪಿನ ಪುಟದ ಇನ್ನೊಂದು ಹಾಳೆ ನಿಮ್ಮ ಮುಂದೆ.
ಒಂದ್ಸಾರಿ ಬೋಗಾದಿಯಿಂದ (ಮೈಸೂರಿನಲ್ಲಿ ಇರುವ ಒಂದು ಬಡಾವಣೆ) ನಾನು, ನಟ, ರಾಘು ಮೂವರು ಸೇರಿ ತುರ್ತಾಗಿ ಜಯಲಕ್ಷ್ಮಿಪುರಂ ಕಡೆ ಹೋಗಬೇಕಾಗಿತ್ತು,
ಬೊಗದಿಯಿಂದ ಜಯಲಕ್ಷ್ಮಿಪುರಂಗೆ ಜಾಸ್ತಿ ಅಂದ್ರು ೩ ಕಿಲೋಮೀಟರು ಆಗಬಹುದು.
ಆದ್ರೆ ಸರಿಯಾದ ಬಸ್ಸುಗಳ ವ್ಯವಸ್ಥೆ ಇರ್ಲಿಲ್ಲ.
ಸದ್ಯಕ್ಕೆ ಇದ್ದದ್ದು ನನ್ನದೊಂದು ಬೈಕ್...
ಮೂವರು ಒಂದು ಬೈಕಿನಲ್ಲಿ ಹೋಗುವುದು ಅಪರಾಧ. ಆದ್ರೆ ಏನು ಮಾಡೋದು ನೀವೇ ಹೇಳಿ, ೩ ಕಿಲೋಮೀಟರು ಹೋಗೋಕೆ ಬಸ್ಸಿಗಾಗಿ ಗಂಟೆಗಳ ಕಾಲ ಕಾಯಬೇಕಾ ...?
ಸರಿ, ಮೂವರು ಒಂದು ಬೈಕಿನಲ್ಲಿ ಕುಳಿತು ಹೊರೆಟೆವು..
ಮುಖ್ಯರಸ್ತೆಯಲ್ಲಿ ಹೋದ್ರೆ ಮಾವ ಇರ್ತಾನೆ ಅಲ್ವಾ... ? (ಮಾವ ಅಂದ್ರೆ ನಮ್ಮ ಹುಡುಗರ ಭಾಷೆಯಲ್ಲಿ ಪೋಲಿಸ್ ಅಂತ :D ).
ಆದಕಾರಣ ಅಡ್ಡದಾರಿಯಲ್ಲಿ ಹೋಗೋದಕ್ಕೆ ಶುರು ಮಾಡಿದ್ವಿ..
ನಮ್ಮ ಹಣೆಬರಹಕ್ಕೆ ಮಾವ ಅಡ್ಡ ರಸ್ತೆಯಲ್ಲಿ ಅಡ್ಡ ಹಾಕೊಂಡು ಕಾಯ್ತಾ ಇದ್ದ..
ತಪ್ಪಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನಿಲ್ಲಿಸಿಬಿಟ್ಟ..
ಗಾಡಿ ಹೊಡೆಯುತ್ತಿದ್ದ ನಾನು, ಬೇರೆ ದಾರಿಯಿಲ್ಲದೆ ಗಾಡಿ ನಿಲ್ಲಿಸಿದೆ....
ಮಾವ ನಮ್ಮನ್ನು ಪ್ರೀತಿಯಿಂದ ಕರೆದು, ಗಾಡಿಯ ಕೀಲಿಯನ್ನು ಕೈಗೆತ್ತಿಕೊಂಡು... "ಕಟ್ಟಪ್ಪ ಫೈನ್" ಅಂದ..
(ನಾನು ಮನಸಲ್ಲೇ ಅಂದುಕೊಂಡೆ, ನೀವು (ಪೊಲೀಸರು) ಹತ್ತು ಹತ್ತು ಜನ ಒಂದೇ ಬೈಕಿನಲ್ಲಿ ಹೋದರೆ ಪೆರೇಡ್.. ನಾವು ಹೋದರೆ ಅಪರಾಧ... P )
ನಾವು ಏನು ಕೇಳಿಕೊಂಡರು ಮಾವ ಬಿಡುವ ಸ್ತಿತಿಯಲ್ಲಿರ್ಲಿಲ್ಲ..
ಬೇರೆ ದಾರಿ ಇಲ್ಲದೆ ಫೈನ್ ಕಟ್ಟಿದ್ವಿ...
ರಸೀದಿ ಕೊಟ್ರೋ, ಇಲ್ವೋ ಅಂತ ಸರಿಯಾಗಿ ನೆನಪಿಲ್ಲ....
ಸರಿ, ಮತ್ತೆ ಮೂವರು ಬೈಕ್ ಹತ್ತಿ ಹೊರಡುತ್ತಿರುವಾಗ....
ಅವರ ಗುಂಪಿನಲ್ಲೇ ಇದ್ದ ಇನ್ನೊಬ್ಬ ಮಾವ "ನಿಲ್ಲಿಸ್ರೋ..." ಅಂತ ಕೂಗಿದ..
ನಾವು ... "ಸಾರ್, ನಾವು ಆವಾಗಲೇ ಫೈನ್ ಕಟ್ಟಿದಿವಿ"
"ಫೈನ್ ಕಟ್ಟಿದ ಮಾತ್ರಕ್ಕೆ ನಮ್ಮ ಮುಂದೇನೆ ಟ್ರಿಪ್ಸ್ ಹೋಗೋದ...?... ಸ್ವಲ್ಪ ಮುಂದೆ ಹೋಗಿ, ಹತ್ತಿ..." ಅಂದ
ನಮ್ಮ ಮಾವನ ಸಲಹೆಯಂತೆ ಮುಂದೆ ಹೋಗಿ ಮತ್ತೆ ಮೂವರು ಒಂದೇ ಬೈಕಿನಲ್ಲಿ ಹತ್ತಿ ಹೊರಟೆವು...
ಮನವಿ: ಈ ಲೇಖನ ಯಾರಾದ್ರೂ ಪೋಲೀಸಿನವರು ಓದಿದ್ರೆ ಕ್ಷಮಿಸಿಬಿಡಿ.. ಏನೋ ಹುಡುಗ ತಿಳಿಯದೆ ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದಾನೆ ಅಂತ ಹೊಟ್ಟೆಗೆ ಹಕೊಂಬಿಡಿ... ಇಂತಿ ನಿಮ್ಮ ಪ್ರೀತಿಯ ಆಳಿಯ...