Tuesday, November 24, 2009

ನಾವು, ನಮ್ಮ ಡ್ಯಾನ್ಸ್

ನಾನು ಸ್ನೇಹ. ಕೊನೆಯ ವರ್ಷದ BBM ಓದ್ತಾ ಇದೀನಿ. ಮೊನ್ನೆ ತಾನೇ ಕಾಲೇಜ್'ನ ವಾರ್ಷಿಕೋತ್ಸವ ನಡಿತು. ನಾನು, ನನ್ನ ಇಬ್ಬರು ಗೆಳತಿಯರು ವಾರ್ಷಿಕೋತ್ಸವ ಸಮಾರಂಭಕ್ಕೆ ಡ್ಯಾನ್ಸ್ ಪ್ರೊಗ್ರಾಮ್ ಕೊಟ್ಟಿದ್ವಿ. ನಮ್ಮ ಕಾಲೇಜ್'ನ ಕೆಲವು ಶಿಕ್ಷಕರು, ನಾವು ಮಾಡಿದ ಡ್ಯಾನ್ಸ್ ಮೆಚ್ಚಿ ಅಭಿನಂದಿಸಿದ್ದರು. ಅದನ್ನೇ ನೆನಪಿಸಿಕೊಳ್ಳುತ್ತಾ ಕ್ಲಾಸಿನಲ್ಲಿ ಕೂತಿದ್ದೆ. ಆಗ ನಮ್ಮ ಕಾಲೇಜ್'ನ ಪ್ರಾಂಶುಪಾಲರ ಸಹಾಯಕ, ನಮ್ಮ ಕ್ಲಾಸ್ನಲ್ಲಿ ಬಂದು, ನಮ್ಮ ಮೂವರ ಹೆಸರನ್ನು ಕೂಗಿ, 'ಪ್ರಾಂಶುಪಾಲರು ಕರಿತಾ ಇದಾರೆ ಬನ್ನಿ' ಅಂದ.
ಇದುವರೆಗೆ ಎಂದೂ ಕರೆಯದ ಪ್ರಾಂಶುಪಾಲರು ಇಂದೇಕೆ ಕರಿತಾ ಇದಾರೆ ಎನ್ನುವ ಆಶ್ಚರ್ಯವಾಯ್ತು. ನಾವು ಮೂವರು ಪ್ರಾಂಶುಪಾಲರ ಕಚೇರಿಗೆ ಹೋಗಿ. ಬಾಗಿಲ ಹತ್ರ ನಿಂತು... 'ಸರ್' ಎಂದೆವು.
ಪ್ರಾಂಶುಪಾಲರು 'Come in' ಅಂದ್ರು.
ನಾವು ಒಳಗಡೆ ಹೋಗಿ, ಅವರ ಎದುರಲ್ಲಿ ನಿಂತೆವು.
ಅವರು ಮಾತು ಶುರು ಮಾಡುತ್ತಾ 'ನಿಮ್ಮಿಂದ ಕಾಲೇಜ್'ಗೆ ಮೂರು ಸಾವಿರ ನಸ್ಟ ಆಗಿದೆ. ಅದನ್ನು ನೀವೇ ಭರಿಸಬೇಕು. ಆ ಫೈನ್ ಕಟ್ಟಿ ಅಂತ ಹೇಳೋದಕ್ಕೆ ಕರೆದೆ' ಎಂದರು
ನಮಗೆ ಭಯ ಆಯ್ತು. ನಾವು ಯಾವುದೇ ತಪ್ಪು ಮಾಡಿಲ್ಲ. ಭಯದಲ್ಲೇ...'ನಾವು ಏನು ಮಾಡಿದ್ವಿ ಸರ್...?' ಎಂದೆವು.
ಪ್ರಾಂಶುಪಾಲರು ಗತ್ತಿನಿಂದಲೇ 'ಏನ್ ಮಾಡಿದ್ವಿ ಅಂತ ಕೇಳ್ತೀರಾ... ನಿಮಗೆ ಗೊತ್ತಿಲ್ವೆ...?... ನಿಮ್ಮಿಂದ ಹತ್ತು ಕುರ್ಚಿಗಳು ಹಾಳಗಿದವೇ. ಅದರಿಂದ ಕಾಲೇಜ್'ಗೆ ಮೂರು ಸಾವಿರ ನಸ್ಟ ಆಗಿದೆ...' ಎಂದರು.
'ನಾವು ಯಾವುದೇ ಕುರ್ಚಿಯನ್ನು ಹಾಳುಮಾಡಿಲ್ಲ ಸರ್' ಎಂದೆವು.
'ನೀವೇ ಮಾಡಿದ್ದು.. ಮೊನ್ನೆ ನೀವು ಮಾಡಿದ ಡ್ಯಾನ್ಸ್ ನಿಂದ ಹುಡುಗರೆಲ್ಲ ಕುಣಿದಾಡಿ, ಕುರ್ಚಿಗಳನ್ನೆಲ್ಲಾ ಹಾಳುಮಾಡಿದ್ದಾರೆ. ಆದಕಾರಣ ಇದರ ನಷ್ಟಕ್ಕೆ ನೀವೇ ಜವಾಬ್ದಾರರು..' ಎಂದು ಹೇಳಿ ನಕ್ಕರು.
ಅವರ ಮಾತಿಗೆ ನಾವು ಒಳಗೊಳಗೇ ನಕ್ಕೆವು.
ನಂತರ ಪ್ರಾಂಶುಪಾಲರು ನಮ್ಮನ್ನು ಅಭಿನಂದಿಸಿ ಕಳಿಸಿದರು.

ಅಂದಹಾಗೆ, ಪ್ರಾಂಶುಪಾಲರು ಆದ ಮಾತ್ರಕ್ಕೆ ಜೋಕ್ ಮಾಡಬಾರದು ಅಂತ ರೂಲ್ಸ್ ಏನಾದ್ರು ಇದೆಯಾ... :P ?

ಈ ಲೇಖನ, ನೈಜ ಘಟನೆಯನ್ನು ಆಧರಿಸಿ ಬರೆಯಲಾಗಿದೆ. :D
Share/Save/Bookmark

Tuesday, November 17, 2009

ಪ್ರತಿಕ್ರಿಯೆ

ನಾವು ಯಾವುದೇ ಒಂದು ಕೆಲಸಕ್ಕೆ ಕೈಹಾಕಿ ಯಶಸ್ವಿಯಾಗಲಿ/ಸೋಲಾಗಲಿ ಅನುಭವಿಸಿದಾಗ, ನಮ್ಮ ಹಿತೈಷಿಗಳ ಶುಭಾಶಯಗಳು/ಸಮಾಧಾನದ ನುಡಿಗಳು ನಮ್ಮಲ್ಲಿ ಏನೋ ಒಂದು ಹೊಸ ಚೇತನವನ್ನು ಮೂಡಿಸುತ್ತವೆ. ನಮ್ಮನ್ನು ಹುರಿದುಂಬಿಸುತ್ತವೆ.
ಹೀಗೆ, ನಮ್ಮ ಲೇಖನಗಳನ್ನು ಯಾರಾದರು ಓದಿ, ಅವನ್ನು ಮೆಚ್ಚಿಕೊಂಡು ಪ್ರತಿಕ್ರಿಯಿಸಿದಾಗ ತುಂಬಾ ಕುಶಿಯಗುತ್ತೆ.
ಕೆಲವೊಮ್ಮೆ ಕೆಲವೊಂದು ಪ್ರತಿಕ್ರಿಯೆಗಳು ಆಶ್ಚರ್ಯವನ್ನು ಮೂಡಿಸುತ್ತವೆ.
ನಾನು ಕೆಲವು ತಿಂಗಳುಗಳ ಹಿಂದೆ ಹದಿನಾರು ಎನ್ನುವ ಲೇಖನವನ್ನು ಬರೆದಿದ್ದೆ. ಆ ಲೇಖನ ಓದಿರದಿದ್ದರೆ, ಅದನ್ನು ಮೊದಲು ಓದಿ, ನಂತರ ಈ ಲೇಖನವನ್ನು ಮುಂದುವರೆಸಿ. ಇಲ್ಲದಿದ್ದರೆ ಈ ಲೇಖನಕ್ಕೆ ಸ್ವಲ್ಪ ಸ್ವಾರಸ್ಯವಿರುವುದಿಲ್ಲ.
ನನ್ನ ಆ ಲೇಖನಕ್ಕೆ ಕ್ಷಣ ಚಿಂತನೆ: ಚಿಂತನಾಲಹರಿ... ಬ್ಲಾಗಿನ ಚಂದ್ರಶೇಖರ ಅವರು ಒಂದು ಪ್ರತಿಕ್ರಿಯೆಯನ್ನು ಬರೆದಿದ್ದರು.
ಅವರ ಪ್ರತಿಕ್ರಿಯೆ ಹೀಗಿತ್ತು ನೋಡಿ.......

`ಹದಿನಾರು' ಊರಿನ ಹೆಸರು ಕೇಳಿ ಅಚ್ಚರಿಯಾಯಿತು.
ನಾವು ಹಂಪಿಗೆ ಸುಮಾರು ವರ್ಷಗಳ ಹಿಂದೆ ಹೋಗಿದ್ದೆವು. ನಾನು ಬೆಂಗಳೂರು ಬಿಟ್ಟು ಶಿವಮೊಗ್ಗೆವರೆಗೆ ಮಾತ್ರ ಹೋಗಿದ್ದೆ. ಇದೇ ಮೊದಲ ಬಾರಿ ಹಂಪಿ, ಬಳ್ಳಾರಿ ಕಡೆ ಹೋಗಿದ್ದು. ಅಲ್ಲಿ ಒಂದು ಊರ ಹೆಸರು `ಕುಡಿತಿನಿ' ಅಂತಿತ್ತು. ಈ ಊರಿನ ಹೆಸರನ್ನು ನಮಗೆ ನಾವೇ ಹೇಳಿಕೊಂಡರೆ ಹೇಗೆ? ಅನ್ನಿಸಿತ್ತು.
ಸಸ್ನೇಹಗಳೊಂದಿಗೆ,

ಅವರ ಪ್ರತಿಕ್ರಿಯೆಯಲ್ಲಿ ಬರೆದ `ಕುಡಿತಿನಿ' ಎನ್ನುವ ಊರಿನ ಹೆಸರು ತುಂಬಾ ವಿಚಿತ್ರವಾಗಿದೆ ಅಲ್ವಾ...?
ಅದನ್ನು ಕೇಳಿ ನಿಮಗೆ ನಗು ಬಂದಿರಬೇಕು ಅಲ್ವಾ.... ?
ನಗುವ ಮುಂಚೆ ನಾನು ಹೇಳುವುದನ್ನೊಮ್ಮೆ ಕೇಳಿ...
ಇದು ನನ್ನ ಸ್ವಂತ ಊರಿನ ಹೆಸರು... ನಾನು ಹುಟ್ಟಿ ಬೆಳದ ಊರು. ಈಗಲೂ ಅದು ನನ್ನೂರು. :)
ಈಗ ನೀವು ನಗಬಹುದು... ಹ್ಹಾ ಹ್ಹಾ ಹ್ಹಾ...

ನಮ್ಮ ಊರಿನ ಹೆಸರನ್ನು ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕರಿಯುತ್ತಾರೆ.
ಒಬ್ಬರು 'ಕುಡತಿನಿ', ಇನ್ನೊಬ್ಬರು 'ಕುಡಿತಿನಿ', ಹಾಗೆ ಇನ್ನೂ ಕೆಲವರು 'ಕುಡ್ತಿನಿ' ಎನ್ನುತ್ತಾರೆ.
ಯಾವುದೇ ರೀತಿಯಲ್ಲಿ, ನಮ್ಮ ಊರಿನ ಹೆಸರನ್ನು ಕರೆದರೂ ನಿಮಗೆ ತಮಾಷೆಯಾಗಿಯೇ ಕಾಣಿಸುತ್ತದೆ.
Share/Save/Bookmark

Thursday, November 12, 2009

ಕುಲನಾಮ (Surname)

ಅಂದು ರಮೇಶ್, ಇಟಲಿಯಲ್ಲಿರುವ ರಾಬರ್ಟೊ ಎನ್ನುವ ವ್ಯಕ್ತಿಯೊಡನೆ ಚಾಟ್ (text - chat) ಮಾಡುತ್ತಿದ್ದ.
ನಾನು, ರಮೇಶ್, ಸತೀಶ್, ರಾಬರ್ಟೊ ಹಾಗು ಇನ್ನೂ ಹತ್ತಾರು ಜನ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡೋದು.
ಹೀಗೆ ಚಾಟ್ ಮಾಡುತ್ತಿರುವಾಗ ರಾಬರ್ಟೊ, ರಮೇಶನಿಗೆ ... 'ನಾನು ನಿನ್ನ ಒಂದು ವಯ್ಯುಕ್ತಿಕ ವಿಷಯ ಕೇಳಬಹುದೇ...?' ಎಂದ..
'ಹಾ, ಕೇಳು ರಾಬರ್ಟೊ... ಅದರಲ್ಲೇನಿದೆ...' ಎಂದ ರಮೇಶ್.
'ಸತೀಶ್... ನಿನ್ನ ಸಹೋದರನೆ.... ?' .
ಸತೀಶ್ ನಮ್ಮ ಸಹದ್ಯೋಗಿ, ಸಹೋದರನಲ್ಲ. ಆದರೆ ನಮ್ಮ ರಮೇಶನಿಗೆ, ರಾಬರ್ಟೊ ಹಾಗೆ ಯಾಕೆ ಕೇಳಿದ ಎಂದು ಅರ್ಥವಾಗಲಿಲ್ಲ. ಅವನಿಗೆ ಈ ಥರ ಆಲೋಚನೆ ಯಾಕೆ ಬಂದಿರಬಹುದು..? ಎಂದು ಆಲೋಚಿಸಿದ. ತಿಳಿಯಲಿಲ್ಲ. ಯಾಕಿರಬಹುದು ಎಂದು ಆಲೋಚಿಸುತ್ತಲೇ, ಒಂದು ಸಂದೇಶ ಕಳಿಸಿದ...
'ಯಾಕೆ ರಾಬರ್ಟೊ, ಆ ತರಹದ ಆಲೋಚನೆ ಬಂತು...?'
'ಇಲ್ಲ, ಇಬ್ಬರ Surname (ಕುಲನಾಮ) ಒಂದೇ ಇದೇ ಅಲ್ವಾ... ಅದೇ "ಕುಮಾರ್"...ಅಂತ.. "ರಮೇಶ್ ಕುಮಾರ್", "ಸತೀಶ್ ಕುಮಾರ್" ಅದಕ್ಕೆ ಹಾಗೆ ಕೇಳಿದೆ ' ಅಂದ.
ನಮ್ಮ ರಮೇಶ್, ಇದನ್ನು ಹೇಗೆ ವಿವರಿಸಿ ಹೇಳಬೇಕು ಎಂದು ಆಲೋಚಿಸುತ್ತ ನನ್ನ ಕೇಳಿದ.
ನಾನು ಇವರಿಬ್ಬರ ಸಂದೇಶಗಳನ್ನು ಓದಿದೆ. ಸ್ವಲ್ಪ ಆಲೋಚಿಸಿ ಅವರಿಗೆ ಹೀಗೆ ಸಂದೇಶ ಕಳಿಸಿದೆ...
'..."ಕುಮಾರ್" ಎನ್ನುವುದು ಕುಲನಾಮವಲ್ಲ...
ಕುಮಾರ ಎಂದರೆ ನಿಮ್ಮ ಭಾಷೆಯಲ್ಲಿ Son (ಮಗ) ಎಂದು ಅರ್ಥ..
ಇನ್ನೂ ರಮೇಶ್, ಸತೀಶ್ ಎನ್ನುವ ಹೆಸರುಗಳು, ದೇವರ ಹೆಸರುಗಳು..
ನಾವೆಲ್ಲರೂ ದೇವರ ಮಕ್ಕಳಿದ್ದಂತೆ ಅಲ್ಲವೇ...
ಹಾಗಾಗೆ ದೇವರ ಹೆಸರಿನ ಪಕ್ಕ "ಕುಮಾರ್" ಎಂದು ಸೇರಿಸಿ ಹೆಸರಿಡುತ್ತಾರೆ...
ನಿಮ್ಮಲ್ಲಿ ... ಜಾನ್ಸನ್(Johnson), ಪೀಟರ್ಸನ್ (Peterson) ಹೇಗೋ ಹಾಗೆ...' ಎಂದು ಕಳಿಸಿದೆ...
ಆಗ ರಾಬರ್ಟೊ...'ಒಹ್... ಹಾಗಾ...' ಎಂದು ಅವರ ಕೆಲವು ಹೆಸರುಗಳ ಉದಾಹರಣೆಗಳನ್ನು ಕೊಟ್ಟ.
ನಾನು, ರಮೇಶ ಒಳಗೊಳಗೇ ನಕ್ಕೆವು.
Share/Save/Bookmark

Monday, November 2, 2009

ಅಂಡರ್ಲೈನ್

ಕಾಲೇಜಿನ ಮೆಟ್ಟಿಲು ಏರಿ ಕೇವಲ ಒಂದು ತಿಂಗಳಸ್ಟೇ ಕಳದಿತ್ತು. ಕಾಲೇಜಿನಲ್ಲಿ ನಮ್ಮಂತ ಹುಡುಗರು ಹರಟೆ ಹೊಡಿತ ಕೂಡೋಕೆ ಒಂದು ಕಟ್ಟೆ ಇತ್ತು. ಹರಟೆ ಕಟ್ಟೆ ಅನ್ಕೊಲಿ. ನಾನು, ನನ್ನ ಗೆಳೆಯ ಮಂಜು ಕಟ್ಟೆಮೇಲೆ ಹರಟುತ್ತ ಕೂತಿದ್ವಿ. ದೂರದಲ್ಲಿ ನನ್ನ ಇನ್ನೊಬ್ಬ ಗೆಳೆಯ ಶಿವು(ಶಿವಪ್ರಸಾದ್ ರೆಡ್ಡಿ), ನಮ್ಮ ಕ್ಲಾಸಿನ ಒಂದು ಸುಂದರವಾದ ಹುಡುಗಿ ಸ್ನೇಹ ಜೊತೆ ಮಾತಾಡ್ತಾ ನಿಂತಿದ್ದ. ಮಾತಾಡ್ತಾ ಇದ್ದ ಅನ್ನೋದಕ್ಕಿಂತ ಕಿರುಚಾಡ್ತಾ ಇದ್ದ ಅಂತಾನೆ ಹೇಳಬಹುದು. ಒಂದೇ ಸಮನೆ ಸ್ನೇಹಳನ್ನು ಬೈಯುತ್ತಿದ್ದ. ಯಾವ ವಿಷಯಕ್ಕೆ ಸಂಬಂದಿಸಿ ಸ್ನೇಹಳನ್ನು ಬಯ್ತಾ ಇದನೋ ಅಂತ ಮಂಜನ ಕೇಳಿದೆ. ಮಂಜನಿಗೂ ಗೊತ್ತಿರ್ಲಿಲ್ಲ.
'ಏನಾದ್ರು ಲವ್ ಗಿವ್ ಮಾಡ್ತಾ ಇದಾರ....' ಅಂತ ಮಂಜನ ಕೇಳಿದೆ.
'ನನಗೆ ಗೊತ್ತಿರುವ ಹಾಗೆ, ಲವ್ ಗಿವ್ ಏನು ಇಲ್ಲ ಕಣೋ' ಎಂದ ಮಂಜ.
ಮತ್ತೆ ಯಾಕೆ ಬೈತ ಇರಬಹುದು...? ಎಂದು ತೆಲೆಕೆಡಸಿಕೊಳ್ಳುತ್ತಿರುವಾಗ, ನಮ್ಮ ಶಿವು ನಮ್ಮಲ್ಲಿಗೆ ಬಂದ. ಆ ಹುಡುಗಿ ಕಣ್ಣಿರನ್ನು ತನ್ನ ವೆಲಿನಿಂದ ವರೆಸಿಕೊಳ್ಳುತ್ತ ಕ್ಲಾಸಿನೊಳಗೆ ಹೋದಳು. ನನ್ನ ಮನಸು ಸ್ವಲ್ಪ ಕರಗಿತು. ಎಸ್ಟೆ ಆಗ್ಲಿ ನನ್ನಂತ ಹುಡುಗರ ಮನಸು ತುಂಬಾ ಮೃದು ಅಲ್ವಾ..?.
ನಾನು ಕೇಳಿದೆ.. 'ಯಾಕೋ ಸ್ನೇಹಾನ ಅಸ್ಟೊಂದು ಬೈತಾ ಇದ್ದೆ..?'
'ಹೋಗ್ಲಿ ಬಿಡೋ, ಅದನ್ಯಾಕೆ ಕೇಳ್ತಿಯಾ....' ಎಂದ.
'ಏನ್ ಹೇಳೋ...'
'ಅವಳು ನನ್ನ ನೋಟ್ಸ್ ಕೇಳಿದ್ಲು, ಕೊಟ್ಟಿದ್ದೆ...' ಎಂದ.
(ನಮ್ಮ ಕ್ಲಾಸಿನಲ್ಲಿ ಲೆಕ್ಚರರ್ ಪಾಠ ಮಾಡುತ್ತಾ ನೋಟ್ಸ್ ಬರಿಸ್ತಾ ಇದ್ರು. ನಾವು ಅವರು ಹೇಳುವ ವೇಗದಲ್ಲಿ ಬರೆದುಕೊಳ್ಳಲು ಆಗುತ್ತಿರಲಿಲ್ಲ. ಮದ್ಯ ಮದ್ಯ ಜಾಗ ಕಾಲಿ ಬಿಟು ಬಿಟ್ಟು ಬರೆದುಕೊಳ್ಳುತ್ತಿದ್ದೆವು. ಆದರೆ ನಮ್ಮ ಶಿವು, ಲೆಕ್ಚರರ್ ಎಸ್ಟೆ ವೇಗವಾಗಿ ಹೇಳಿದರೂ ಬರೆದುಕೊಳ್ಳುತ್ತಿದ್ದ. ನಾವು, ನಂತರ ಅವನ ನೋಟ್ಸ್ ತಗೊಂಡು ಜಾಗ ಕಾಲಿ ಬಿಟ್ಟಿದ್ದ ಸ್ಥಳಗಳಲ್ಲಿ ಭರ್ತಿ ಮಾಡಿಕೊಳ್ಳುತ್ತಿದ್ದೆವು.).
'ಅದಕ್ಕೆ ಏನಾಯ್ತೋ ಈಗ........?' ಎಂದೆ.
'ಕ್ಲಾಸ್ನಲ್ಲಿ ಲೆಕ್ಚರ್ ಸ್ಪೀಡ್ ಆಗಿ ನೋಟ್ಸ್ ಹೇಳುವುದನ್ನು, ನಾನು ಬರೆದುಕೊಳ್ಳುವಾಗ ನೋಟ್ಸ್'ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ (Spelling mistake) ಮಾಡಿದ್ದೆ...' ಎಂದ.
'ಅದಕ್ಕೆ ಏನಾಯ್ತು.... ?'
'ಅವಳು ನನ್ನ ನೋಟ್ಸ್ ತೆಗೆದುಕೊಂಡಿದ್ದಳು ಅಲ್ವಾ... ನಾನು ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ಪದಗಳಿಗೆಲ್ಲ ಪೆನ್ಸಿಲ್'ನಲ್ಲಿ ಕೆಳಗೆ ಅಂಡರ್ಲೈನ್ (Underline) ಮಾಡಿದಾಳೆ'.
'ಒಹ್ ಅಸ್ಟೆನಾ...? ಅದಕ್ಕೆ ಅವಳಿಗೆ ಅಸ್ಟೊಂದು ಬೈಯೋದ......?' ಎಂದು ಕೇಳಿದೆ.
'ಆದರೆ ಏನ್ ಮಾಡೋದು, ನೋಟ್ಸಿನಲ್ಲಿ ನಾನು ಬರೆದಿರುವುದಕ್ಕಿಂತ ಅವಳ Underlines ಜಾಸ್ತಿ ಇದಾವೆ...ಪ್ರತಿಯೊಂದು ಪದಕ್ಕೂ ಅಂಡರ್ಲೈನ್ ಮಾಡಿದಾಳೆ ' ಎಂದ ಸಂಕಟದಲ್ಲಿ ಹೇಳಿದ.
ನಾನು, ಮಂಜ ಇದನ್ನು ಕೇಳಿ ಬಿದ್ದು ಬಿದ್ದು ನಕ್ಕೆವು.


Share/Save/Bookmark