Wednesday, January 18, 2017

ಸುಂದ್ರಿ ಕಲಿಸಿದ ಪಾಠ


ಇಂಜಿನಿಯರಿಂಗ್ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದಾಗ ನಡೆದ ಘಟನೆ ಇದು. 

ಸಾಯಂಕಾಲದ ಸಮಯ ಕ್ಯಾಂಪಸ್ ಮುಂದೆ ಇದ್ದ ಕ್ಯಾಂಟೀನ್'ನಲ್ಲಿ ನಾನು, ನಟ, ರಘು ಮೂವರು ಟೀ ಕುಡಿತಾ ಇದ್ವಿ. ಅಲ್ಲಿಗೆ ನಮ್ ಕ್ಲಾಸ್ಮೆಟ್ ಸುಂದರ್(ನಾವ್ ಪ್ರೀತಿಯಿಂದ ಸುಂದ್ರಿ ಅಂತೀವಿ) ಬಂದ. 

ನಾವೆಲ್ಲರೂ ಹಾಯ್ ಸುಂದ್ರಿ ಅಂದ್ವಿ...
ಅವನು "Yo Man... Hi..."ಎಂದ.
ನಾನು "ಹೇಗ್ ನಡೀತಿದೆ Studies ಸುಂದ್ರಿ?" ಎಂದು ಕೇಳಿದೆ.
ಅವನು "Yo Man... It's going good. How about Yours?" ಎಂದ.
ಹೀಗೆ ನಾವು ಕನ್ನಡದಲ್ಲಿ ಮಾತಾಡುತ್ತಿದ್ದರೆ ಅವನು ಇಂಗ್ಲೀಷಿನಲ್ಲೇ ಮಾತನಾಡುತ್ತ ಹೋದ. 

ಅಂದಿನವರೆಗೂ ಅಚ್ಚ ಕನ್ನಡದಲ್ಲಿ ಸ್ಪಷ್ಟವಾಗಿ ಮಾತಾಡುತ್ತಿದ್ದ ನಮ್ ಸುಂದ್ರಿ, ಇದ್ದಕ್ಕಿದ್ದಂತೆ ಎಲ್ಲರ ಜೊತೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದುದು ಕಂಡು ನಮಗೆ ಆಶ್ಚರ್ಯವಾಯಿತು.
ಕುತೂಹಲ ತಡೆಯಲಾಗದೆ ನಟ "ಅಲ್ವೋ ಸುಂದ್ರಿ, ಯಾಕೇ ನಾವು ಏನು ಕೇಳಿದ್ರು ಇಂಗ್ಲೀಷ್'ನಲ್ಲೆ ಉತ್ತರಿಸುತ್ತಿದ್ದೀಯ?" ಎಂದ.
ಅದಕ್ಕೆ ಸುಂದ್ರಿ "You know man. Last Week, I have joined spoken English class. Our tutor suggested us to speak in English. We all should speak in English. You know, If we practice from now, by final year, we will speak fluently. It will help in our campus placement interviews." ಎಂದ.

ನಾವು ಕೂಡ ಕನ್ನಡ ಮಾಧ್ಯಮದಿಂದ ಬಂದವರಾಗಿದ್ದೆವು. ಕನ್ನಡ ಮಾಧ್ಯಮದಿಂದ ಬಂದ ನಮಗೆ ಇಂಗ್ಲೀಷ್ ನಲ್ಲಿ ಮಾತನಾಡುವುದು ತುಂಬ ಕಷ್ಟದ ವಿಷಯವಾಗಿತ್ತು. ಕ್ಲಾಸ್ನಲ್ಲಿ Lecture ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಅದನ್ನು ಉತ್ತರಿಸುವಾಗ ಎಲ್ಲಿ ಇಂಗ್ಲೀಷ್ ಪದಗಳು ನೆನಪಿಗೆ ಬಾರದೆ(ವ್ಯಾಕರಣ ಕೇಳಲೇ ಬೇಡಿ) ಅವಮಾನವಾಗಿ ಬಿಡಬಹುದೋ ಎನ್ನುವ ಹೆದರಿಕೆಯಿಂದ ಉತ್ತರಿಸಲು ಹಿಂಜರಿಯುತ್ತಿದ್ದೆವು. 

ಒಂದೇ ದೋಣಿಯಲ್ಲಿ ಸಾಗುತ್ತಿದ್ದ ನಮಗೆ, ಸುಂದ್ರಿ ಹೇಳಿದ ಮಾತುಗಳು ವೇದವಾಖ್ಯದಂತೆ ಕೇಳಿಸಿತು. ಅಂದು ಅಲ್ಲೇ ನಾವೆಲ್ಲರು ಸುಂದ್ರಿ ಸೇರಿದ Spoken English ಕ್ಲಾಸ್ ಗೆ ಸೇರಬೇಕೆಂದು ಒಮ್ಮತದಿಂದ ನಿರ್ಧರಿಸಿದೆವು. ಹಾಗೆ ಸೇರಿಕೊಂಡೆವು ಕೂಡ.

ಹೀಗೆ ನಮ್ಮ Spoken English ಪ್ರಯಾಣ ಶುರುವಾಯಿತು...

ನಾವೆಲ್ಲರೂ ಸೇರಿ ಇಂಗ್ಲೀಷ್ ಕ್ಲಾಸ್ಸಿಗೆ ಹೋಗಿ ಬರುತ್ತಿದ್ದೆವು.
ಒಂದು ವಾರ ಹೀಗೆ, ಜೊತೆ ಜೊತೆಯಲಿ ಹೋಗಿ ಬರುವುದು ನಡೀತು.

ಒಂದು ವಾರ ಕಳೆದ ಬಳಿಕ, ನಟ ಕ್ಲಾಸ್ಸಿಗೆ ಬರುವುದನ್ನು ನಿಲ್ಲಿಸಿದ.
ಎರಡನೇ ವಾರಕ್ಕೆ ರಘು ನಿಲ್ಲಿಸಿದ. 

ನಟ ಹಾಗು ರಘು ಇಬ್ಬರಿಗೂ ಆಗಲೇ ಕ್ಲಾಸ್ ಬೋರ್ ಆಗಿ ಹೋಗಿತ್ತು. ಅವರು ಮಾಡುತ್ತಿದ್ದ ಪಾಠವು ಅಷ್ಟಕ್ಕಷ್ಟೇ ಇತ್ತು...
ಆದರೂ ನಾನು ಮತ್ತು ಸುಂದ್ರಿ ಧೃತಿಗೆಡತೆ ಹೋಗುತ್ತಿದ್ದೆವು. 


ಇನ್ನೊಂದು ವಾರ ಕಳೆಯುವಷ್ಟರಲ್ಲಿ ನಮ್ ಸುಂದ್ರಿನೂ ಬರೋದು ನಿಲ್ಲಿಸಿದ....!!!!

ನಾನು ಒಬ್ಬಂಟಿಯಾದೆ...!!!

ಒಬ್ಬನೇ ಹೋಗುವುದು ಬೇಸರದ ವಿಷಯವಾಗಿತ್ತು. ಅದಕ್ಕೆ "ಲೋ ಸುಂದ್ರಿ, ಬಾರೋ, ಯಾಕೋ ಬರೋದು ನಿಲ್ಲಿಸ್ತೀಯಾ? " ಎಂದು ಕೇಳಿದೆ...
ಅದಕ್ಕೆ ಇಂಗ್ಲೀಷಿನಲ್ಲೇ ಮಾತನಾಡುವುದನ್ನು ರೂಢಿಸಿಕೊಂಡಿದ್ದ ನಮ್ ಸುಂದ್ರಿ ಇದ್ದಕ್ಕಿದ್ದಂತೆ (ಸು)ಸಂಸ್ಕೃತ ಭಾಷೆಯಲ್ಲಿ "ಹೊಗ್ ಮಗ, 
ಆ ನನ್ ಮಕ್ಳು ಮಾಡೋದು ಅಸ್ಟ್ರಲ್ಲೇ ಇದೆ. 
ಏನೂ ಹೇಳಿಕೊಡೋದಿಲ್ಲ. 
ಬರಿ 'ಮಾತಾಡಿ, ಮಾತಾಡಿ' ಅದೇ ಬರುತ್ತೆ ಅಂತಾರೆ. 
ಬರಿ ನಾವ್ ನಾವ್ ಮಾತಾಡೋಕೆ ಅಲ್ಲಿಗೆ ಯಾಕ್ ಬರ್ಬೇಕು. 
ಏನಾದ್ರು ಹೇಳ್ ಕೊಡ್ಬೇಕು ತಾನೇ ?"(ಇಲ್ಲಿ ಸುಸಂಸ್ಕೃತ ಪದಗಳಿಗೆ ಕತ್ತರಿ ಹಾಕಲಾಗಿದೆ) ಎಂದು ಪ್ರಶ್ನಿಸಿದ.


"ಅಲ್ಲೋ, ದುಡ್ಡು ಕಟ್ಟಿದ್ದಕ್ಕಾದ್ರೂ ಬಾರೋ..." ಎಂದೆ.
ಅದಕ್ಕೆ ಸುಂದ್ರಿ "ಫುಲ್ ದುಡ್ಡು ಕಟ್ಟಿಲ್ಲ ಮಗಾ, ಅಡ್ವಾನ್ಸ್ ಮಾತ್ರ ಕಟ್ಟಿದ್ದೆ." ಎಂದ.
ಸುಂದ್ರಿ, ನಟ ರಘು ಅಡ್ವಾನ್ಸ್ ಮಾತ್ರ ಕಟ್ಟಿ ಸೇರಿದ್ರು.
ನಾನೊಬ್ನೆ ಬುದ್ದಿವಂತ...!!!, ಸುಂದ್ರಿಯ ವೇದವಾಖ್ಯಗಳ ಅತಿಯಾದ ಪ್ರೇರಣೆಯಿಂದ ಪೂರ್ತಿ ಹಣ ಕಟ್ಟಿದ್ದು...!!!


ನೀತಿ ಪಾಠ(ಸುಂದ್ರಿಯಿಂದ ಕಲಿತಿದ್ದು): ಅತಿಯಾದ ಪ್ರೇರಣೆ ಒಳ್ಳೆಯದಲ್ಲ.ಪ್ರೀತಿಯಿಂದ,
ಶಿವಪ್ರಕಾಶ್

Share/Save/Bookmark

Monday, January 9, 2017

Random Thoughts: ಕೆಲವು ಪುಟಗಳೇ ಹಾಗೆ...


ಕೆಲವು ಪುಟಗಳೇ ಹಾಗೆ...

ಓದುಗನನ್ನು ಮುಂದೆ ಸಾಗಲು ಬಿಡುವುದಿಲ್ಲ... ಅಲ್ಲೇ ನಿಲ್ಲಿಸಿಬಿಡುತ್ತವೆ... ಬಹುಶಃ ಆ ಪುಟಗಳಿಗೆ ಯಾವುದೋ ವಾಸ್ತು ದೋಷ ಇರಬೇಕು ಅನ್ಸುತ್ತೆ... ಇಂತಹ ಪುಟಗಳಲ್ಲಿ ಸಿಕ್ಕಿ ನಲುಗುವವರಲ್ಲಿ ನಾನು ಒಬ್ಬ. ನನ್ನ ಈ ಸಮಸ್ಸೆ, ನಿನ್ನೆ ಮೊನ್ನೆಯದಲ್ಲ. ಸ್ಕೂಲು ಕಾಲೇಜಿನಲ್ಲಿ ಇದ್ದಾಗಿನಿಂದಲೂ ಇದೆ ಸಮಸ್ಸೆ. ಇದರಿಂದ ಹೊರಬರಲು ಪ್ರಯತ್ನಿಸಿ, ಪ್ರಯತ್ನಿಸಿ, ಸಾಕಾಗಿ ಹೋಗಿದೆ.

ನನ್ನದೊಂದು ಕೆಟ್ಟ ಚಾಳಿ. ಯಾವಾಗಲೂ ಮೊದಲನೇ ಪುಟದಿಂದ ಶುರು ಮಾಡಿ ಕೊನೆ ಪುಟ ತಲುಪುವುದು. ಮಧ್ಯೆ ಎಲ್ಲಾದರೂ ಮೇಲೆ ಹೇಳಿದ ಸಮಸ್ಸೆ ಬಂದರೆ, ಅದರಿಂದ ಹೊರಬರಲು ನಾ ಪಡುವ ಕಷ್ಟ ಅಷ್ಟಿಷ್ಟಲ್ಲ.

ನನ್ನ ಬಹಳಷ್ಟು ಸ್ನೇಹಿತರಿಗೆ ಈ ಸಮಸ್ಸೆ ಇಲ್ಲ. ಅವರು ಅಂತಹ ಪುಟ ಬಂದೊಡನೆ, JUMP ಮಾಡಿ, ಬೇರೆ ಪುಟಕ್ಕೆ ಹಾರಿಬಿಡ್ತಾರೆ... "ಲೋ ಹ್ಯಾಗೋ ಜಂಪ್ ಮಾಡ್ತೀರಾ ?, ಆ ಪುಟಕ್ಕೂ, ಈ ಪುಟಕ್ಕೂ link miss ಆಗೋಲ್ವಾ ?" ಎಂದು ಕೇಳಿದರೆ ಅವರು "ಅಲ್ಲೇ ಸಿಕ್ಕು ಒದ್ದಾಡುವ ಬದಲು, JUMP ಮಾಡುವುದೇ ಒಳಿತು" ಅಂತಾರೆ. ಇನ್ನು ಕೆಲವು ಮಹಾಶಯರು, Random ಆಗಿ Chapter ತೆಗೆದು ಓದ್ತಾರೆ. ಅವರಿಗೊಂದು Hats Off..

ನನ್ನ ಪ್ರಕಾರ ಅವರ ಈ ವಿಧಾನ ಸೂಕ್ತ ಅನ್ನಿಸುತ್ತೆ. ಸುಮ್ಮನೆ ಅಂತಹ ಪುಟದಲ್ಲಿ ಸಿಕ್ಕಿ ನಲುಗುವ ಬದಲು, ಜಂಪ್ ಮಾಡುವುದೇ ವಾಸಿ.

ಇನ್ನೂ ಕಾದಂಬರಿ ಓದುವಾಗಲಂತೂ, ಯಾವುದೋ ವಿಷಯದಲ್ಲಿ ಕಳೆದು ಹೋಗಿ ಮತ್ತೆ ವಾಪಸ್ ಬಂದು ಶುರು ಮಾಡುವ ವೇಳೆಗೆ, ಮೂಲ ಕಥೆಯೇ ಮರೆತು ಹೋಗಿರುತ್ತದೆ... 
ಇದು ಕಾದಂಬರಿಯ ಶ್ರೇಷ್ಠತೆ ಇರಬಹುದು. ಆದರೆ ನನ್ನಂತವರಿಗೆ... ಇದು ಜೇಡರಬಲೆ ....!!!Share/Save/Bookmark

Wednesday, November 30, 2016

ಮೈಮರೆಯದಿರಿ...!!!

ಉಜ್ಜಿದ ನಂತರ...
ಒತ್ತುವ ಮುನ್ನ...
ಮೈಮರೆಯದೆ....
ಎಚ್ಚರವಾಗಿರಿ....!!!

ಒಮ್ಮೆ ಹೋದರೆ....
ಸರಿಪಡಿಸಿಕೊಳ್ಳುವುದು....
ತುಂಬಾ ಕಷ್ಟ...!!!


ಅಯ್ಯೋ... ಅಪಾರ್ಥ ಮಾಡಿಕೊಳ್ಳಬೇಡಿ...!!!

ನಾ ಹೇಳಿದ್ದು, ಕ್ರೆಡಿಟ್/ಡೆಬಿಟ್ ಕಾರ್ಡ್ ಉಜ್ಜಿದ ನಂತರ, PIN ಒತ್ತುವ ಮುನ್ನ, ಪಾವತಿಸಬೇಕಾಗಿರುವ ಮೊತ್ತವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ... ಒಮ್ಮೆ ಹೋದರೆ ಸರಿಪಡಿಸಿಕೊಳ್ಳುವುದು ತುಂಬಾ ಕಷ್ಟ...!!!

ಜಾಗೊ ಗ್ರಾಹಕ್... ಜಾಗೊ..!!!

--
ಶಿವಪ್ರಕಾಶ್ ಎಚ್. ಎಮ್. 

Share/Save/Bookmark

Monday, November 7, 2016

ಅಂದು-ಇಂದು ೧

ಅಂದು:
ಯಾರು...
ಯಾರಿಗೆ...
ಯಾವಾಗ...
ಹೇಳಿದರು...?ಇಂದು:
ಯಾರು...
ಯಾರಿಗೆ...
ಯಾವಾಗ...
ಹೇಳಿದರು...?
ಎನ್ನುವುದನ್ನು
ಹೇಗೆಲ್ಲಾ ತಿರುಚಿ ಹೇಳಬಹುದು...?


--
ಇಂದಿನ ಮಾಧ್ಯಮಕ್ಕೆ ಸುಳ್ಳನ್ನು ಸತ್ಯ ಮಾಡುವ, ಸತ್ಯವನ್ನು ಸುಳ್ಳುಮಾಡುವ ಶಕ್ತಿ ಇದೆ. ಜನರೂ ಕೂಡ ಯಾವುದೇ ಸುದ್ದಿಯನ್ನು ಒಮ್ಮೆ ಪರಾಮರ್ಶಿಸದೆ ನಂಬಿಬಿಡುತ್ತಿದ್ದಾರೆ. ಯಾರಿಗೂ ಸತ್ಯ ಬೇಕಿರುವಂತೆ ಕಾಣುತ್ತಿಲ್ಲ. ಸುಂದರ ಸುಳ್ಳನ್ನು ನಂಬುತ್ತಾ, ತಮ್ಮ ನಂಬಿಕೆಗಳಲ್ಲೇ ಬಂಧಿಯಾಗುತ್ತಿದ್ದಾರೆ. 
--

ಶಿವಪ್ರಕಾಶ್ 

Share/Save/Bookmark

Thursday, November 3, 2016

ಅಂಬಿಗನಿರದ ಈ ದೋಣಿಗೆ..ಮನುಜ..
ಸರಿಯಾಗಿ ನೋಡು...
ಹಣವಿಲ್ಲದೆ ನಿನಗೆ ಸಿಕ್ಕಿಹ...
ಬೆಲೆಕಟ್ಟಲಾಗದ ಅತ್ಯಮೂಲ್ಯ ಕೊಡುಗೆ ಇಲ್ಲಿದೆ...

ಇಲ್ಲಿ...
ಗಾಳಿಯಿದೆ...
ನೀರಿದೆ...
ಹಾಗು ಬೆಳಕಿದೆ...

ಬೆಳಕಿಲ್ಲದೆ ಬದುಕಿಲ್ಲ...
ಗಾಳಿಯಿಲ್ಲದೆ ಉಸಿರಿಲ್ಲ...
ನೀರಿಲ್ಲದೆ ನೀನೇ ಇಲ್ಲ..

ಉಚಿತವಾಗಿ ಸಿಕ್ಕಿದೆಯೆಂದು...
ಹಾಳು ಮಾಡಬೇಡ...
ಕಾಲಮೀರಿದೊಡೆ... ಪರಿತಪಿಸಿದರೂ...
ನಿನಗೆ ಕ್ಷಮೆಯಿಲ್ಲ...

ಅಂಬಿಗನಿರದ ಈ ದೋಣಿಗೆ,
ನೀನೆ ಅಂಬಿಗ...
ಇಲ್ಲಿ ಕಿಚ್ಚಿದೆ... ನೀರೂ ಇದೆ...
ಕಿಚ್ಚು ಹಚ್ಚಿದ್ದು ನೀನು...
ಆರಿಸಬೇಕಾಗಿರುವುದು ನೀನೇ...!!!

ಎಚ್ಚೆತ್ತುಕೊ...
ಈಗಾಗಲೇ ಬಹಳ ತಡವಾಗಿದೆ...
ಬಹಳ ತೆರಿಗೆ ಕಟ್ಟಿ ಕೊಳ್ಳುವ ದಿನ ಬಲುದೂರವಿಲ್ಲ...
ಆ ದುರಂತಕ್ಕಾಗಿ ಕಾಯಬೇಡ...

ನೀರಿನಾಳ ಅರಿಯದ...
ಈ ಕಾಗದದ ದೋಣಿಗೆ,
ಬುದ್ಧಿಯಂಬ ಕಿಚ್ಚು ಹಚ್ಚಿ....
ಕಾಪಾಡು...

ಬಳಸು...
ಬೆಳಸು...
ನಾಳಿನವರಿಗೂ ಕಾಪಾಡು...
ನಾ ಸುಟ್ಟು ಬೂದಿಯಾಗುವ ಮೊದಲು....

ಇಂತಿ ನಿನ್ನ ಹಡೆದವ್ವ,
ಪ್ರಕೃತಿ ಮಾತೆ...

---
ಶಿವಪ್ರಕಾಶ್ ಎಚ್ ಎಮ್


ಅವಧಿಯ ಕ್ಲಿಕ್ ಆಯ್ತು ಕವಿತೆಗೆ ಬರೆದ ಕವಿತೆ..
ಅವಧಿಯಲ್ಲಿ ಪ್ರಕಟವಾದ ಕೊಂಡಿ: ಅಂಬಿಗನಿರದ ಈ ದೋಣಿಗೆ..

Share/Save/Bookmark

ಕ್ಲಿಕ್ಕು ಕ್ಲಿಕ್ಕಿಸುತಿದ್ದುದರ ಕವಿತೆ


ಕ್ಲಿಕ್ ಆಯ್ತು ಕವಿತೆ
ಕ್ಲಿಕ್ಕು ಕ್ಲಿಕ್ಕಿಸುತಿದ್ದುದರ ಕವಿತೆ.....

ಭೂತಕಾಲಕೆ ನಿನಪಾದೆ...
ನಿನಪು ನೆನಪಿಸುತ ವರ್ತಮಾನವಾದೆ..
ಭವಿಷತ್ ಎಚ್ಚರಿಸುವ ಇತಿಹಾಸವಾದೆ....

ಕಪ್ಪು ಬಿಳುಪಾದೆ...
ಬಣ್ಣ ಬಣ್ಣದ ಚಿತ್ರವಾದೆ....
ನೆರಳು ಬೆಳಕಿನ ಆಟವಾದೆ....

ಪಡೆದುಕೊಂಡಿರುವುದರ
ಹಾಗು
ಕಳೆದುಕೊಂಡಿರುವುದರ
ನಡುವೆ
ಕನ್ನಡಿಯಾದೆ....

ಕೊಬ್ಬಿದ ಕಬ್ಬಿಣದ ದೇಹ ನನದು,
ನಾಜೂಕಾದ ಟಚ್ ಸ್ಕ್ರೀನ್ ಬೆಡಗಿ ಬಂದೊಡನೆ,
ಮೂಲೆಗುಂಪಾದೆ... ತುಕ್ಕುಹಿಡಿದೆ... ಸಮಾಧಿಯಾದೆ...

ನಿನ್ನ ನಿನಪುಗಳಿಗೆ...
ಹಸಿರು ಊಸಿರಾಗಿಸಿರುವೆ...
ಅಷ್ಟು ಸಾಕು ನನಗೆ...
ಇನ್ನು ನಿಶ್ಚಿಂತೆಯಿಂದ
ಚಿರನಿದ್ರೆಗೆ ಜಾರುವೆ...

ಕ್ಲಿಕ್ ಆಯ್ತು ಕವಿತೆ
ಕ್ಲಿಕ್ಕು ಕ್ಲಿಕ್ಕಿಸುತಿದ್ದುದರ ಕವಿತೆ.....


ಪ್ರೀತಿಯಿಂದ,
ಶಿವಪ್ರಕಾಶ್ ಎಚ್. ಎಮ್.

ಅವಧಿಯ ಕ್ಲಿಕ್ ಆಯ್ತು ಕವಿತೆಗೆ ಬರೆದ ಕವಿತೆ..  

Share/Save/Bookmark

Thursday, June 2, 2016

ಅವರಿಗಸ್ಟೆ ಗೊತ್ತು...


ಅವರವರ ಬದುಕು
ಅವರಿಗಸ್ಟೆ ಗೊತ್ತು...

ಉಟ್ಟ ಬಟ್ಟೆಯ ನೋಡಿ..
ಇರುವ ವಸ್ತುಗಳ ನೋಡಿ...
ನೀ ಅಳೆಯಬೇಡ...
ಅವರವರ ಬದುಕು ಅವರಿಗಸ್ಟೆ ಗೊತ್ತು...

ಮುಖದ ನಗು ನೋಡಿ...
ಕೊಳೆತು ಬಿದ್ದ ಹಣವ ನೋಡಿ...
ನೀ ಅಳೆಯಬೇಡ...
ಅವರವರ ಬದುಕು ಅವರಿಗಸ್ಟೆ ಗೊತ್ತು...


ಪಡೆದುಕೊಂಡಿರುವುದಸ್ಟೆ ನೋಡಿ..
ಕಳೆದುಕೊಂಡಿರುವುದ ನೋಡದೆ...
ನೀ ಅಳೆಯಬೇಡ...
ಅವರವರ ಬದುಕು ಅವರಿಗಸ್ಟೆ ಗೊತ್ತು...


ಚಂದದ ದೋಣಿಯ ನೋಡಿ..
ಸೆಳೆವ ಸುಳಿಯ ನೋಡದೆ...
ನೀ ಅಳೆಯಬೇಡ...
ಅವರವರ ಬದುಕು ಅವರಿಗಸ್ಟೆ ಗೊತ್ತು...


ಹೊಳೆವ ಕಣ್ಣ ಹಿಂದಿರುವ ಅಳುವ ತಿಳಿದವರಾರು...
ಚಂದದ ಬೂಟು ಕೆಳಗಿರುವ ತೂತು ಕಂಡವರಾರು...
ಅಳೆಯಬೇಡ ಅವರ ಬದುಕ...
ಅವರವರ ಬದುಕು ಅವರಿಗಸ್ಟೆ ಗೊತ್ತು...

Inspired by below Picture:


ಪ್ರೀತಿಯಿಂದ,
ಶಿವಪ್ರಕಾಶ್

Share/Save/Bookmark