Monday, August 12, 2013

ಕೆ. ಅರ್. ಎಸ್ ಜಲಾಶಯದ ಹಿನ್ನೀರು

ಕೆ. ಅರ್. ಎಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಹೇಮಾವತಿ ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರಿವ ಜಲಾಶಯವೇ ಕನ್ನಂಬಾಡಿ ಕಟ್ಟೆ ಅಥವಾ ಕೃಷ್ಣರಾಜಸಾಗರ. ಇದು ಬುದ್ದಿಶಕ್ತಿಗೆ ಹೆಸರಾದ ಭಾರತರತ್ನ ವಿಶ್ವೇಶ್ವರಯ್ಯನವರ ಕೊಡುಗೆಯಲ್ಲಿ ಪ್ರಮುಖವಾದದ್ದಾಗಿದೆ.

ವಿಶ್ವೇಶ್ವರಯ್ಯ ಎಂದ ತಕ್ಷಣ ನೆನಪಿಗೆ ಬರುವುದು ಅವರ ಯುವ ಶಕ್ತಿಯನ್ನು ಬಡಿದೆಬ್ಬಿಸುವ ಮಾತು. ಹೀಗೆ ಒಮ್ಮೆ, ವಿಶ್ವೇಶ್ವರಯ್ಯನವರ ಆಪ್ತರು ಕೇಳಿದರು "ಸರ್, ಒಂದು ವೇಳೆ ನೀವು ಇಂಜಿನಿಯರ್ ಆಗದೇ, ಇಲ್ಲಿ ಕಸಗುಡಿಸುವ ಕೆಲಸ ದೊರೆತಿದ್ದರೆ ಭಾರತರತ್ನ ಸಿಕ್ತಾ ಇತ್ತಾ ?" ಅಂತ ಕೇಳಿದ್ರು. ಅದಕ್ಕೆ ವಿಶ್ವೇಶ್ವರಯ್ಯನವರು ಮುಗುಳ್ನಕ್ಕು "ನಾನು ಒಂದು ವೇಳೆ ಇಂಜಿನಿಯರ್ ಆಗದೆ ಕಸಗುಡಿಸುವ ಕೆಲಸ ದೊರೆತಿದ್ದರೆ ಆ ಕೆಲಸಕ್ಕೆನೆ ಭಾರತರತ್ನ ಕೊಡಬೇಕು" ಹಾಗೆ ಮಾಡ್ತಾ ಇದ್ದೆ ಎಂದರಂತೆ. ಇದನ್ನು ಕೇಳಿದ ವ್ಯಕ್ತಿ ತಬ್ಬಿಬ್ಬನಾದನಂತೆ. ಎಷ್ಟು ಅಧ್ಬುತ ಅಲ್ವಾ ಅವರ ಮಾತು?. ವಿಶ್ವೇಶವರಯ್ಯನವರು ಹೇಳಿದ ಮಾತು ಅಕ್ಷರಶಃ ನಿಜ ಏಕೆಂದೆರೆ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಜವಾದ ಪ್ರಾಮಾಣಿಕತನ, ಶ್ರದ್ದೆ, ಭಿನ್ನತೆ, ಛಲ ಇದ್ದರೆ ಖಂಡಿತ ಅವರ ಮಾತು ಸುಳ್ಳಲ್ಲ. 

ಎಲ್ಲರಿಗೂ ಈ ರೀತಿಯ ಭಿನ್ನವಾದ ಯೋಚನೆಗಳು ಬರುವುದು ಅಸಾಧ್ಯವೇ ಸರಿ!!. ಅದಕ್ಕೆ ಹೇಳೋದು "ಎಲ್ಲಾ ಬುದ್ದಿವಂತರು ಸೃಜನಶೀಲರಲ್ಲ ಆದರೆ ಎಲ್ಲಾ ಸೃಜನಶೀಲರು ಬುದ್ದಿವಂತರೇ ಆಗಿರುತ್ತಾರೆ". ಮತ್ತೊಮ್ಮೆ ವಿಶ್ವೇಶ್ವರಯ್ಯನವರು ಮಾಡಿದ ಸಾಧನೆಯನ್ನು ಸ್ಮರಿಸುತ್ತಾ ನಾ ಕಂಡ ಕೆ. ಅರ್. ಎಸ್ ಜಲಾಶಯದ ಹಿಂಬಾಗದ ಒಂದು ಲಘು ಪ್ರವಾಸ ಹೀಗಿತ್ತು. 

ಫ್ರೆಂಡ್ಸ್, ಈ ಕೆ. ಅರ್. ಎಸ್. ಜಲಾಶಯ ನಿರ್ಮಾಣಕ್ಕೆ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಆ ಊರಲ್ಲಿ ಆರುನೂರು ವರ್ಷಗಳಷ್ಟು ಹಳೆಯದಾದ ಜೋಳರ ಕಾಲದ ವೇಣುಗೋಪಾಲ ಸ್ವಾಮಿ ದೇವಾಲಯವು ಇತ್ತು. ಈಗ ಕಾವೇರಿ ಹಿನ್ನೀರಿನಲ್ಲಿ ಇದು ಮುಳುಗಿಹೋಗಿದೆ. 

ಶ್ರೀ ಹರಿ ಖೋಡೆ ಅವರು ಪೂರ್ಣ ಮೂಲ ವೈಭವ ದೇವಸ್ಥಾನ ಸ್ತಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದೊಂದು ಅಮೋಘವಾದ ಪ್ರವಾಸಿತಾಣವಾಗಿದೆ. ಈ ಸ್ಥಳಕ್ಕೆ ನಾನು, ನನ್ನ ಪತಿ ಹಾಗು ನನ್ನ ಪತಿಯ ಸ್ನೇಹಿತ ಮಂಜು ಅಣ್ಣ ಹಾಗು ಅವರ ಪತ್ನಿ ಚಿಟ್ಟಿ ಹೀಗೆ ನಮ್ಮ ಪ್ರಯಾಣ ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಕೆ. ಅರ್, ಎಸ್ ತಲುಪಬೇಕೆಂಬ ಉತ್ಸಾಹದಲ್ಲಿ ಹೊರೆಟೆವು. 

ಮೊದಲು ಕೆ. ಅರ್. ಎಸ್  ಜಲಾಶಯದಿಂದ ನೀರು ದುಮ್ಮಿಕ್ಕಿ ಹರಿಯುವುದನ್ನು ದೂರದಿಂದಲೇ ಸೇತುವೆ ಮೇಲೆ ನಿಂತು ನೋಡಿದೆವು. ಎಂಥಾ ಅದ್ಭುತ ನೋಟವದು..!!! ಒಂದು ಕ್ಷಣ ಗಂಧರ್ವ ಲೋಕವೇ ಧರೆಗಿಳಿದಂತಿತ್ತು. ಹಾಲಿನ ಪರ್ವತವೇನೋ ಎನ್ನುವಂತೆ ಭಾಸವಾಗುತ್ತಿತ್ತು. 
ಆ ನೋಟವನ್ನು ಕಣ್ತುಂಬಿಸಿಕೊಂಡು ಮುಂದೆ ಹೊರೆಟೆವು. 
ನಾವಂದುಕೊಂಡ ಸ್ಥಳ ಬಂದೇ ಬಿಟ್ಟಿತು. ಅದೇ ಕೆ. ಅರ್. ಎಸ್. ಜಲಾಶಯದ ಹಿನ್ನಿರಿನ ಸ್ಥಳ. ಅಬ್ಬಾ ಎಂಥಹ ಸ್ಥಳವದು....!!!! ಆ ಸ್ಥಳವನ್ನು ನೋಡಿ ನಾನು ಮೂಕವಿಸ್ಮಿತಳಾದೆ. ಜಲಾಶಯದ ದಡದ ನೀರಿನಲ್ಲಿ ನಾವೆಲ್ಲಾ ಸೇರಿ ಕುಣಿದಾಡಿದೆವು. ಮತ್ತೊಮ್ಮೆ ನಾನು ನನ್ನ ಬಾಲ್ಯಕ್ಕೆ ಹೋಗಿ ಬಂದಂತ ಅನುಭವಾಯಿತು. ಆ ನೀರಿನ ಅಲೆಗಳು ನನ್ನ ಪಾದವನ್ನು ಆಗಾಗ್ಗೆ ಬಂದು ಸ್ಪರ್ಶ ಮಾಡುತ್ತಿದ್ದುದ್ದು ಕಚಗುಳಿ ಇಡುವಂತೆ ಭಾಸವಾಗುತ್ತಿತ್ತು. 

ಈ ಕಚಗುಳಿಯ ನಡುವೆ ಜಿನಿ ಜಿನಿ ಮಳೆಯ ಸಿಂಚನವೂ ಆಯಿತು. ಒಟ್ಟಿನಲ್ಲಿ ಆ ವೇಳೆ ಸ್ವರ್ಗವೇ ಧರೆಗಿಳಿದಂತಿತ್ತು. ನಂತರ ನಿರ್ಮಾಣಗೊಳ್ಳುತ್ತಿರುವ ವೇಣುಗೋಪಾಲ ಸ್ವಾಮಿ ದೇವಾಲಯದ ಮುಂಬಾಗಕ್ಕೆ ಬಂದು ನಾನು ಮತ್ತು ನನ್ನ ಗೆಳತಿ ಚಿಟ್ಟಿ ಕೈ ಹಿಡಿದು ಚಿಕ್ಕ ಮಕ್ಕಳ ಹಾಗೆ ಕುಣಿದು ಕುಪ್ಪಳಿಸಿದೆವು. ದೂರದ ತುದಿಯಲ್ಲಿ ಹಸಿರಿನ ಜೊತೆ ಆಕಾಶವೂ ಸೇರಿ ನೀರಿನ ಹೊದಿಕೆಯನ್ನು ಹೊದಿಸಿದಂತಿತ್ತು. ಒಟ್ಟಿನಲ್ಲಿ ಆ ಕ್ಷಣಗಳು ನನ್ನ ನೆನಪಿನ ಪುಟದಲ್ಲಿ ಬೆರೆತು ಹೋಗಿದೆ. 


 ಪ್ರವಾಸದ ಕೆಲವು ಚದುರಿದ ಚಿತ್ರಗಳು:
ಶತದ್ರುವಂಶ ಯೋಧುಡು
ತುಂಬಾ ಕಷ್ಟ ಪಟ್ಟು ಕೆಲಸ ಮಾಡ್ತಾ ಇದ್ದೀನಿ.. ಯಾರು ಡಿಸ್ಟರ್ಬ್ ಮಾಡ್ಬೇಡಿ
ನಿಧಾನ ಚಿಟ್ಟ...
ಅಮರಶಿಲ್ಪಿ ಮಂಜುನಾಥಚಾರಿ

Dhoom 4 na hero-heroine

ಬಾಲ್ಯದ ಆಟ ಆ ಹುಡುಗಾಟ ಇನ್ನು ಮರೆತಿಲ್ಲ

Kriah part 4 Hero


ಹಾರುವ ಹಕ್ಕಿಗೆ ಪೈಪೋಟಿ ಪತಿರಾಯರದು


ಇಂತಿ,
ನಂದುಶಿವು

Share/Save/Bookmark

Monday, May 13, 2013

ಕನಸು ನನಸಾದಾಗ

ಇಷ್ಟ ಪಡುವ ಕೆಲವು ವಿಷಯಗಳೇ ಹಾಗೆ. ಕನಸಾಗಿ ಬಂದು ನಮ್ಮನ್ನು ಕಾಡುತ್ತಿರುತ್ತವೆ. ಕನಸು ನನಸಾಗುವವರೆಗೆ ಏನೋ ಒಂದು ರೀತಿಯ ಸಂಕಟ ಅಸಮಾಧಾನ.

ಪಕ್ಕದ ಬೀದಿಯ ಮನೆಯೊಂದರಲ್ಲಿದ್ದ ವಾಸವಾಗಿದ್ದ ರಿಕ್ಷ ಓಡಿಸುತ್ತಿದ್ದ ರಾಮಣ್ಣನಿಗೆ ಹೀಗೆ ಒಂದು ಕನಸು ಸದಾ ಕಾಡುತ್ತಿತ್ತು. ತನ್ನ ಆ ಕನಸನ್ನು ಯಾರಲ್ಲೂ ಹೇಳಿಕೊಂಡಿರಲಿಲ್ಲ. ಕನಸನ್ನು ನನಸು ಮಾಡಿ ತನ್ನ ಹೆಂಡತಿಯನ್ನು ಅಚ್ಚರಿಗೊಳಿಸಬೇಕು ಎಂದು ಅವಳಿಗೂ ತನ್ನ ಕನಸಿನ ಬಗ್ಗೆ ಹೇಳಿಕೊಂಡಿರಲಿಲ್ಲ.
ಇಂದಲ್ಲ ನಾಳೆ ತನ್ನ ಕನಸು ನನಸಾಗುತ್ತೆ ಎಂದು ನಂಬಿದ್ದ. ಹಾಗೆಂದು ನಂಬಿ ಸುಮ್ಮನೆ ಕುಳುತುಕೊಳ್ಳುವ ಜಾಯಮಾನದವನಲ್ಲ ರಾಮಣ್ಣ. ಅದಕ್ಕೆಬೇಕಾದ ಪ್ರಯತ್ನಗಳನ್ನೆಲ್ಲ ಮಾಡುತ್ತಿದ್ದ. 
ಪ್ರತಿದಿನದ ಅವನ ಪ್ರಯತ್ನಗಳು ಅವನನ್ನು ಅವನ ಕನಸಿಗೆ ಹತ್ತಿರ ಮಾಡುತ್ತಿದ್ದವು.

ಹೀಗೆ ಅವನು ಮಾಡುತ್ತಿದ್ದ ಪ್ರಯತ್ನಗಳಿಗೆಲ್ಲ ಉತ್ತರ ಸಿಗುವ ದಿನ ಬಂದೇಬಿಟ್ಟಿತು.ಹೌದು ನಾಳೆ ಅವನ ಕನಸು ನನಸಾಗುವ ದಿನ. ಏನೋ ಸಾಧಿಸಿದ ಹೆಮ್ಮ. ಸಂತೋಷ ತಳವಳ ಹಾಗು ನಾಳೆಯ ಕಾಣುವ ತವಕ ಎಲ್ಲ ಒಟ್ಟೊಟ್ಟಿಗೆ ಆಗುವ ಅನುಭವ. ಅವನ ಮನಸಿನ ಈ ಸ್ಥಿತಿಗೆ ನಿದ್ರೆ ಬಾರದೆ ಹಾಸಿಗೆಯಲ್ಲೇ ಒದ್ದಾಡಿದ.ಈ ತವಕ ತಳಮಳಗಳ ನಡುವೆ ರಾಮಣ್ಣ ನಿದ್ದೆಗೆ ಜಾರಿದಾಗ ರಾತ್ರಿ ೨ ಗಂಟೆಯಾಗಿತ್ತು.

ಬೆಳಿಗ್ಗೆ ೬ ಗಂಟೆಗೆ ಏಳುತ್ತಿದ್ದ ರಾಮಣ್ಣ ಅಂದು ೮ ಗಂಟೆಯಾದರೂ ಏಳಲಿಲ್ಲ.
ಅದೇನೋ ಸಾಧಿಸಿದ ಹೆಮ್ಮೆಯ ನಿದ್ದೆ.
ಹೆಮ್ಮೆಯ ನಿದ್ದೆಯಲ್ಲೊಂದು ಕನಸು.
ಕನಸನ್ನು ಕನಸಲ್ಲೇ ನನಸಾಗಿಸಿಕೊಂಡ ಹೆಮ್ಮೆಯ ಕನಸು.
ರಾಮಣ್ಣನನ್ನು ಚಿರ ನಿದ್ರೆಗೆ ತಳ್ಳಿದ ಕನಸು.

ಪ್ರೀತಿಯಿಂದ,
ಶಿವಪ್ರಕಾಶ್

Share/Save/Bookmark