ಕಡಲ ತೀರದಿ ಕೂತು,
ಕಾಲ ಬದಲಾಗುತಿರುವುದನು ಕಂಡೆ...
ಕುಡಿದ ಅಮಲಿನಲಿ,
ಸೀಸೆಯನ್ನು ಧರೆಗೆ ಜೋರಾಗಿ ಅಪ್ಪಳಿಸಿ,
ಪುಡಿ ಪುಡಿ ಮಾಡಿ,
ವ್ಯಾಘ್ರನಂತೆ ವರ್ತಿಸಿ ಹೋದ,
ಯುವಕನ ಜಾಗದಲ್ಲಿ,
ಮುದ್ದಾದ ಪುಟಾಣಿ ಮಗುವೊಂದು,
ಅಂಬೆಗಾಲಿಡುತ ಆ ಜಾಗ ತಲುಪುತಿರಲು,
ಓಡೋಡಿ ಬಂದ ಯಾರೋ ಇನ್ನೊಬ್ಬ ಯುವಕ,
ಮಗುವನ್ನು ಎತ್ತಿ, ತಂದೆಯ ಮಡಿಲಿಗೆ ತಲುಪಿಸಿ,
ಮರಳಲ್ಲಿ ಮರುಳ ಹರಡಿದ,
ಪುಡಿಪುಡಿಯಾದ ಸೀಸೆ ಚೂರುಗಳನೆತ್ತಿ,
ಕಸದ ತೊಟ್ಟಿಗೆ ತಲುಪಿಸುತಿರುವುದನು ನೋಡುತಿರುವ,
ಮುದ್ದು ಮಗುವಿನ ಕಣ್ಣಿನಲಿ...
ಕಾಲ ಬದಲಾಗುತಿರುವುದನು ಕಂಡೆ...
==

ಉದ್ಯಾನವನದಿ ಕೂತು,
ಕಾಲ ಬದಲಾಗುತಿರುವುದನು ಕಂಡೆ...
ಕಾಮದ ಅಮಲಿನಲಿ,
(ಅಮರ)ಪ್ರೇಮಿಗಳಿಬ್ಬರು,
ಉದ್ಯಾನವನದಲಿ,
ಯಾರಿಗೂ ಲೆಕ್ಕಿಸದೆ,
ಹುಚ್ಚರಂತೆ ವರ್ತಿಸುತಿರಲು,
ಅಲ್ಲೇ ಇದ್ದ ಪುಟ್ಟ ಮಗುವಿನ,
ಮುಖದಿ ಮೂಡಿದ
ಭಾವನೆಗಳಲ್ಲಿ
ಕಾಲ ಬದಲಾಗುತಿರುವುದನು ಕಂಡೆ...
==

ಗಣಕಯಂತ್ರದ ಮುಂದೆಯೂ ಕೂತು,
ಕಾಲ ಬದಲಾಗುತಿರುವುದನು ಕಂಡೆ...
ವಿದೇಶದಿ ವಿದ್ಯಾಭ್ಯಾಸಕ್ಕೆಂದು,
ಸಾಲ ಸೋಲ ಮಾಡಿ ಕಳಿಸಿದ,
ಮಗನ ಫೇಸ್-ಬುಕ್ ಖಾತೆಯ
ಅಪ್ಡೇಟ್ ಗಳಲಿ,
ಸೀಸೆಯ ಹಿಡಿದು,
ಬಾಲೆಯ ಜೊತೆಗೆ ಬಿಗಿದಪ್ಪಿಗೊಂಡು,
'F*** U' ಎನ್ನುವ ಸನ್ನೆಯ ಚಿತ್ರಗಳ,
ನೋಡಿದ ತಂದೆಯು
ಮನದಾಳದ ನೋವಿನಲಿ,
ಕಾಲ ಬದಲಾಗುತಿರುವುದನು ಕಂಡೆ...
==

ಕೂತು ಕೂತು ಸಾಕಾಗಿ,
ಅಲೆಮಾರಿಯಂತೆ ತಿರುಗುತಿರುವಾಗಲು,
ಕಾಲ ಬದಲಾಗುತಿರುವುದನು ಕಂಡೆ...
ಕಾಲ ಬದಲಾಗುತಿರುವುದನು ಕಾಣುತ,
ಅತ್ತಲೂ ಹೋಗದ,
ಇತ್ತಲೂ ಬರಲಾರದ,
ನನ್ನಂತಹ ಯುವಕರ,
ಸ್ಥಬ್ಧ ಮುಖದ ಹಿಂದಿರುವ ,
ಸಾವಿರಾರು ಪ್ರಶ್ನೆಗಳಲಿ
ಕಾಲ ಬದಲಾಗುತಿರುವುದನು ಕಂಡೆ...!!!
(ಚಿತ್ರ ಕೃಪೆ: ಅನಿಲ್ ಬೆಡಗಿ ಹಾಗು ದಿಗ್ವಾಸ್ ಹೆಗಡೆ)