Thursday, December 9, 2010

ನೆನಪುಗಳು ಸುಟ್ಟು ಬೂದಿಯಾಗುವುದನ್ನು ಕಂಡೆ

ನಾನವಾಗ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ಆ ವಯಸ್ಸಿನಲ್ಲಿ ನನಗೆ ಓದುವುದು, ಬರೆಯುವುದೆಂದರೆ ತುಂಬ ಇಷ್ಟದ ಸಂಗತಿ. ಒಮ್ಮೆ ನನ್ನ ಹಾಗು ನನ್ನ ಸುತ್ತಮುತ್ತ ನಡೆಯುತ್ತಲಿದ್ದ ಹಾಸ್ಯ ಹಾಗು ರಸಮಯ ಕ್ಷಣಗಳನ್ನು ನನ್ನ ದಿನಚರಿಯಲ್ಲಿ ಬರೆದಿಡಬೇಕೆನಿಸಿತು. ಮುಂದೊಮ್ಮೆ ನಾನು ದೊಡ್ಡ ವ್ಯಕ್ತಿಯಾದಾಗ ಎಲ್ಲರಿಗೂ, ನಾನು ಹೇಗಿದ್ದೆ..? ಎಂದು ಹೇಳಿಕೊಳ್ಳಬೇಕು, ಅದಕ್ಕಾಗಿ ದಿನಚರಿಯಲ್ಲಿ ಸುಂದರವಾದ ಕ್ಷಣಗಳನ್ನು ಬರೆದಿಡಬೇಕೆನಿಸಿತು. ನಾನು ಹಾಸ್ಟೆಲ್ಲಿನಲ್ಲಿ ಇದ್ದುದರಿಂದ ಬರೆಯಲು ಇಂತಹ ತುಂಬ ಸನ್ನಿವೇಶಗಳು ಸಿಗುತ್ತಿದ್ದವು. ಅಂದಿನಿಂದ ನನಗೆ ಎದುರಾದ ಹಾಸ್ಯ ಹಾಗು ರಸಮಯ ಕ್ಷಣಗಳನ್ನು ಬರೆದಿಟ್ಟುಕೊಳ್ಳತೊಡಗಿದೆ.

ನಾಲ್ಕು ತಿಂಗಳುಗಳ ನಂತರ ನಾನು ಬರೆದಿಡುತ್ತಿದ್ದ ದಿನಚರಿಯ ಪುಟಗಳ ಸಂಖೆ ೩೫೦ ದಾಟಿತ್ತು. ಅದನ್ನು ನೋಡಿದಾಗಲೆಲ್ಲ ಏನೋ ಒಂದು ರೀತಿಯ ಹೆಮ್ಮೆಯಾಗುತ್ತಿತ್ತು. ನಾನೊಬ್ಬ ದೊಡ್ಡ ವ್ಯಕ್ತಿಯ ಹಾಗೆ ಬೀಗುತ್ತಿದ್ದೆ. ನಾನು ಈ ನನ್ನ ದಿನಚರಿ ಪುಸ್ತಕವನ್ನು ಯಾರ ಕೈಗೂ ಸಿಗದಂತೆ ಕಾಪಾಡಿಕೊಂಡು ಬಂದಿದ್ದೆ. ಆದರೆ, ಒಂದುದಿನ ನನ್ನ ರೂಮ್-ಮೆಟ್ ಅದನ್ನು ಕೈಗೆತ್ತಿಕೊಂಡುಬಿಟ್ಟಿದ್ದ. ಅವನು ಓದುವ ಮುಂಚೆಯೇ ಅವನಿಂದ ಕಿತ್ತುಕೊಂಡು ಓಡಿದೆ. ಅವನು ಇನ್ನೂ ಇಬ್ಬರು ಸ್ನೇಹಿತರನ್ನು ಕಟ್ಟಿಕೊಂಡು ನನ್ನ ಹಿಂದೆಯೇ ಓಡೋಡಿ ಬಂದ. ಅವರಿಗೆ ಆ ಪುಸ್ತಕವನ್ನು ಕೊಟ್ಟುಬಿಡಬಹುದಾಗಿತ್ತು ಆದರೆ, ಅದರಲ್ಲಿ, ನನಗೆ ಏಳನೇ ಕ್ಲಾಸಿನಲ್ಲೇ ಹುಟ್ಟಿದ ಒಂದು ಪ್ರೇಮಕಥೆ ಇತ್ತು. ಅದನ್ನು ಯಾರಿಗೂ ತೋರಿಸಲು ನಾನು ಸುತರಾಂ ಸಿದ್ದವಿರಲಿಲ್ಲ. ನಾನು ಓಡುತ್ತಾ ಓಡುತ್ತಾ ಹಾಸ್ಟೆಲ್ಲಿನ ಅಡುಗೆ ಕೊಣೆಯ ಒಳ ಹೊಕ್ಕು ಗ್ಯಾಸ್-ಸ್ಟವ್ ನ ಪಕ್ಕ ಬಂದು ನಿಂತಿದ್ದೆ. ಗ್ಯಾಸ್-ಸ್ಟವ್ ನ ಉರಿಯನ್ನು ಹತ್ತಿಸಿದೆ. ಅವರು ಇನ್ನೇನು ನನ್ನ ಕೈಯಿಂದ ಕಿತ್ತುಕೊಳ್ಳುತ್ತಾರೆ ಎಂದು ಗೊತ್ತಾಗಿ, ನನ್ನ ದಿನಚರಿಯನ್ನು ಉರಿಯುತ್ತಿದ್ದ ಗ್ಯಾಸ್ ಸ್ಟವ್ ನ ಬೆಂಕಿಗೆ ಆಹುತಿ ಮಾಡಿಬಿಟ್ಟೆ...
ನನ್ನ ಕಣ್ಣ ಮುಂದೆಯೇ, ನನ್ನ ನೆನಪುಗಳು ಸುಟ್ಟು ಬೂದಿಯಾಗುವುದನ್ನು ಕಂಡೆ..... ಅದಾದ ಒಂದು ವಾರದ ವರೆಗೆ ನನಗೆ ತುಂಬ ಬೇಜಾರ್ ಆಗಿತ್ತು.

ಮೇಲಿನ ಘಟನೆ ನನ್ನದಲ್ಲ. ನನ್ನ ಸಹೋದ್ಯೋಗಿಯು ಕಾಫಿ Break ನಲ್ಲಿ ನನ್ನ ಜೊತೆ ಹಂಚಿಕೊಂಡ, ಅವನ ಬಾಲ್ಯದ ನೆನಪು..

ಗೆಳೆಯರೇ,
ನಾನು ಈ ಬ್ಲಾಗ್ ಲೋಕದ ಪಯಣದಲ್ಲಿ ಎರಡು ವರ್ಷಗಳನ್ನು ಕಳೆದು, ಮೂರನೇ ವರ್ಷಕ್ಕೆ ಕಾಲಿಟ್ಟಿದ್ದೇನೆ.
ನಿಮ್ಮೆಲ್ಲರ ಆತ್ಮೀಯ ಸಹಕಾರ ಹಾಗು ಬೆಂಬಲಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು

ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್
Share/Save/Bookmark

Sunday, October 24, 2010

ಗೋಕಾಕ್ ಜಲಪಾತ

ಸ್ನೇಹಿತನ ಮದುವೆ ನಿಮಿತ್ತ ಕೆಲವು ಗೆಳೆಯರೆಲ್ಲ ಸೇರಿಕೊಂಡು ಬೆಳಗಾವಿಗೆ ಹೋಗಿದ್ದೆವು. ಹಾಗೆ ಅಲ್ಲಿಗೆ ಹತ್ತಿರವಿದ್ದ ( 72 KMS) ಗೋಕಾಕ್ ಜಲಪಾತವನ್ನು ನೋಡಿಕೊಂಡು ಬಂದೆವು. ಅಲ್ಲಿ ತೆಗೆದ ಕೆಲವು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಜಲಪಾತವು ಗೋಕಾಕ್ ನಿಂದ ಕಿಲೋಮೀಟರು ದೂರದಲ್ಲಿದೆ. ಘಟಪ್ರಭಾ ನದಿಯ ಜಲಪಾತವು ನೋಡಲು ತುಂಬ ಮನಮೋಹಕವಾಗಿದೆ.


ಜಲಪಾತದ ವೀಡಿಯೊ ತುಣುಕು:ಹೆಚ್ಚಿನ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.

ಪ್ರೀತಿಯಿಂದ,
ಶಿವಪ್ರಕಾಶ್
Share/Save/Bookmark

Thursday, September 16, 2010

Bureaucrats

ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೀತಾ ಇತ್ತು. ಮೊದಲ ಸುತ್ತಿನಲ್ಲಿ ತೇರ್ಗಡೆಯಾಗಿ ಎರಡನೇ ಸುತ್ತಾದ Group Discussion ಗೆ ನನ್ನ ಇಬ್ಬರು ಸ್ನೇಹಿತರಾದ ತರುಣ್ ಮತ್ತು ನವೀನ ಅರ್ಹತೆ ಪಡೆದಿದ್ದರು.
ಮೇಲ್ವಿಚಾರಕರು ಎರಡನೇ ಸುತ್ತಿಗೆ ಅರ್ಹತೆ ಪಡೆದ ಎಂಟು ಅಭ್ಯರ್ಥಿಗಳ ಗುಂಪು ಮಾಡಿ, ಚರ್ಚಿಸಬೇಕಾಗಿದ್ದ ವಿಷಯ "Should bureaucrats rule the nation?" ಎಂದು ತಿಳಿಸಿದರು.
ನನ್ನ ಇಬ್ಬರು ಸ್ನೇಹಿತರು ಒಂದೇ ಗುಂಪಿನಲ್ಲಿ ಇದ್ದರು.
ನನ್ನ ಇಬ್ಬರು ಸ್ನೇಹಿತರಿಗೂ "Bureaucrats" ಎನ್ನುವ ಪದದ ಅರ್ಥ ಗೊತ್ತಿರಲಿಲ್ಲ. ಸುಮ್ಮನಿರುವುದಕ್ಕಿಂತ ಕೇಳಿಬಿಡುವುದೇ ವಾಸಿಯೆಂದು ನವೀನ ಮೇಲ್ವಿಚಾರಕರಲ್ಲಿ "Bureaucrats" ಎನ್ನುವ ಪದದ ಅರ್ಥ ತಿಳಿಸುವಂತೆ ಮನವಿ ಮಾಡಿದ. ಆದರೆ, ಆ ಮೇಲ್ವಿಚಾರಕರು "ಕ್ಷಮಿಸಿ, ನಾವು ಹೇಳುವ ಹಾಗಿಲ್ಲ" ಎಂದು ನಯವಾಗಿ ತಿರಸ್ಕರಿಸಿದರು. ಬೇರೆ ದಾರಿಯಿಲ್ಲದೆ ನವೀನ ಸುಮ್ಮನಾದ.
ಚರ್ಚೆ ಪ್ರಾರಂಭವಾಯ್ತು. ನನ್ನ ಇನ್ನೊಬ್ಬ ಸ್ನೇಹಿತ ತರುಣ್ ಆ ಪದದ ಅರ್ಥ ಗೊತ್ತಿರದ ಕಾರಣ, ಅವನು ಬೇರೆಯವರು ಮಾತಾಡುವುದನ್ನು ಗ್ರಹಿಸಿಕೊಂಡು, ಅದೇ ಸಾಲಿಗೆ ತನ್ನ "I totally agree with you my friend" ಸೇರಿಸಿ ಹ್ಯಾಗೋ ಹೇಳುತ್ತಿದ್ದ. ಆದರೆ ನಮ್ಮ ನವೀನ ಮಾತ್ರ ಪದದ ಅರ್ಥ ತಿಳಿಯದೆ ಸುಮ್ಮನೆ ಕೂತುಬಿಟ್ಟಿದ್ದ.
ಚರ್ಚೆಯ ಸಮಯ ಮುಗಿಯುತ್ತ ಬಂತು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು (ನನ್ನ ಸ್ನೇಹಿತ ನವೀನ ಒಬ್ಬ ಬಿಟ್ಟು).
ಕೊನೆಯಲ್ಲಿ ಸುಮ್ಮನೆ ಕೂತಿದ್ದ ನನ್ನ ಸ್ನೇಹಿತ ನವೀನನನ್ನು ನೋಡಿದ ಮೇಲ್ವಿಚಾರಕರು "Do you have any questions?" ಎಂದರು.
"Yes. May i know the meaning of Bureaucrats ??" ಎಂದ ನಮ್ಮ ನವೀನ.
Share/Save/Bookmark

Thursday, August 5, 2010

ಹೀಗೊಂದು ಪರೀಕ್ಷೆ...!!!

ಸೆಮಿಸ್ಟರ್ ನ ಕೊನೆ Lab Exam. ಅದು Project Demo ಕೊಡುವ Lab Exam. ಪ್ರಾಜೆಕ್ಟಿನಲ್ಲಿ ನಾನು, ನಟ, ರಘು ಹಾಗು ಸಂಗಮೇಶ್ ಇದ್ವಿ. ನಾವೆಲ್ಲರೂ ಸೇರಿ ಒಂದು PPT (Power Point Presentation) ರೆಡಿ ಮಾಡಿದೆವು. ಅದನ್ನು ತುಂಬ ಸುಂದರವಾಗಿಯೂ ಸಿದ್ದಗೊಳಿಸಿದೆವು.
ಪರಿವೀಕ್ಷಕರು (Examiner) ನಮ್ಮ ಹತ್ತಿರ ಬರುವುದರೊಳಗಾಗಿ ನಾವು PPT ಓಪನ್ ಮಾಡಿ ಇಟ್ಟುಕೊಂಡಿದ್ದೆವು. ಅವರು ಬಂದವೊಡನೆ ನಾವೆಲ್ಲರೂ "Good Morning Sir" ಹೇಳಿ, Project Demo ಕೊಡಲು ಮುಂದಾದವು.
ಮೊದಲು ನನ್ನ ಸರಧಿ. ನಾವೆಲ್ಲರೂ ಮುಂಚೆಯೇ PPT ಯ ಪುಟಗಳನ್ನು ಸರಿಯಾಗಿ ಹಂಚಿಕೊಂಡಿದ್ದೆವು.
ನಾನು ಮುಂದೆ ಬಂದು PPT ಯ ಮೊದಲ ಪುಟವನ್ನು ತೋರಿಸುತ್ತ... ಪ್ರಾಜೆಕ್ಟ್ ಬಗ್ಗೆ ಹೇಳೋಳು ಶುರು ಮಾಡಿದೆ.
ಮಾನಿಟರ್ ಪರದೆಯ ಮೇಲೆ ಕಾಣಿಸುತ್ತಿದ್ದ PPT ಯ ಮೊದಲನೇ ಪುಟವನ್ನು ಪರಿವೀಕ್ಷಕರು ನೋಡುತ್ತಾ, SKIP ಎಂದರು.
ನಾನು ಮೊದಲ ಪುಟದ ಮಾಹಿತಿಯನ್ನು ವಿವರಿಸುವುದನ್ನು ನಿಲ್ಲಿಸಿ, ಎರಡನೇ ಪುಟಕ್ಕೆ ತಿರುಗಿಸಿ, ಎರಡನೇ ಪುಟದಲ್ಲಿ ಬರೆದ ವಿಷಯವನ್ನು ವಿವರಿಸುವುದಕ್ಕೆ ಹೋದೆ.
ಪರಿವೀಕ್ಷಕರು ಪುನಃ SKIP ಎಂದರು.
ನಾನು ಮೂರನೇ ಪುಟಕ್ಕೆ ತಿರುಗಿಸಿ, ವಿವರಿಸಲು ಅಣುವಾದೆ.
ಅವರು ಪುನಃ SKIP ಎಂದರು.
ನಾಲ್ಕನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ಐದನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ಆರನೇ ಪುಟಕ್ಕೆ ತಿರುಗಿಸಿದೆ.
ಪುನಃ SKIP ಎಂದರು.
ನಾನು ಹೇಳುವುದನ್ನು ಬಿಟ್ಟು ಹಿಂದಕ್ಕೆ ಸರಿದು ನಿಂತೆ. ನಾನು ಅಲ್ಲಿಯವರೆಗೂ ಏನನ್ನು ಹೇಳಿರಲಿಲ್ಲ, ಏಕೆಂದರೆ ಹೇಳುವುದಕ್ಕೆ ಮುಂಚೆಯೇ ಅವರು PPT ಯ ಪುಟದ ಮೇಲೆ ಕಣ್ಣಾಡಿಸಿ SKIP ಎನ್ನುತ್ತಿದ್ದರು.
ನಾನು ಹಿಂದೆ ಸರಿದಿದ್ದನ್ನು ನೋಡಿದ ಪರಿವೀಕ್ಷಕರು "ಯಾಕೆ ಹಿಂದಕ್ಕೆ ಹೋದಿರಿ" ಎಂದರು.
ನಾನು "ಸಾರ್, ನಮ್ಮ PPT ನಲ್ಲಿ 24 ಪುಟಗಳಿವೆ. ನಾವೆಲ್ಲರೂ PPT ಯನ್ನು ವಿವರಿಸಲು ತಲಾ ಆರು ಪುಟಗಳಂತೆ ಆರಿಸಿಕೊಂಡಿದ್ದೇವೆ. ಮೊದಲ ಆರು ಪುಟಗಳನ್ನು ನಾನು ವಿವರಿಸಿ. ನಂತರದ ಆರು ಪುಟಗಳು ರಘು, ಅದನಂತರದ ಆರು ಪುಟಗಳು ನಟರಾಜ, ನಂತರ ಸಂಗಮೇಶ್ ವಿವರಿಸೋಣವೆಂದು ನಿಶ್ಚಯಿಸಿಕೊಂಡಿದ್ದೇವೆ. ನನ್ನ ಆರು ಪುಟಗಳು ಮುಗಿಯಿತಲ್ಲ...? ಅದಕ್ಕೆ ಹಿಂದೆ ಸರಿದೆ." ಎಂದೆ.
ನನ್ನ ಈ ವಿವರಣೆಯನ್ನು ಕೇಳಿದ ಪರಿವೀಕ್ಷಕರು ಒಮ್ಮೆ ಮುಗುಳ್ನಕ್ಕು, ಸರಿಯಪ್ಪಾ ಎಂದು ಹೇಳಿ. ನಂತರ ವಿವರಿಸಿದ ನಟ, ರಘು, ಹಾಗು ಸಂಗಮೇಶನ Project Demo ದ ವಿವರಣೆಯನ್ನು ಕೇಳಿದರು.
ನಿಜ ಹೇಳಬೇಕೆಂದರೆ ಅವರು ಕೇಳಿದ್ದು, ಸಂಗಮೇಶ್ ವಿವರಿಸಿದ ಆ ಕೊನೆಯ ಆರು ಪುಟಗಳು ಅಸ್ಟೆ.
Share/Save/Bookmark

Wednesday, July 21, 2010

ಒಮ್ಮೊಮ್ಮೆ ಹೀಗೂ ಆಗುವುದು...!!!


Mobile And Tv Remote.jpg

ನೈಜ ಘಟನೆಯನ್ನು ಆಧಾರಿಸಿ ಈ ಲೇಖನವನ್ನು ಬರೆಯಲಾಗಿದೆ....!!!!

ಒಂದ್ಸಾರಿ ಯಾವುದೋ ವಿಷಯದ ಬಗ್ಗೆ ಮಾತಾಡೋಕೆ ಸ್ನೇಹ ತನ್ನ ಗೆಳತಿ ನಿಹಾರಿಕ ಮೊಬೈಲ್ ಗೆ ಕರೆ ಮಾಡಿದಳು. ಆದರೆ ನಿಹಾರಿಕ ಕರೆಯನ್ನು ಸ್ವೀಕರಿಸಲಿಲ್ಲ. ಪದೇ ಪದೇ ಪ್ರಯತ್ನಿಸಿದರೂ ಅವಳು ಕರೆಯನ್ನು ಸ್ವೀಕರಿಸಲಿಲ್ಲ. ಏನು ಮಾಡಬೇಕೆಂದು ತೋಚಲಿಲ್ಲ. ಕೊನೆಗೆ ಅವಳಿಗೆ ಒಂದು ಈ-ಮೇಲ್ ಕಳುಹಿಸಿದಳು. ಸ್ವಲ್ಪ ಸಮಯದ ನಂತರ ಒಂದು ಲ್ಯಾಂಡ್ ಲೈನ್ ನಂಬರಿನಿಂದ ಸ್ನೇಹಳಿಗೆ ಕರೆ ಬಂತು. ಫೋನ್ ಎತ್ತಿ "ಹಲೋ" ಎಂದಳು.
ಆ ಕಡೆಯಿಂದ ಮಾತನಾಡಿದ ಧ್ವನಿ ನಿಹಾರಿಕಳದು ಎಂದು ತಿಳಿಯಿತು.
"ಅಲ್ವೇ ಆವಾಗಿನಿಂದ ನಿನ್ನ ಮೊಬೈಲ್ ಗೆ ಕರೆ ಮಾಡುತ್ತಿದ್ದೇನೆ... ಫೋನ್ ಯಾಕೆ ಎತ್ತಲಿಲ್ಲ.."
ನಿಹಾರಿಕ: "ಸಾರೀ ಕಣೆ.. ಮೊಬೈಲ್ ಮನೇಲಿ ಮರೆತು ಬಂದುಬಿಟ್ಟಿದ್ದೇನೆ... "
ಸ್ನೇಹ: "ಒಹ್ ಹಾಗ.. ನಾನು ಹೆದರಿಬಿಟ್ಟಿದ್ದೆ.. ಅದು ಹ್ಯಾಗೆ ಮೊಬೈಲ್ ಮನೇಲಿ ಮರೆತುಬಂದೆ...??"
ನಿಹಾರಿಕ: "ಬೆಳಿಗ್ಗೆ ಆಫೀಸಿಗೆ ಲೇಟ್ ಆಗ್ತಾ ಇತ್ತು.. ಮೊಬೈಲ್ ಅನ್ಕೊಂಡು TV Remote ನ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಕೊಂಡು ಬಂದೆ."
ನಗು ಬಂದರೂ ತಡೆದುಕೊಂಡು "ಅಲ್ವೇ TV Remote ಗು, ಮೊಬೈಲ್ ಗೆ ವ್ಯತ್ಯಾಸ ಗೊತ್ತಗೊಲ್ವ..????"
ನಿಹಾರಿಕ: "ಅವಸರದಲ್ಲಿ ಗೊತ್ತಾಗ್ಲಿಲ್ಲ ಕಣೆ........ :( "
"ಒಳ್ಳೆ ಕೆಲಸ ಮಾಡಿದಿಯ ಬಿಡು... ಹ್ಹ ಹ್ಹ ಹ್ಹ..."
ನಿಹಾರಿಕ: "ನಗಬೇಡವೆ............... ಇನ್ನೊಂದು ವಿಷಯ....."
"ಏನು...?"
ನಿಹಾರಿಕ: "For your kind information, ಇದು ಮೊದಲನೇ ಬಾರಿಗೆ ಅಲ್ಲ ಈ ತರಹ ಆಗ್ತಾ ಇರೋದು.. ಇದೇ ತರ ಬಹಳ ಸಾರಿ ಆಗಿದೆ...ಹ್ಹ ಹ್ಹ ಹ್ಹ... "
"ಅಯ್ಯೋ ನಿನ್ನ......"
ನಿಹಾರಿಕ: "ಒಂದ್ಸಾರಿ ಏನಾಯ್ತು ಗೊತ್ತ...??"
"ಏನಾಯ್ತು...?"
ನಿಹಾರಿಕ: "ಒಂದ್ಸಾರಿ.. ಮೊಬೈಲ್ ಮತ್ತೆ TV Remote ಎರಡನ್ನು ವ್ಯಾನಿಟಿ ಬಾಗ್ನಲ್ಲಿ ನನಗೆ ಗೊತ್ತಾಗದೆ ಹಾಕಿಕೊಂಡು ಬಿಟ್ಟಿದ್ದೆ.. BMTC ಬಸ್ನಲ್ಲಿ ಹೋಗೋವಾಗ, ಫೋನ್ ಬಂತು... ಸಡನ್ ಆಗಿ ವ್ಯಾನಿಟಿ ಬ್ಯಾಗ್ನಿಂದ ಮೊಬೈಲ್ ತಗೆದುಕೊಳ್ಳುವುದರ ಬದಲು TV Remote ತೆಗೆದುಬಿಟ್ಟೆ. ಅಲ್ಲೇ ನಿಂತಿದ್ದ ಕಂಡಕ್ಟರ್ ಅವಕ್ಕಾಗಿ ನೋಡ್ತಾ ಇದ್ದ... ಹ್ಹ ಹ್ಹ ಹ್ಹ"


Share/Save/Bookmark

Wednesday, July 14, 2010

ಯಾಕೋ.... ನನ್ ಟೈಮ್ ಸರಿಯಿಲ್ಲ....!!??


ನಾನು ಎದ್ದಾಗ ನನ್ನ ಮೊಬೈಲಿನಲ್ಲಿ ಸಮಯ ಬೆಳಿಗ್ಗೆ 8 AM ಆಗಿತ್ತು. ಆಫೀಸ್ ಇರೋದು 9 AM ಗೆ. ಮನೆಯಿಂದ ಆಫೀಸ್ ಗೆ ಹತ್ತು ಕಿಲೋಮೀಟರು. ಲೇಟ್ ಆಗಿ ಎದ್ದ ಪರಿಣಾಮವಾಗಿ ಬೇಗ ಬೇಗ ಸ್ನಾನ ಮಾಡಿ, ಬೆಳಿಗ್ಗಿನ ಉಪಹಾರವನ್ನು ಕೂಡ ಸೇವಿಸದೆ ಆತುರಾತುರವಾಗಿ ಬೈಕ್ ಹತ್ತಿ ಆಫೀಸಿನ ಕಡೆ ಹೊರಟೆ.

ನಾನು ದಿನಾಲು ಕಬ್ಬನ್ ಪಾರ್ಕ್ ಒಳಗಡೆ ಇರುವ ದಾರಿಯಿಂದ UB City ಕಡೆಗೆ ಹೋಗುವ ರಸ್ತೆಗೆ ಹೋಗೋದು. ನಾನು ಅಲ್ಲಿಗೆ ಬಂದಾಗ ಕಬ್ಬನ್ ಪಾರ್ಕ್ ನ ಗೇಟ್ ಮುಚ್ಚಿತ್ತು. ಕೆಲವು ವಾಹನಗಳು ಆ ಗೇಟಿನ ಮುಂದೆ ನಿಂತಿದ್ದವು. ಗೇಟ್ ಮುಂದೆ ಕಾವಲಿದ್ದ ವ್ಯಕ್ತಿಯನ್ನು ಕೇಳಿದೆ "ಯಾಕೆ ಗೇಟ್ ತೆಗೆದಿಲ್ಲ...??". ಅದಕ್ಕೆ ಆ ವ್ಯಕ್ತಿ "ಎಂಟು ಗಂಟೆಯವರೆಗೂ ತೆಗೆಯೋಲ್ಲ" ಎಂದ.

ನನಗೆ ಆಶ್ಚರ್ಯವಾಯಿತು. ನನ್ನ ಮೊಬೈಲಿನಲ್ಲಿ ಒಂಬತ್ತು ಗಂಟೆಯಾಗಿದೆ. ಇವನು ಇನ್ನೂ ಎಂಟು ಗಂಟೆಯವರೆಗೂ ತೆಗೆಯೋಲ್ಲ ಎನ್ನುತ್ತಿದ್ದನಲ್ಲ...
ಪಕ್ಕದಲ್ಲಿದ್ದ ಒಬ್ಬ ವ್ಯಕ್ತಿಯನ್ನು "ಈಗ ಟೈಮ್ ಎಸ್ಟಾಗಿದೆ..?" ಎಂದು ಕೇಳಿದೆ.
ಅದಕ್ಕೆ ಆ ವ್ಯಕ್ತಿ "7:45" ಎಂದ.
ನನಗೆ ಒಮ್ಮೆಲೇ ಸಿಟ್ಟು ಬಂತು. ನನ್ನ ರೂಮ್'ಮೇಟ್ಸ್ ನನ್ನ ಚೂಡಯಿಸಲೆಂದು ನನ್ನ ಮೊಬೈಲ್ ನ ಸಮಯವನ್ನು ಬದಲಾಯಿಸಿದ್ದರೆಂದು ತಿಳಿದು ಸಿಟ್ಟಿನಲ್ಲಿ ಬೈಯಲು ಅವರಿಗೆ ಫೋನ್ ಮಾಡಿದೆ. ಮೊದಲು ನನ್ನಿಂದ ಇದೇ ರೀತಿಯ ತೊಂದರೆ ಅನುಭವಿಸಿದ್ದ ನಟನಿಗೆ (ನಟರಾಜ್) ಕರೆಮಾಡಿದೆ.
"ಲೋ, ನನ್ ಮೊಬೈಲ್ ಟೈಮ್ ಯಾಕೋ ಚೇಂಜ್ ಮಾಡಿದೆ...?"
ನಟ "ನಾನು ಚೇಂಜ್ ಮಾಡಿಲ್ಲ." ಎಂದ.
ಅವನು ಹಾಗೇನಾದರೂ ಚೇಂಜ್ ಮಾಡಿದ್ದರೆ ಒಪ್ಪಿಕೊಳ್ಳುತ್ತಿದ್ದ. ನಡೆದಿರುವುದನ್ನು ಅವನಿಗೆ ವಿವರಿಸಿದೆ.
ಹೀಗೆ ಎಲ್ಲ ರೂಮ್'ಮೇಟ್ಸ್ ಗೆ ಕರೆಮಾಡಿ ವಿಚಾರಿಸಿದೆ. ಅವರು ಕೂಡ ಬದಲಾಯಿಸಿಲ್ಲ ಎಂದರು.
ಹೋಗ್ಲಿ ಬಿಡು ಇವತ್ತು ನನ್ನ ಟೈಮ್ ಸರಿಯಿಲ್ಲ ಅನ್ಕೊಂಡು ಆಫೀಸ್ ಗೆ ಹೋದೆ.

ಮಧ್ಯಾನ ಸುಮಾರು ಹನ್ನೆರೆಡು ಗಂಟೆಗೆ, ಮೊಬೈಲ್'ನಲ್ಲಿ ತಪ್ಪಾಗಿ ತೋರಿಸುತ್ತಿದ್ದ ಸಮಯವನ್ನು ಸರಿಪಡಿಸಲು ಮೊಬೈಲ್ ಹೊರತೆಗೆದೆ. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಈಗ ಸಮಯ ಸರಿಯಾಗಿಯೇ ತೋರಿಸುತ್ತಿದೆ. ನಾನು ಸರಿಪಡಿಸಿಯೇ ಇರಲಿಲ್ಲ. ಆಫೀಸ್ ನಲ್ಲಿ ಕೂಡ ನನ್ನ ಮೊಬೈಲ್ ಯಾರು ಮುಟ್ಟಿರಲಿಲ್ಲ. ಇದು ಹೇಗೆ ಸಾಧ್ಯ.??. ಮತ್ತೆ ತಲೆ ಬಿಸಿಯಾಯಿತು. ಯಾಕೆ ನನಗೆ ಹೀಗೆಲ್ಲ ಆಗ್ತಾ ಇದೆ. ಇದ್ಯಾವುದೋ ಭೂತ ಕಾಟವೇ ಇರಬೇಕು...!!!!.

ಮುಂಚೆ ಇಂತಹ ತೊಂದರೆ ಯಾರಿಗಾದರು ಆಗಿದಿಯೇ ಎಂದು ಗೂಗಲ್ ನಲ್ಲಿ ಪರಿಶೋಧಿಸಿದೆ. ನನಗೆ ಹೊಸದಾದ ಸಂಗತಿಯೊಂದು ತಿಳಿದುಬಂತು. ಇಂತಹ ಸಮಸ್ಸೆಯನ್ನು ಕೆಲವರು ಅನುಭವಿಸಿದ್ದರು. ಇಂತಹ ಸಮಸ್ಸೆಗೆ ಒಂದು ಮಾರ್ಗವನ್ನು ಕೂಡ ಸೂಚಿಸಿದ್ದರು. ಅದೇನೆಂದರೆ ನಮ್ಮ ಮೊಬೈಲ್ನಲ್ಲಿ ಇರುವ "Automatic Time Update" ಎನ್ನುವ ಸೆಟ್ಟಿಂಗ್ "DeActivate" ಮಾಡುವಂತೆ ತಿಳಿಸಿದ್ದರು. "Automatic Time Update" ಸೆಟ್ಟಿಂಗ್ "Activate" ಇದ್ದಾಗ ನಮ್ಮ ಮೊಬೈಲ್ ಸಮಯವು ಹತ್ತಿರವಿರುವ "ಟೈಮ್ ಸರ್ವರ್" ಕಡೆಯಿಂದ Update ಆಗಿರುತ್ತೆ. ಕೆಲವೊಮ್ಮೆ ತಾಂತ್ರಿಕ ದೋಷವಿರುವ "ಟೈಮ್ ಸರ್ವರ್"ನಿಂದಾಗಿ ನಮ್ಮ ಮೊಬೈಲ್ನಲ್ಲಿ ಸಮಯ ತಪ್ಪಾಗಿ "Update" ಆಗಿಬಿಡುತ್ತದೆ.

ಇವೆಲ್ಲದರ ನಡುವೆ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಒಂದೇ... ಹೀಗೂ ಉಂಟೇ...!!!!
Share/Save/Bookmark

Tuesday, July 6, 2010

ಯಾವುದು ಅದೃಷ್ಟ ???

ನನ್ನ Lab exam ಮುಗಿಸಿ ಹೊರಬಂದು, ನಮ್ಮ ದಿನನಿತ್ಯದ ಹರಟೆ ಕಟ್ಟೆಯಾಗಿದ್ದ ಟೀ ಸ್ಟಾಲ್ ಮುಂದಿರುವ ಕಟ್ಟೆಯ ಮೇಲೆ, ಇನ್ನೂ Lab Exam ಬರೆಯುತ್ತಿದ್ದ ಸ್ನೇಹಿತರು ಹೊರಬರುವುದನ್ನು ಕಾಯುತ್ತ ಕೂತೆ.
ಇಂತಹ Lab Exam ಗಳಲ್ಲಿ ಕೆಲವರು ಅದೃಷ್ಟವಂತರು ಹಾಗೆ ಕೆಲವರು ದುರದೃಷ್ಟವಂತರು. ಯಾಕೆಂದರೆ ಕೆಲವರಿಗೆ Exam ನಲ್ಲಿ ಸುಲಭದ ಪ್ರೊಗ್ರಮ್ಸ್ ಬಂದರೆ, ಕೆಲವರಿಗೆ ಕಷ್ಟದ ಪ್ರೊಗ್ರಮ್ಸ್ ಬರಬಹುದು.

ಒಂದೊಂದು ಪ್ರೊಗ್ರಾಮ್ ಗೆ ಒಂದೊಂದು ನಂಬರ್ ಹಾಕಿಟ್ಟುಕೊಂಡಿರುತ್ತಾರೆ. ನಮ್ಮ ಪರೀಕ್ಷೆಗೆ ಎಷ್ಟು ಪ್ರೊಗ್ರಮ್ಸ್ ಇರುತ್ತಾವೆಯೋ ಅಸ್ಟು ಚೀಟಿಗಳನ್ನು ಮಾಡಿ, ಒಂದೊಂದು ಚೀಟಿಯಲ್ಲಿ ಒಂದೊಂದು ನಂಬರ್ ಬರೆದು, ಅವುಗಳನ್ನು ಮಡಚಿ ಇಟ್ಟಿರುತ್ತಾರೆ. ನಾವು ಆ ಎಲ್ಲ ಚೀಟಿಗಳನ್ನು ಒಮ್ಮೆ shuffle ಮಾಡಿ, ಅದರಲ್ಲಿ ಒಂದು ಚೀಟಿಯನ್ನು ಎತ್ತಿಕೊಂಡು, ಅದರಲ್ಲಿ ಬರೆದಿರುವ ನಂಬರ್ ಹೇಳಬೇಕು. ಆ ನಂಬರ್ ಮೇಲೆ ಯಾವ ಪ್ರೊಗ್ರಾಮ್ ಬಂದಿರುತ್ತೋ, ಆ ಪ್ರೊಗ್ರಾಮ್ ಮಾಡಲು ಹೇಳುತ್ತಾರೆ. ಸಾಮಾನ್ಯವಾಗಿ ಚಿಕ್ಕ ನಂಬರ್ ಬಂದಿದ್ದರೆ ಸುಲಭದ ಪ್ರೊಗ್ರಾಮ್, ದೊಡ್ಡ ನಂಬರ್ ಬಂದಿದ್ದರೆ ಕಷ್ಟದ ಪ್ರೊಗ್ರಾಮ್ ಬಂದಿರುತ್ತೆ. ಅಂದು ನನ್ನ ಅದೃಷ್ಟ ಚನ್ನಾಗಿತ್ತು ಅನ್ಸುತ್ತೆ, ನಾನು ಆರಿಸಿ ಎತ್ತಿದ ಚೀಟಿಯಲ್ಲಿ ಚಿಕ್ಕ ನಂಬರ್ ಬಂದಿತ್ತು. ಹಾಗಾಗಿ ಸುಲಭದ ಪ್ರೊಗ್ರಾಮ್ ಬಂದಕಾರಣ ಬೇಗನೆ ಪರೀಕ್ಷೆಯನ್ನು ಮುಗಿಸಿಕೊಂಡು ಹೊರಬಂದಿದ್ದೆ.

ಹೀಗೆ ಟೀ ಸ್ಟಾಲ್ ಮುಂದಿರುವ ಕಟ್ಟೆಯ ಮೇಲೆ ಸ್ನೇಹಿತರಿಗಾಗಿ ಕಾಯುತ್ತ ಕೂತಿದ್ದಾಗ ಪರೀಕ್ಷೆ ಮುಗಿಸಿಕೊಂಡು ತರುಣ್ ಬಂದ.
ಅವನು ಬಂದೊಡನೆ ನಾನು ಟೀ ಶಾಪ್ ನವನಿಗೆ "೨ ಟೀ" ಎಂದು ಕೂಗಿ ಹೇಳಿದೆ. ಟೀ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ನಮಗೆ ಟೀ ತಂದುಕೊಟ್ಟ.
ಟೀ ಕುಡಿಯುತ್ತ, ತರುಣ್ ಗೆ ಕೇಳಿದೆ... "Exam ಹೇಗಾಯ್ತೋ... ?, ಯಾವ್ ನಂಬರ್ ಬಂದಿತ್ತು...?"
ತರುಣ್ : "Exam ಚನ್ನಾಗಯ್ತು. ೧೫ ನೇ ನಂಬರ್ ಬಂದಿತ್ತು.."
"ಲೋ, ೧೫ ನೇ ನಂಬರ್ ಪ್ರೊಗ್ರಾಮ್ ತುಂಬಾ ಕಷ್ಟ ಅಲ್ವಾ... ಹ್ಯಾಗೋ ಮಾಡಿದೆ..."
ತರುಣ್ : " ನನಗೆ ಬಂದಿದ್ದು ೧೫ ನೇದು, ಆದರೆ ನಾನು ಮಾಡಿದ್ದು ೪ ನೇದು..."
ನಾನು "ಅದು ಹ್ಯಾಗೋ....?"
ತರುಣ್ ವಿವರಿಸುತ್ತ ಹೋದ...
"ನಾನು ಚೀಟಿ ಎತ್ತಿದಾಗ ಅದರಲ್ಲಿ ೧೫ ಎಂದಿತ್ತು.
೧೫ ನೇ ಪ್ರೊಗ್ರಾಮ್ ಕಷ್ಟ ಅಂತ ಗೊತ್ತಿತ್ತು ಅಲ್ವಾ....
ಅದಕ್ಕೆ ನಾನು ೪ ಎಂದು ಸುಳ್ಳು ಹೇಳಿ, ಚೀಟಿಯನ್ನು ಮಡಚಿ, ಚೀಟಿಗಳಲ್ಲಿ ಹಾಕಿಬಿಟ್ಟೆ.. ಹಾಗಾಗಿ ಅವರು ೪ ನೇ ನಂಬರಿನ ಪ್ರೊಗ್ರಾಮ್ ಮಾಡೋಕೆ ಹೇಳಿದ್ರು."

ಕೆಲವೊಮ್ಮೆ ಕಷ್ಟ ಬಂದಾಗ ಹೆದರಿಕೊಳ್ಳದೆ ಈ ರೀತಿಯ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳಬೇಕಾಗುತ್ತದೆ !!!! ಹ್ಹ ಹ್ಹ ಹ್ಹ...
Share/Save/Bookmark

Tuesday, June 29, 2010

ಹೊಗೆನಿಕಲ್ ಜಲಪಾತ

ಮೊನ್ನೆ ಶನಿವಾರ ಹೊಗೆನಿಕಲ್ ಜಲಪಾತ ನೋಡಲು ನಾವು ಸ್ನೇಹಿತರೆಲ್ಲ ಸೇರಿ ಹೋಗಿದ್ದೆವು. ಈ ಪ್ರವಾಸದ ಬಗ್ಗೆ ಹೆಚ್ಚಾಗಿ ಬರೆಯದೆ ಸುಮ್ಮನೆ ಅಲ್ಲಿ ನಾವು ತೆಗೆದ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಪ್ರವಾಸದ ದಿನಾಂಕ: ೨೬ ಜೂನ್ ೨೦೧೦ ಶನಿವಾರ.
ನಾವು ಹೋಗಿಬಂದ ಮಾರ್ಗ: ಬೆಂಗಳೂರು -> ಹೊಸೂರು -> ಹೊಗೆನಿಕಲ್. ಇಲ್ಲಿಗೆ ಕೊಳ್ಳೇಗಾಲದ ಮುಖಾಂತರವು ಹೋಗಿಬರಬಹುದು.
ನದಿಯ ಹೆಸರು: ಕಾವೇರಿ. (ನದಿಯ ಒಂದು ಕಡೆ ಕರ್ನಾಟಕ. ಇನ್ನೊಂದು ಕಡೆ ತಮಿಳುನಾಡು ಇದೆ.)
ದೂರ: ೧೮೦ ಕಿಲೋಮೀಟರು.
ವಾಹನ: ಕ್ವಾಲಿಸ್.
ನಮ್ಮ ಟೀಮ್: ನಾನು (ಶಿವಪ್ರಕಾಶ್), ರಘು, ಮಂಜು, ರಾಮು, ನಿಶಾ, ಸುಷ್ಮಾ.
ಸ್ಥಳದ ಮಾಹಿತಿ: http://en.wikipedia.org/wiki/Hogenakkal_Falls ಗೆ ಭೇಟಿ ಕೊಡಿ.

ಈ ಪ್ರವಾಸ ತುಂಬಾ ಚನ್ನಾಗಿತ್ತು. ನೀರಿನಲ್ಲಿ ಈಜಾಡಿದ್ದು, ತೆಪ್ಪದಲ್ಲಿ ಹೋಗಿದ್ದು. ಇನ್ನೊಂದು ತೆಪ್ಪದಲ್ಲಿ ಬಂದ ಮೊವಿಂಗ್ ರೆಸ್ಟೋರೆಂಟ್ ನಲ್ಲಿ ಖರೀದಿ ಮಾಡಿದ್ದು (ಮೇಲಿನ ಚಿತ್ರ ನೋಡಿ). ಸತ್ತು ಬಿದ್ದಿದ್ದ ಮೀನುಗಳಿಂದ ಬಂದ ವಾಸನೆಯಿಂದ ಮೂಗು ಮುಚ್ಚಿಕೊಂಡಿದ್ದು. ಎಲ್ಲರೂ ಸೇರಿ ಹರಟೆ ಹೊಡೆದಿದ್ದು. ನಮ್ಮ ನಮ್ಮ ಸಂತೋಷದ ಹಾಗು ಉಲ್ಲಾಸದ ನೆನಪುಗಳನ್ನು ನೆನಪಿಸಿಕೊಂಡಿದ್ದು. ಒಬ್ಬರನ್ನೊಬ್ಬರು ಚೂಡಯಿಸಿದ್ದು. ರಸ್ತೆ ಮಧ್ಯದಲ್ಲಿ ಕುಳಿತು ಫೋಟೋ ತೆಗಿಸಿಕೊಂಡಿದ್ದು. ಒಟ್ಟಿನಲ್ಲಿ ಇದು ನನ್ನ ನೆನಪಿನ ಪುಟಗಳಲ್ಲಿ ಒಂದು ಮರೆಯಲಾರದ ದಿನ.
Share/Save/Bookmark

Tuesday, June 15, 2010

ಬಾಗಲಕೋಟೆ ಪ್ರವಾಸ

ನಾವೆಲ್ಲರೂ ಸೇರಿ ಇತ್ತೀಚಿಗೆ ಸ್ನೇಹಿತರ ಮದುವೆಗಳ ಪ್ರಯುಕ್ತ ಬಾಗಲಕೋಟೆಗೆ ಹೋಗಿದ್ದೆವು. ಹಾಗೆ ಹತ್ತಿರವಿರುವ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಬನಶಂಕರಿ, ಮಹಾಕೂಟ, ಪಟ್ಟದಕಲ್ಲು, ಐಹೊಳೆಗೆ ಸಹ ಹೋಗಿಬಂದೆವು. ನಿಜಕ್ಕೂ ಎಂತಹ ಅದ್ಭುತ ಸ್ಥಳಗಳು. ಜೀವನದಲ್ಲಿ ಒಮ್ಮೆಯಾದರು ನೋಡಲೇಬೇಕು.

ಬಾದಾಮಿ:
ವಾತಾಪಿ (ಇಂದಿನ ಬಾದಾಮಿ) ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯ ವಂಶವು ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. ವಾಸ್ತುಶಿಲ್ಪ ಮತ್ತು ಕಲೆಗೆ ಚಾಲುಕ್ಯ ಸಾಮ್ರಾಜ್ಯದ ಕೊಡುಗೆ ಅಪಾರ.ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು. ಗುಡ್ಡದ ಕಲ್ಲು ಬಾದಾಮಿ ಪದಾರ್ಥದ ಬಣ್ಣವನ್ನು ಹೋಲುವುದರಿಂದ ಈ ಸ್ಥಳಕ್ಕೆ ಬಾದಾಮಿ ಎಂದು ಹೆಸರು ಬಂತು ಎಂದು ಕೆಲವು ಮೂಲಗಳ ಪ್ರಕಾರ ಹೇಳಲಾಗಿದೆ. ಚಾಲುಕ್ಯರು ಮೂಲತ ವೈಷ್ಣವರು, ನಂತರ ಅವರು ಶೈವಧರ್ಮಕ್ಕೆ ಮತಾಂತರಗೊಂಡರು.


ಹರಿಹರರ ಚಿತ್ರದ ಹಾಗೆ ಪಕ್ಕದಲ್ಲಿನ ಈ ಚಿತ್ರದಲ್ಲಿ ಅವರ ಆನೆ-ನಂದಿ ವಾಹನಗಳನ್ನು ಕೂಡ ಹೊಂದಿಸಿ ಈ ಚಿತ್ರವನ್ನು ಕೆತ್ತಿದ್ದಾರೆ. ವಿಷ್ಣುವಿನ ವಾಹನ ಗರುಡ ಪಕ್ಷಿ, ಆದರೆ ಅದಕ್ಕೂ ಮುಂಚೆ ವಿಷ್ಣುವಿನ ವಾಹನ ಆನೆಯಾಗಿತ್ತಂತೆ.


ಈ ಚಿತ್ರದಲ್ಲಿ ಶಿವನ ವಾಹನವಾದ ನಂದಿಯ ಮೇಲೆ ಶಿವಪಾರ್ವತಿ ಕುಳಿತುಕೊಂಡಿದ್ದಾರೆ. ಪಾರ್ವತಿ ಈ ಚಿತ್ರದಲ್ಲಿ ಇಂದಿನ ಕಾಲದ ಹುಡುಗೀರು ತಮ್ಮ ಬಾಯ್ ಫ್ರೆಂಡ್ ಗಾಡಿ ಓಡಿಸುವಾಗ ಹಿಂದೆ ಕುಳಿತುಕೊಳ್ಳುವ ಶೈಲಿಯಲ್ಲಿ ಕುಳಿತುಕೊಂಡಿರುವುದು ವಿಶೇಷ.

ಪಟ್ಟದಕಲ್ಲು:


ಐಹೊಳೆ:

ನಮ್ಮ ದೇಶದ ಲೋಕಸಭೆಯ ಕಟ್ಟಡವು ಐಹೊಳೆಯಲ್ಲಿನ ಈ ದುರ್ಗಾ ದೇವಾಲಯವನ್ನು ಹೋಲುತ್ತದೆ.


ಚಾಲುಕ್ಯರ ಲಾಂಛನ. ಈ ಲಾಂಛನದಲ್ಲಿ ವರಾಹವನ್ನು ಕಾಣಬಹುದು. ವರಾಹ ಅವತಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದೆನಿಸಿದೆ. ಅವರ ನಾಣ್ಯದಲ್ಲಿ ವರಾಹ ಇದ್ದುದರಿಂದ, ಅವರು ನಾಣ್ಯವನ್ನು ವರಾಹ ಎನ್ನುತ್ತಿದ್ದರು. ನೀವು ಕೂಡ ಕೇಳಿರಬಹುದು. ಉದಾಹರಣೆಗೆ: ರಾಜನು ನೂರು ವರಹಗಳನ್ನು ಕಾಣಿಕೆಯಾಗಿ ಕೊಟ್ಟನು.

ಹೆಚ್ಚಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ
ಚಾಲುಕ್ಯ Chalukya dynasty ಬಾದಾಮಿ ಪಟ್ಟದಕಲ್ಲು ಐಹೊಳೆ
Share/Save/Bookmark

Monday, June 7, 2010

ಬಾ ಮಳೆಯೇ ಬಾ

ಬಿ.ಆರ್. ಲಕ್ಷ್ಮಣರಾವ್ ಅವರು ಬರೆದ "ಬಾ ಮಳೆಯೇ ಬಾ" ನಮ್ಮೆಲ್ಲರಿಗೂ ತುಂಬಾ ಇಷ್ಟವಾದ ಹಾಡು. ಸೋನುನಿಗಮ್ ಕೂಡ ಆ ಹಾಡನ್ನು ತುಂಬ ಸೊಗಸಾಗಿ ಹಾಡಿ, ನಮ್ಮ ಮನದಲ್ಲೇ ಉಳಿಯುವಂತೆ ಮಾಡಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳು.

ಅದೇನೋ ಗೊತ್ತಿಲ್ಲ. ಕೆಲವು ಹಾಡುಗಳು, ನನಗೆ ಬರುವ ಸನ್ನಿವೇಶಕ್ಕೆ ತಕ್ಕಂತೆ ನನ್ನ ಬಾಯಲ್ಲಿ ಬದಲಾಗುತ್ತಿರುತ್ತವೆ. ಹಾಗೆ ಈ ಹಾಡಿನ ಕೆಲವು ಸಾಲುಗಳು ಆಫೀಸ್-ಮನೆ ನಡುವೆ ನನ್ನ ಬಾಯಲ್ಲಿ ಬದಲಾದ ಬಗೆ ನೋಡಿ.

Manager: ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನಮ್ಮ Employees ಆಫೀಸಿಗೆ ಬರಲಾರದಂತೆ
ಅವರಿಲ್ಲಿ ಬಂದೊಡನೇ, ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, ಹಿಂತಿರುಗಿ ಹೋಗದಂತೆ, ಬಿಡದೇ ಬಿರುಸಾಗಿ ಸುರಿ

Employee: ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನಾನು ಆಫೀಸಿನಿಂದ ಮನೆಗೆ ಬರಲಾರದಂತೆ
ನಾ ಮನೆಗೆ ಬಂದೊಡನೇ, ಬಿಡದೇ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, (ನಾಳೆ ಆಫೀಸಿಗೆ) ಹಿಂತಿರುಗಿ ಹೋಗದಂತೆ, ಬಿಡದೇ ಬಿರುಸಾಗಿ ಸುರಿ

Employee ಹೆಂಡ್ತಿ: ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಕಾದಿಹೆನು ಮನೆಯಲ್ಲಿ, ಅವರಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು, ಮತ್ತೆ ನಾಳೆಯಾಗದಂತೆ.

ಇದಕ್ಕೆ ನಿಮ್ಮ ಕ್ಷಮೆಯಿರಲಿ....

ಇಂತಿ ನಿಮ್ಮ ಪ್ರೀತಿಯ
ಶಿವಪ್ರಕಾಶ್.

Share/Save/Bookmark

Thursday, March 11, 2010

ಹೀಗೆ ಸುಮ್ಮನೆ

ಹೀಗೆ ಸುಮ್ಮನೆ.... ನಾನು ಮದುವೆಯಾಗುವ ಹುಡುಗಿ, ಯಾವ ಕೆಲಸದಲ್ಲಿದ್ದರೆ ಹೇಗೆ ವರ್ತಿಸಬಹುದು ಎಂದು ಆಲೋಚಿಸುತ್ತಿರುವಾಗ ಹೊಳೆದ ಕೆಲವು ಸಾಲುಗಳು....

ಒಂದು ವೇಳೆ ಹುಡುಗಿ Software Tester ಆಗಿದ್ರೆ ಹೇಗೆ...?
ಬೇಡ ಬಿಡಿ,
ನಾನು ಏನೇ ಕೆಲಸ ಮಾಡಿದ್ರು Bugs ಕಂಡುಹಿಡಿಯುವಳೇನೋ....

ಹುಡುಗಿ HR ಆಗಿದ್ರೆ ಹೇಗೆ...?
ಬೇಡ ಬಿಡಿ,
ಮಾತು ಮಾತಿಗೂ Mail (ಮಿಂಚಂಚೆ) ಕಳಿಸು ಎನ್ನಬಹುದೇನೋ...?

ಹುಡುಗಿ Accountant ಆಗಿದ್ರೆ ಹೇಗೆ...?
ಬೇಡ ಬಿಡಿ,
ಪ್ರತಿಯೊಂದಕ್ಕೂ ಲೆಕ್ಕ ಕೇಳಿದ್ರೆ ಕಷ್ಟ ಆಗುತ್ತೆ...

ಹುಡುಗಿ ಲೇಖಕಿ ಆಗಿದ್ರೆ ಹೇಗೆ ...?
ಬೇಡ ಬಿಡಿ,
ಮನೆಯಲ್ಲಿ ನಡೆಯೋ ಪ್ರತಿಯೊಂದು ವಿಷಯದ ಬಗ್ಗೆ ಪುಸ್ತಕ ಬರೆದರೆ ಕಷ್ಟ.

ಹುಡುಗಿ ಡಾಕ್ಟರ್ ಆಗಿದ್ರೆ ಹೇಗೆ ...?
ಬೇಡ ಬಿಡಿ,
ಸಣ್ಣ ಪುಟ್ಟ ಜ್ವರಕ್ಕು, ಇಂಜೆಕ್ಷನ್ ಹಾಕಿದ್ರೆ ಕಷ್ಟ.

ಹುಡುಗಿ ಲಾಯರ್ ಆಗಿದ್ರೆ ಹೇಗೆ ...?
ಬೇಡ ಬಿಡಿ,
ನಾನು ಅಪ್ಪಿ ತಪ್ಪಿ ಏನಾದ್ರು ತಪ್ಪು ಮಾಡಿದಾಗ, ಕೋರ್ಟ್ ನಲ್ಲಿ ಕೇಸ್ ಹಾಕಿದ್ರೆ ಕಷ್ಟ...

ಇಷ್ಟು ಸಾಕು ಅನ್ಸುತ್ತೆ.... ಮುಂದೆ ನೀವೇ ಬರೆದುಕೊಳ್ಳಿ.....
Share/Save/Bookmark

Friday, January 29, 2010

ಒಂದು ಭಯಾನಕ ರಾತ್ರಿ

ಕಳೆದ ಡಿಸೆಂಬರ್ ತಿಂಗಳಿನ ೨೫, ೨೬, ೨೭ನೆ ತಾರೀಕು ಕಚೇರಿಗೆ ರಜಾ ಇದ್ದ ಪ್ರಯುಕ್ತ, ನನ್ನ ಗೆಳೆಯ ಇಂದ್ರ ಹಾಗು ಅವನ ಸಹೋದ್ಯೋಗಿಗಳ ಒಂದು ಪ್ರವಾಸಕ್ಕೆ ಪ್ಲಾನ್ ಹಾಕಿಕೊಂಡರು. ಅದರಲ್ಲಿ ೬-ಗಂಡಸರು, ೬-ಹೆಂಗಸರು, ೪-ಚಿಕ್ಕ ಮಕ್ಕಳು ಇದ್ದರು. ಪ್ರವಾಸಕ್ಕೆ ೧೪ ಆಸನಗಳುಳ್ಳ ಟೆಂಪೊ ಟ್ರಾವೆಲ್ಲೆರ್ (ಟಿ.ಟಿ) ಬುಕ್ ಮಾಡಲು ಇಂದ್ರ ನನ್ನ ಸಹಾಯ ಕೇಳಿದ.
ನಾನು ನನಗೆ ಪರಿಚಯವಿದ್ದ ಬಸವನ ಸಹಾಯ ಕೇಳಿದೆ. ನಮ್ಮ ಬಸವ, ಅವನ ಮನೆ ಪಕ್ಕದಲ್ಲೆ ಇದ್ದ ಟ್ರಾವೆಲ್ ಎಜೆನ್ಸಿಯಲ್ಲಿ ಒಂದು ಟಿ.ಟಿ ಯನ್ನು ಬುಕ್ ಮಾಡಿದ. ಆ ಟ್ರಾವೆಲ್ ಎಜೆನ್ಸಿಯವನು ಟಿ.ಟಿ ಹೊಂದಿರುವ ಮಾಲೀಕನ ಮೊಬೈಲ್ಗೆ ಕರೆ ಮಾಡಿ ೨೪ನೆ ತಾರೀಕು ರಾತ್ರಿ ೮ ಘಂಟೆಗೆ ಸರಿಯಾಗಿ ವಿಜಯನಗರದಲ್ಲಿ ಮೊದಲು ಪಿಕ್-ಅಪ್ ಮಾಡುವಂತೆ ಹೇಳಿದೆವು.

ಡಿಸೆಂಬರ್ ೨೪, ರಾತ್ರಿ ೭:೩೦ಕ್ಕೆ ವಿಜಯನಗರದ ಬಸ್ ಸ್ಟಾಪ್ ಹತ್ತಿರ ಪ್ರಸಾದ್ ಬಂದು ಕಾಯುತ್ತಾ ನಿಂತ. ರಾತ್ರಿ ೮ ಘಂಟೆಗೆ ಬರಬೇಕಾಗಿದ್ದ ಟಿ.ಟಿ, ೯ ಘಂಟೆಯಾದರು ಬರಲೇ ಇಲ್ಲ. ಇಂದ್ರನಿಗೆ ಈ ವಿಷಯ ತಿಳಿಸಿದ. ಇಂದ್ರ ಟಿ.ಟಿ ಮಾಲೀಕನಿಗೆ ಫೊನ್ ಮಾಡಿದ.
ಇಂದ್ರ: "ಸರ್, ಎಂಟು ಘಂಟೆಗೆ ಬರಲು ಹೇಳಿದ್ದ ಟಿ.ಟಿ. ಒಂಬತ್ತು ಘಂಟೆಯಾದರು ಇನ್ನೂ ಬಂದಿಲ್ಲ. ಇನ್ನೂ ಎಸ್ಟೊತ್ತಿಗೆ ಬರುತ್ತೆ ?"
ಟಿ.ಟಿ ಮಾಲೀಕ: "ಕಾರಣಾಂತರಗಳಿಂದ ಟಿ.ಟಿ ಕಳಿಸಲು ಆಗುವುದಿಲ್ಲ. ನೀವು ಬೇರೆ ಟಿ.ಟಿ ಯನ್ನು ನೊಡಿಕೊಳ್ಳಿ ಸರ್. ಕ್ಷಮಿಸಿ"
ಇಂದ್ರ: "ಮುಂಚೇನೆ ಹೇಳಿದ್ದರೆ, ನಾವು ಬೇರೇ ಕಡೆ ನೊಡ್ಕೊಳ್ತಾ ಇದ್ವಿ. ನೀವು ಈಗ ಹೇಳಿದರೆ ಹೇಗೆ ?"
ಟಿ.ಟಿ ಮಾಲೀಕ "ಕ್ಷಮಿಸಿ ಸರ್" ಎಂದು ಹೇಳಿ ಫೊನ್ ಕಟ್ ಮಾಡಿದ.

ನಮ್ಮ ಇಂದ್ರ ಟ್ರಾವೆಲ್ ಎಜೆನ್ಸಿಯವನಿಗೆ ಫೊನ್ ಮಾಡಿದ. ಟ್ರಾವೆಲ್ ಎಜೆನ್ಸಿಯವನು "ಈಗಲೇ ಆ ಟಿ.ಟಿ. ಮಾಲೀಕನಿಗೆ ಫೊನ್ ಮಾಡಿ ಕೇಳುತ್ತೇನೆ ಸರ್" ಎಂದ.
ಕೊನೆಗೆ ಆ ಟ್ರಾವೆಲ್ ಎಜೆನ್ಸಿಯವನು ಫೊನ್ ಮಾಡಿ "ಸರ್, ಆ ಮಾಲೀಕ ಏನೇನೊ ಕಾರಣಗಳನ್ನು ಹೇಳುತ್ತಿದ್ದಾನೆ. ನಾನು ಬೇರೇ ಎಲ್ಲಾ ಕಡೆ ವಿಚಾರಿಸಿದೆ. ಕ್ರಿಸ್ಮಸ್ ಹಬ್ಬ ಹಾಗು ಮೂರು ದಿನಗಳ ರಜೆ ಇರುವುದರಿಂದ ಎಲ್ಲೂ ಟಿ.ಟಿ ಸಿಗುತ್ತಿಲ್ಲ. ಎಲ್ಲಾ ಟಿ.ಟಿ ಗಳು ಬುಕ್ ಆಗಿ ಹೋಗಿವೆ" ಎಂದ.
"ನಾವು ಈಗ ಏನು ಮಾಡಬೇಕು ಹೇಳಿ? ಇದೆ ಕಾರಣಕ್ಕಾಗಿ ನಾವು ನಿಮಗೆ ಒಂದು ವಾರದ ಮುಂಚೆಯೇ ತಿಳಿಸಿದ್ದೇವೆ. ನೀವು ಈಗ ಕೈಕೊಟ್ಟರೆ ನಾವು ಎನು ಮಾಡಬೇಕು. ಮುಂಚೇನೆ ಆಗುವುದಿಲ್ಲ ಎಂದು ಹೇಳಬೇಕಿತ್ತು" ಎಂದು ಇಂದ್ರ ಕೇಳಿದ.
ಅದಕ್ಕೆ ಆ ಟ್ರಾವೆಲ್ ಎಜೆನ್ಸಿಯವನು "ಸರ್. ನೀವು ನನ್ನನ್ನು ನಂಬಿದ ಹಾಗೆ, ನಾನು ಆ ಟಿ.ಟಿ ಮಾಲೀಕನನ್ನು ನಂಬಿದ್ದೆ. ಅವನು ಈಗ ಕೈಕೊಟ್ಟಿದ್ದಾನೆ. ನಾನು ಎನು ಮಾಡಲಿ ಹೇಳಿ ಸರ್?" ಎಂದು ಪ್ರಶ್ನೆ ಹಾಕಿದ ಹಾಗೆ "ನಿಮಗೆ ಬೇಕಾದರೆ ಒಂದು ಟಾಟಾ ಸುಮೊ ಹಾಗು ಒಂದು ಇಂಡಿಕಾ ರೆಡಿ ಮಾಡಿ ಕೊಡುತ್ತೇನೆ ಸರ್" ಎಂದ.
ಇತ್ತಾ ಪ್ರವಾಸಕ್ಕೆ ರೆಡಿಯಾಗಿ ಮನೆಯ ಮುಂದೆ ಕಾಯುತ್ತಾ ನಿಂತ ೧೩ ಜನ, ಒಬ್ಬರದ ನಂತರ ಒಬ್ಬರು ಕರೆ ಮಾಡಿ "ಎನಾಯ್ತೊ ? ಇಸ್ಟೊತ್ತಾದರು ಇನ್ನು ಗಾಡಿ ಬಂದಿಲ್ವಲ್ಲೊ" ಎನ್ನುವ ಪ್ರಶ್ನೆಗಳು ಸುರಿಮಳೆ.
ಅದರಲ್ಲೂ ಸ್ನೇಹಾ ಎನ್ನುವ ಹುಡುಗಿ "ಇಂದ್ರ, ಎಲ್ಲಾರ ಹತ್ತಿರ ಟ್ರಿಪ್ ಹೋಗ್ತಾ ಇದೀವಿ ಅಂತಾ ಹೇಳಿ ಸಿಕ್ಕಾಪಟ್ಟೆ ಸ್ಕೊಪ್ ಬೇರೆ ತಗೊಂಡಿದೀವಿ. ಹೇಗಾದರು ಮಾಡಿ ಟ್ರಿಪ್ ಕ್ಯಾನ್ಸಲ್ ಆಗದಂತೆ ನೋಡ್ಕೊಳೋ..." ಎನ್ನುವ ಡೈಲಾಗ್ ಬೇರೆ.
ನಮ್ಮ ಇಂದ್ರನಿಗೆ ತೆಲೆ ಬಿಸಿಯಾಯಿತು.

ವಿಷಯ ನನಗೂ ಗೊತ್ತಾಯಿತು. ನಾನು ಕೂಡ ಟ್ರಾವೆಲ್ ಎಜೆನ್ಸಿಯವನಿಗೆ ಫೊನ್ ಮಾಡಿ ದಬಾಯಿಸಿದೆ. ಆದರೆ ಯಾವುದೇ ಉಪಯೋಗವಾಗಲಿಲ್ಲ. ಈ ಹೊತ್ತಿಗಾಗಲೆ ರಾತ್ರಿ ೧೦:೩೦ ಆಗಿತ್ತು. ಆ ಹೊತ್ತಿನಲ್ಲಿ ಮತ್ತೊಂದು ಟಿ.ಟಿ ಹುಡುಕಲು ಇಂದ್ರ ತನಗೆ ಗೊತ್ತಿದ್ದ ಸ್ನೇಹಿತರಿಗೆ ಫೊನ್ ಮಾಡಿದ. ಯಾವ ಉಪಯೋಗವಾಗಲಿಲ್ಲ.
ಇತ್ತ ನಾನು, ಬಸವ ಇಬ್ಬರು ಸೇರಿ ಟಿ.ಟಿ. ಗಾಗಿ ಗೊತ್ತಿದ್ದವರಿಗೆಲ್ಲ ಫೊನ್ ಮಾಡಿದೆವು. ಎಲ್ಲೂ ಟಿ.ಟಿ. ಸಿಗದಾಯಿತು.
ಕೊನೆಗೆ ಬೇರೆ ದಾರಿಯಿಲ್ಲದೆ, ಒಬ್ಬ ಟ್ರವೆಲ್ ಎಜೆನ್ಟಿಗೆ ಕರೆ ಮಾಡಿ ಎರೆಡು ಟಾಟಾ ಸುಮೊ ಕಳಿಸುವಂತೆ ಹೇಳಿದೆವು.
"ಆಯ್ತು ಸರ್" ಈಗಲೇ ಕಳಿಸಿಕೊಡುತ್ತೆನೆ ಎಂದ. ಇನೈದು ನಿಮಿಷದಲ್ಲಿ ನಿಮಗೆ ಡ್ರೈವರುಗಳ ಫೊನ್ ನಂಬರುಗಳನ್ನು ಕೊಡುತ್ತೆನೆ ಎಂದು ಹೇಳಿ ಫೊನ್ ಇಟ್ಟ.
ಐದು ನಿಮಿಷ ಅಲ್ಲ, ಅರ್ಧ ಘಂಟೆಯಾದರು ಆ ವ್ಯಕ್ತಿಯಿಂದ ಯಾವುದೇ ಫೊನ್ ಕರೆ ಬರಲೇ ಇಲ್ಲ. ನಾವು ಕರೆ ಮಾಡಿದರೆ "ನೀವು ತಲುಪಲು ಪ್ರಯತ್ನಿಸುತ್ತಿರುವ ಗ್ರಾಹಕ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ.....". ಇತ್ತ ಇಂದ್ರನಿಗೆ ಪ್ರವಾಸಕ್ಕೆ ಕಾದುನಿಂತವರಿಂದ ಕರೆಗಳ ಮೇಲೆ ಕರೆಗಳು.
ಅಂತು ನಲವತ್ತು ನಿಮಿಷದ ಬಳಿಕ ಆ ವ್ಯಕ್ತಿಯ ಕರೆ ಬಂತು. ಡ್ರೈವರುಗಳ ಫೊನ್ ನಂಬರುಗಳನ್ನು ಕೊಟ್ಟ. "ಅವರಿಗೆ ಫೊನ್ ಮಾಡಿ, ಎಲ್ಲಿಗೆ ಬರಬೇಕು ಅಂತ ಹೇಳಿ ಸರ್" ಎಂದು ಹೇಳಿದ. ಆಗಲೇ ಸಮಯ ೧೧:೪೫ ಆಗಿತ್ತು.
ಡ್ರೈವರುಗಳಿಗೆ ಫೊನ್ ಮಾಡಿ ಎಲ್ಲೆಲ್ಲಿಗೆ ಬರಬೇಕು ಎಂದು ತಿಳಿಸಿದೆವು.
ವಿಚಿತ್ರ ಎಂದರೆ ಆ ಟಾಟಾ ಸುಮೊಗಳು ಬರುತ್ತಿದ್ದುದು ಕನಕಪುರದಿಂದ. ಒಂದು ಘಂಟೆಗೆ ನೀವು ತಿಳಿಸಿದ ಸ್ತಳದಲ್ಲಿ ಇರುತ್ತೆವೆ ಸರ್ ಎಂದರು.
ಕೊನೆಗೆ ಬೆಳಗಿನ ಜಾವ ೧:೩೦ಕ್ಕೆ ಗಾಡಿಗಳು ಬಂದವು.
ಅಂತು ನಮ್ಮ ಇಂದ್ರ ಟಾಟಾ ಸುಮೊ ಹತ್ತಿದ. ಅವನ ನಂತರ "ರೆಚಲ್" ಎನ್ನುವ ಹುಡುಗಿಯನ್ನು ಪಿಕ್-ಅಪ್ ಮಾಡಬೇಕಿತ್ತು. ಅವಳಿಗೆ ಕರೆ ಮಾಡಿದ. ಅವಳು ಕರೆ ಸ್ವೀಕರಿಸಲಿಲ್ಲ. ಇಂದ್ರ ಹಾಗು ಎಲ್ಲರೂ ಸೇರಿ ಎಸ್ಟು ಬಾರಿ ಕರೆ ಮಾಡಿದರು ಅವಳು ಕರೆಯನ್ನು ಸ್ವೀಕರಿಸಲಿಲ್ಲ. ಅವಳು ವಾಸವಿದ್ದ ಏರಿಯಾದ ಹೆಸರು ಗೊತ್ತಿತ್ತು ಆದರೆ ಮನೆ ಯಾವುದೆಂದು ಗೊತ್ತಿರಲಿಲ್ಲ. ಆ ಏರಿಯಾದಲ್ಲಿ ಒಂದೆರೆಡು ರೌಂಡ್ ಹೊಡೆದ. ಆ ಹೊತ್ತಿನಲ್ಲಿ ಧೈರ್ಯ ಮಾಡಿ, ಕೆಲವು ಮನೆಗಳ ಕದವನ್ನು ತಟ್ಟಿ ಕೇಳಿದ. ಪ್ರಯತ್ನಗಳು ಪಲಿಸಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಅವಳನ್ನು ಬಿಟ್ಟು ಅವಳ ಮುಂದಿನ ಪಿಕ್-ಅಪ್ ಗಳನ್ನು ಮಾಡಿದರು.
ಬೆಳಿಗ್ಗೆ ೩:೩೦ ಎಲ್ಲರನ್ನು (ರೆಚಲ್ ಬಿಟ್ಟು) ಪಿಕ್-ಅಪ್ ಮಾಡಿಕೊಂಡು ಬೆಂಗಳೂರು ಬಿಡಬೇಕೆನ್ನುವಾಗ ಒಂದು ಅಂತಾರಾಷ್ಟ್ರೀಯ ಕರೆ ಬಂತು. ಇದ್ಯಾರಪ್ಪ ಇಸ್ಟೊತ್ತಿನಲ್ಲಿ ಅಂತಾರಾಷ್ಟ್ರೀಯ ಕರೆ ಎಂದು ಫೊನ್ ಎತ್ತಿದ.
"ಇಂದ್ರ ಅವರೇ, ನಾನು ಥಾಮಸ್ ಅಂತ. ರೆಚಲ್ ಅವರ ಪತಿ. ನಾನು ಫಿನ್ಲ್ಯಾಂಡ್ನಲ್ಲಿ ಇದೀನಿ. ಅವಳು ಫೊನ್ ಸ್ವೀಕರಿಸುತ್ತಿಲ್ಲ. ನಿಮ್ಮೆಲ್ಲರ ಜೊತೆ ಟ್ರಿಪ್ ಹೋಗ್ತಿನಿ ಎಂದು ಹೇಳಿದ್ದಳು. ಅವಳಿಗೆ ಸ್ವಲ್ಪ ಫೊನ್ ಕೊಡುತ್ತೀರಾ ಪ್ಲಿಸ್..?" ಎಂದ.
ಇಂದ್ರ "ಅವಳೀಗ ನಮ್ಮ ಜೊತೆ ಇಲ್ಲ. ಅವಳಿಗೆ ಎಸ್ಟು ಬಾರಿ ಫೊನ್ ಮಾಡಿದರು ಅವಳು ಕರೆಯನ್ನು ಸ್ವೀಕರಿಸಲಿಲ್ಲ.".
"ಅವಳು ಯಾಕೊ ಫೊನ್ ಕೂಡ ಎತ್ತುತ್ತಿಲ್ಲ. ನನಗೆ ಭಯವಾಗುತ್ತಿದೆ. ನಾನು ನಿಮಗೆ ವಿಳಾಸವನ್ನು ಹೇಳುತ್ತೇನೆ. ದಯವಿಟ್ಟು ಹೋಗುತ್ತೀರಾ..." ಎಂದು ಥಾಮಸ್ ಕೇಳಿಕೊಂಡ.
ಥಾಮಸ್ ಫೊನಿನಲ್ಲಿ ದಾರಿಯನ್ನು ಹೇಳುತ್ತಿದ್ದ. ಅವನು ಹೇಳಿದ ಹಾಗೆ ಹೋಗಿ, ರೆಚಲ್ ಮನೆ ಮುಂದೆ ಹೋಗಿ ನಿಂತು, ಡೊರ್ ಬೆಲ್ ರಿಂಗ್ ಮಾಡಿದರು. ಬಾಗಿಲು ತೆಗೆಯಲಿಲ್ಲ.
ಹೀಗೆ ಒಂದೈದು ನಿಮಿಷ ಕದವನ್ನು ತಟ್ಟಿದರು....ಡೊರ್ ಬೆಲ್ ರಿಂಗ್ ಮಾಡಿದರು......
ಅವಳು ಬಾಗಿಲು ತೆಗೆಯಲಿಲ್ಲ....
ಎಲ್ಲರ ಎದೆ ಬಡಿತಾ ಜೊರಾಗಿ ಹೊಡೆದುಕೊಳ್ಳುತ್ತಿತ್ತು...
ಪುನಹ.... ಕದವನ್ನು ತಟ್ಟಿದರು....ಡೊರ್ ಬೆಲ್ ರಿಂಗ್ ಮಾಡಿದರು......
ಕೊನೆಗೆ...
ಒಳಗಡೆ ಕುಂಬಕರ್ಣ ನಿದ್ದೆ ಮಾಡುತ್ತಿದ್ದ ರೆಚಲ್ ಗೆ ಎಚ್ಚರವಾಯಿತು.
ಅವಳು ಬಂದು ಬಾಗಿಲು ತೆಗೆದಾಗ ಎಲ್ಲರ ಪಿತ್ತ ನೆತ್ತಿಗೇರಿತ್ತು.
"ಯಾಕೆ ಫೊನ್ ಎತ್ತಲಿಲ್ಲ...?" ಎಂದು ಸಿಟ್ಟಿನಲ್ಲಿ ಕೇಳಬೇಕು ಎನ್ನುವಸ್ಟರಲ್ಲಿ ಅವಳೇ "ಸಾರಿ.... ಸಾರಿ.... ಸಾರಿ... ಚರ್ಚ್ ಗೆ ಹೋದಾಗ ಫೊನ್ ಸೈಲೆನ್ಟ್ ಮೊಡ್ ನಲ್ಲಿ ಇಟ್ಟಿದ್ದೆ. ಚರ್ಚ್ ನಿಂದ ಹೊರಬಂದ ನಂತರ ಅದನ್ನು ತೆಗೆಯೋದನ್ನು ಮರೆತುಬಿಟ್ಟೆ..." ಎಂದಳು...
ಥಾಮಸ್ ಹಾಗು ಎಲ್ಲರು ಸಮಾಧಾನದಿಂದ ನಿಟ್ಟಿಸುರು ಬಿಟ್ಟರು. ಪ್ಲಾನ್ ಪ್ರಕಾರ ಪ್ರಯಾಣ ಮುಂದುವರೆಸಿದರು.
ಅಂತು ಎಲ್ಲರು (ರೆಚಲ್ ನ್ನು ಸೇರಿಸಿ) ಬೆಂಗಳೂರು ಬಿಟ್ಟಾಗ ಬೆಳಿಗ್ಗೆ ೫:೩೦ ಆಗಿತ್ತು......

ಲೇಖನ ಬಹಳ ಉದ್ದವಾಗಿದ್ದರಿಂದ ಆ ರಾತ್ರಿ ನಡೆದ ಬಹಳಷ್ಟು ವಿಷಯಗಳನ್ನು ಬಿಟ್ಟಿದ್ದೇನೆ. ಬಹುಶಃ "One Night @ the Call Center" ಪುಸ್ತಕದ ತರಹ ಒಂದು ಪುಸ್ತಕ ಬರೆಯವಹುದು ಅಸ್ಟು ದೊಡ್ಡದಾಗಿತ್ತು ಆ ರಾತ್ರಿ...
Share/Save/Bookmark

Wednesday, January 20, 2010

ಎಲ್ಲ ಮರೆತಿರುವಾಗ

ಈ ಘಟನೆ ಎರೆಡು ವರ್ಷದ ಹಿಂದೆ ನಡೆದಿದ್ದು.

ನನ್ನ ಮನೆಯ ಹತ್ತಿರದಲ್ಲೇ ಒಂದು ಸುಂದರವಾದ ಉದ್ಯಾನವನ ಇದೆ. ನಾನು ಜಾಗಿಂಗ್ ಮಾಡಲು ಅಪರೂಪಕ್ಕೊಮ್ಮೆ ಅಲ್ಲಿಗೆ ಹೋಗುತ್ತೇನೆ.
ಹೀಗೆ ಒಮ್ಮೆ ಜಾಗಿಂಗ್ ಮಾಡಲು ಉದ್ಯಾನವನದ ಒಳಗೆ ಹೋದೆ. ಅಲ್ಲಿ ಒಂದು ಧಾರಾವಾಹಿಯ ಶೂಟಿಂಗ್ ನಡೆಯುತ್ತಿತ್ತು.
ಈ ಉದ್ಯಾನವನದಲ್ಲಿ, ವಾರದಲ್ಲಿ ಒಂದು ಬಾರಿಯಾದರೂ ಯಾವುದಾದರೂ ಒಂದು ಧಾರಾವಾಹಿಯ ಶೂಟಿಂಗ್ ನಡೀತಾ ಇರುತ್ತದೆ.
ಅಲ್ಲಿ ನನಗೆ ಪರಿಚಯವಿದ್ದ ಒಬ್ಬ ಕಿರುತರೆ ಕಲಾವಿದ ಕಾಣಿಸಿದ.
ಆ ಕಲಾವಿದ ನನಗಿಂತ ನನ್ನ ತಮ್ಮನಿಗೆ ತುಂಬಾ ಪರಿಚಯ. ಒಂದೆರಡು ಬಾರಿ ಅವರು ನಮ್ಮ ಮನೆಗೂ ಬಂದಿದ್ದರು.
ನಾನು, ನನ್ನ ತಮ್ಮ ಹಾಗು ಅವರು ಸೇರಿ ಒಂದೆರೆಡು ಬಾರಿ ಹೋಟೆಲ್ನಲ್ಲಿ ಟೀ ಕೂಡ ಕುಡಿದಿದ್ದೆವು.

ಅವರು ಇನ್ನೊಬ್ಬ ಕಿರುತೆರೆ ಕಲಾವಿದನ ಜೊತೆ ಅಲ್ಲಿ ಮಾತನಾಡುತ್ತ ನಿಂತಿದ್ದರು. ನಾನು ಅವರನ್ನು ಮಾತನಾಡಿಸಲು ಹೋದೆ.
ಅವರ ಹತ್ತಿರ ಹೋಗಿ "ಹಲೋ ಸರ್, ಹೇಗಿದ್ದೀರಿ" ಎಂದೆ.
ಅವರು "ನಾನು ಚನ್ನಾಗಿದೀನಿ. ನೀವು ಹೇಗಿದೀರಿ..?" ಎಂದು ಆತ್ಮೀಯವಾಗಿ ಕೇಳಿದರು.
ನಾನು "ನಾನು ಚನ್ನಾಗಿದೀನಿ ಸರ್. ಮತ್ತೆ ಏನ್ ವಿಶೇಷ ಸರ್, ಬಹಳದಿನಗಳಿಂದ ನೀವು ನಮ್ಮ ಮನೆಯ ಕಡೆಗೆ ಬಂದೆ ಇಲ್ಲ." ಎಂದೆ.
ಅವರು "ಇಲ್ಲ ರೀ, ಸ್ವಲ್ಪ ಕೆಲಸ ಜಾಸ್ತಿ ಇರೋದ್ರಿಂದ ಬರೋದಕ್ಕೆ ಆಗಲಿಲ್ಲ." ಎಂದರು.
ಹೀಗೆ ಸ್ವಲ್ಪ ಹೊತ್ತು ಮಾತನಾಡಿಸಿದೆ. ನಾನ್ಯಾರು ಅಂತ ಅವರಿಗೆ ಗೊತ್ತಗಿಲ್ಲವೇನೋ ಎನ್ನುವ ಸಂಶಯ ಬಂತು.
ಅದಕ್ಕೆ ಅವರಿಗೆ ಕೇಳಿದೆ... "ನಾನ್ಯಾರು ಅಂತ ಗೊತ್ತಾಯ್ತ ಸರ್...?"
ಆಗ ಅವರು..."ಸಾರೀ ರೀ... ಗೊತ್ತಾಗ್ಲಿಲ್ಲ..." ಎಂದರು..
ನನಗೆ ನಗು ಬಂದು..."ನಾನು ಸರ್, ವೀರೇಶ್ ಅವರ ಅಣ್ಣ, ಶಿವಪ್ರಕಾಶ್" ಎಂದೆ.
ಆಗ ಅವರಿಗೆ ನಾನ್ಯಾರು ಎಂದು ಅರ್ಥವಾಗಿ "ಒಹ್... ಕ್ಷಮಿಸಿ ಶಿವು... ಮರೆತುಬಿಟ್ಟಿದ್ದೆ... ಹೇಗಿದಾನೆ ವೀರೇಶ್...?" ಎಂದು ಹೇಳಿ ನನ್ನ ತಮ್ಮ ಹಾಗು ನಮ್ಮ ಮನೆಯವರನ್ನು ವಿಚಾರಿಸಿದರು.
ಒಂದು ಸ್ವಲ್ಪ ಹೊತ್ತು ಹಾಗೆ ಮಾತನಾಡಿದ ನಂತರ ನಾನು "ಯಾವುದು ಸರ್ ಈ ಧಾರಾವಾಹಿ?" ಎಂದೆ.
ಆಗ ಅವರು "ಎಲ್ಲ ಮರೆತಿರುವಾಗ..." ಎಂದರು..
ಅವರ ಪಕ್ಕದಲ್ಲೇ ನಿಂತಿದ್ದ ಇನ್ನೊಬ್ಬ ಕಿರುತೆರೆ ಕಲಾವಿದ "ಅದಕ್ಕೆ ರೀ, ನಿಮ್ಮನ್ನೂ ಮರೆತುಬಿಟ್ಟಿದ್ದಾರೆ" ಎಂದು ಚಟಾಕಿ ಹಾರಿಸಿದರು.
Share/Save/Bookmark

Monday, January 4, 2010

ಬುದ್ದಿವಂತ(ಚಿತ್ರ ಕೃಪೆ: ಅಂತರ್ಜಾಲ)

ಕೊನೆಯ ವರ್ಷದ ಡಿಪ್ಲೋಮಾ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೆ.
ಮೊದಲ ಎರಡು ವರ್ಷಗಳಲ್ಲಿ ಕಡಿಮೆ ಅಂಕಗಳನ್ನು ಪಡೆದು ಪಾಸಾಗಿದ್ದೆ. ಯಾಕೆ ಅಂತ ಕೇಳಬೇಡಿ. ಅದೊಂದು ದೊಡ್ಡ ಕಥೆ..!!!.
ಇದೇ ಕಾರಣಕ್ಕಾಗಿ ಓದುತ್ತಿದ್ದ ಆ ಕಾಲೇಜ್ ಬಿಟ್ಟು, ಬೇರೆ ಹೆಸರುವಾಸಿಯಾಗಿದ್ದ ಕಾಲೇಜ್ ಸೇರಿಕೊಂಡಿದ್ದೆ.
ಕೊನೆಯ ವರ್ಷದಲ್ಲಾದರೂ ಸ್ವಲ್ಪ ಉತ್ತಮ ಅಂಕಗಳಿಸಿ ಪಾಸಗೋಣವೆಂದು.
ಎಸ್ಟೆ ಕಷ್ಟವಾದರೂ ಸರಿ, ಈ ಕೊನೆಯ ವರ್ಷದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾಗಬೇಕೆಂದು ಶ್ರಮ ಪಟ್ಟಿದ್ದೆ.

"ಫಲಿತಾಂಶ ನಾಳೆ ಬರುತ್ತದೆ..." ಎಂದು ಕೇಳಿದಾಗಿನಿಂದ, ನನ್ನ ಎದೆ ಒಂದೇ ಸಮನೆ ಬಡೆದುಕೊಳ್ಳುತ್ತಿತ್ತು. ಆ ರಾತ್ರಿ ಸರಿಯಾಗಿ ನಿದ್ದೆ ಕೂಡ ಮಾಡಲಿಲ್ಲ.
ಮರುದಿನ ಬೆಳಿಗ್ಗೆ ಬೇಗನೆ ಎದ್ದು ಬಳ್ಳಾರಿಗೆ ಬಂದೆ.
ಸೈಬರ್ ಸೆಂಟರ್ ಮುಂದೆ, ನನ್ನ ಹಾಗೆ ಬಹಳಷ್ಟು ಜನ ಜಮಾಯಿಸಿದ್ದರು.
ಸೈಬರ್ ಸೆಂಟರ್'ನವ ನನ್ನ ನಂಬರ್ ತೆಗೆದುಕೊಂಡು, ಫಲಿತಾಂಶ ಬರೆದುಕೊಳ್ಳುವಂತೆ ಹೇಳಿದ.
ಒಂದೊಂದು ವಿಷಯಗಳ ಅಂಕಗಳನ್ನು ಹೇಳುತ್ತಾ ಹೋದ.. ನಾನು ಬರೆದುಕೊಂಡೆ.
ಅಂತು ಎಲ್ಲಾ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತಿರ್ಣನಾಗಿದ್ದೆ.
ನಾನು, ಎಲ್ಲಾ ಅಂಕಗಳನ್ನು ಸೇರಿಸಿ, ನನ್ನ ಶೇಕಡಾ ಅಂಕವನ್ನು ಲೆಕ್ಕಹಾಕಿದೆ.
ಶೇಕಡಾ 69% ಅಂಕ ಪಡೆದು ಉತ್ತಿರ್ಣನಾಗಿದ್ದೆ.
ಇದೇ ಮೊದಲಬಾರಿಗೆ ಜೀವನದಲ್ಲಿ ಇಷ್ಟು ಅಂಕ ಪಡೆದಿದ್ದು. :)
ತುಂಬಾ ಕುಶಿಯಲ್ಲಿದ್ದೆ. ಮನೆಗೆ ಬಂದು ಎಲ್ಲರಿಗೂ ಹೇಳಿ ಕುಶಿಯಿಂದ ಬೀಗಿದೆ.
ಮನೆಯಲ್ಲಿ ಎಲ್ಲರೂ ತುಂಬಾ ಸಂತೋಷಪಟ್ಟರು.

ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಶುಭ ಕೊರೋಣವೆಂದು ಯೋಚಿಸಿದೆ.
ಯಾರು ಹೆಚ್ಚು ಅಂಕ ಗಳಿಸಿದ್ದಾರೆ ಎಂದು ತಿಳಿಯಲು ಕಾಲೇಜಿನ ಲ್ಯಾಂಡ್'ಲೈನ್ ನಂಬರ್'ಗೆ ಫೋನಾಯಿಸಿದೆ.
ಫೋನ್ ರಿಂಗಾದ ಬಳಿಕ, ಆ ಕಡೆಯಿಂದ ಒಬ್ಬ ವ್ಯಕ್ತಿ ಫೋನ್ ಎತ್ತಿ "ಹಲೋ" ಎಂದರು.
ನನಗೆ ತುಂಬಾ ಪರಿಚಯವಿದ್ದವರ ಧ್ವನಿ ಅದು. ನಮ್ಮ ಕಂಪ್ಯೂಟರ್ ಸೈನ್ಸ್ ವಿಭಾಗದ HOD ಅಲೀಂ ಸರ್ ಅವರ ಧ್ವನಿ ಎಂದು ತಿಳಿಯಿತು.
ನಾನು "ಹಲೋ ಸರ್, ನನಗೆ ಒಂದು ಮಾಹಿತಿ ಬೇಕಾಗಿತ್ತು...."
ಅಲೀಂ ಸರ್ ... "ಏನು ಬೇಕಾಗಿತ್ತು....?"
ನಾನು "ಸರ್, ಈ ವರ್ಷ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪಾಸಾದವರು ಯಾರು ಎಂದು ತಿಳಿದುಕೊಳ್ಳಬೇಕಾಗಿತ್ತು..."
ಅಲೀಂ ಸರ್... "ನೀವು ಯಾರು ಮಾತಾಡ್ತಾ ಇರೋದು....?".
ನಾನು.." ಸರ್, ನಾನು ಶಿವಪ್ರಕಾಶ್ "
ಅಲೀಂ ಸರ್..."Congratulations.... You are the topper in Computer Science...."
ನನಗೆ ಆಶ್ಚರ್ಯವಾಯ್ತು... ನಾನು "ಶಿವಪ್ರಕಾಶ್" ಎಂದು ಹೇಳಿದ್ದು ಅವರಿಗೆ "ಶಿವು" ಎಂದು ಕೇಳಿಸಿರಬೇಕು. ಯಾಕೆಂದರೆ ನಮ್ಮ ಕ್ಲಾಸ್ಸಿನಲ್ಲಿದ್ದುದು ಮೂವರು ಶಿವು'ಗಳು... ನಾನು ಅಸ್ಟೊಂದು ಬುದ್ದಿವಂತನೂ ಅಲ್ಲ.
ನಾನು ಸಣ್ಣ ಧ್ವನಿಯಲ್ಲಿ.."ಸರ್, ನಾನು ಶಿವಪ್ರಕಾಶ್" ಎಂದೆ..
ಅಲೀಂ ಸರ್... "ಹೌದು ನೀವೇ... ನಮ್ಮ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಪಾಸಗಿರೋದು..."
ನನಗೆ ನಂಬಲು ಸಾಧ್ಯವಾಗಲಿಲ್ಲ.
ಮತ್ತೊಂದು ಪ್ರಶ್ನೆಹಾಕಿದೆ.. "ಸರ್, Second heighest ಯಾರದು?, ಎಷ್ಟು ಅಂಕ...?" ಎಂದು ಕೇಳಿದೆ.
ಅಲೀಂ ಸರ್.. "ಸಂತೋಷ್... 73.xx %"
ನನಗೆ ಆಶ್ಚರ್ಯವಾಯ್ತು. ನನಗೆ ಬಂದಿರೋದು 69%, ಸಂತೋಷ್'ಗೆ ಬಂದಿರೋದು 73.xx %... ಹಾಗಾದರೆ ಅವನೇ ಹೆಚ್ಚು ಅಂಕ ಗಳಿಸಿದವನು ಅಲ್ಲವೇ...?
ನನಗೆ ಅರ್ಥವಾಗಲಿಲ್ಲ.
ಕೊನೆಗೆ ತಡೆದುಕೊಳ್ಳಲಾಗದೆ ಕೇಳಿಬಿಟ್ಟೆ... "ಸರ್, ನನ್ನ ಶೇಕಡಾ ಅಂಕಗಳು ಎಷ್ಟು....?"
ಅಲೀಂ ಸರ್, ಸ್ವಲ್ಪವು ತಡ ಮಾಡದೆ ಹೇಳಿಬಿಟ್ಟರು "74%" ಎಂದು.
ಏನು ಮಾಡಬೇಕೆಂದು ತಿಳಿಯದೆ ಧನ್ಯವಾದಗಳನ್ನು ಹೇಳಿ, ಫೋನ್ ಇಟ್ಟೆ.
ಅದು ಹೇಗೆ ಸಾಧ್ಯ..?
ನನಗೆ ಬಂದಿರೋದು 69%, ಆದರೆ, ಸರ್ ಹೇಳ್ತಾ ಇದಾರೆ 74% ಅಂತ.
ಮತ್ತೊಮ್ಮೆ ನನ್ನ ಅಂಕಗಳ ಶೇಕಡಾವನ್ನು ಲೆಕ್ಕ ಹಾಕುತ್ತ ಕುಳಿತೆ.
ಬಹಳ ಹೊತ್ತು ಲೆಕ್ಕ ಹಾಕಿದ ಬಳಿಕ ತಿಳಿಯಿತು.... ನನಗೆ ಬಂದಿದ್ದು 69% ಅಲ್ಲ, 74% ಎಂದು.

ಅವತ್ತೇ ಗೊತ್ತಾಗಿದ್ದು, ನಾನು ಲೆಕ್ಕದಲ್ಲಿ ಎಷ್ಟು ಬುದ್ದಿವಂತನಿದ್ದೇನೆ ಎಂದು.
Share/Save/Bookmark