Tuesday, July 25, 2017

ಕುಯಿಕ್ ಮಂಜುನಾಥ

ಕಾರಣಾಂತರಗಳಿಂದ ಹಳೆ ಬಾಡಿಗೆ ಮನೆ ಬಿಟ್ಟು, ಹೊಸ ಬಾಡಿಗೆ ಮನೆಗೆ ಹೋಗಬೇಕಾಗಿ ಬಂತು. ಹಳೆ ಮನೆ ಬಿಡುವ ಸಮಯದಲ್ಲಿ ಮನೆಗೆ ಬಣ್ಣ, ಶುಚಿಗೊಳಿಸುವ ಖರ್ಚು ಎಂದು ಒಂದು ತಿಂಗಳ ಬಾಡಿಗೆ ಹಣವನ್ನು ಮನೆಯ ಮಾಲೀಕರು ಪಡೆಯುತ್ತಾರೆ. ನಾವು ಕೊಟ್ಟ ಅಡ್ವಾನ್ಸ್ ಹಣದಲ್ಲಿ ಈ ಮೊತ್ತವನ್ನು ಕಡಿತಗೊಳಿಸಿ ಉಳಿದ ಅಡ್ವಾನ್ಸ್ ಹಣವನ್ನು ವಾಪಸ್ಸು ಕೊಡುತ್ತಾರೆ. ಇದು ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿರುವ ವಿಚಾರವೇ..


ಹಳೆಯ ಮನೆಯ ಮಾಲೀಕರ ಜೊತೆಗೆ ಉತ್ತಮ ಬಾಂಧವ್ಯವಿತ್ತು. ಈಗಲೂ ಇದೆ. 
ಹಾಗಾಗಿ ಉಳಿದ ಅಡ್ವಾನ್ಸ್ ಹಣವನ್ನು ಮರಳಿಸುತ್ತ, "ಶಿವು, ನಿನಗೆ ಯಾರಾದರೂ ಮನೆಗೆ ಪೇಂಟ್ ಮಾಡುವವರು ಗೊತ್ತೇ?.." ಎಂದು ಹಳೆಯ ಮನೆಯ ಮಾಲೀಕ ಅಂಕಲ್ ಕೇಳಿದರು. ಆಗ ನೆನಪಾಗಿದ್ದೆ ಈ ಮಂಜುನಾಥ್. 
ಹೊಸ ಬಾಡಿಗೆ ಮನೆಗೆ ಈ ಮಂಜುನಾಥನೇ ಪೇಂಟ್ ಮಾಡಿದ್ದ. ಹಿಂದೆ ಹೊಸ ಮನೆ ನೋಡಲು ಹೋದಾಗ ಇವನ ಪರಿಚಯವಾಗಿತ್ತು.
ಪರಿಚಯವಾಗಿದ್ದಾಗಲೇ ನನಗೆ "ಸಾರ್, ಪೇಂಟಿಂಗ್, ಎಲೆಕ್ಟ್ರಿಕ್, ಪ್ಲಮ್ಬಿಂಗ್, ಮನೆ ಶಿಫ್ಟಿಂಗ್ ಹಾಗು ಏನೇ ಕೆಲಸಗಳು ಇದ್ದರೂ, ನಮಗೆ ಹೇಳಿ ಸರ್" ಎಂದು ಮಂಜುನಾಥ್ ಹೇಳಿದ್ದು ನೆನಪಾಯಿತು.
ಅವನು ಮಾಡುವ ಕೆಲಸಗಳ ಪಟ್ಟಿ "One stop for all your needs" ಎನ್ನುವ ಹಾಗಿತ್ತು.


"ಹಾ ಅಂಕಲ್. ಒಬ್ಬರು ಗೊತ್ತು. ಮಂಜುನಾಥ್ ಅವರ ಹೆಸರು. ಅವರ ನಂಬರ್ ಕೊಡ್ತೀನಿ, ಮಾತಾಡಿ" ಎಂದು ಹೇಳಿದೆ.
ಅದಕ್ಕೆ ಅಂಕಲ್ "ಶಿವು, ಅವರು ಈಗ ನಮ್ಮ ಮನೆಗೆ ಬರೋಕೆ ಆಗುತ್ತಾ ಅಂತ ಒಮ್ಮೆ ಫೋನ್ ಮಾಡಿ ಕೇಳು" ಎಂದು ಕೇಳಿದರು.
ಸರಿ ಅಂಕಲ್ ಎಂದು ಮಂಜುನಾಥನಿಗೆ ಕಾಲ್ ಮಾಡಿದೆ. ಕರೆಗೆ ಸ್ಪಂದಿಸಿ "ಐದು ನಿಮಿಷದಲ್ಲಿ ನೀವು ಹೇಳಿದ ವಿಳಾಸಕ್ಕೆ ಬರ್ತೀನಿ" ಎಂದು ಹೇಳಿ ಇಪ್ಪತ್ತೇ ನಿಮಿಷದಲ್ಲಿ ಬಂದ.


ಮಂಜುನಾಥನಿಗೆ ಬಣ್ಣ ಹಚ್ಚಬೇಕಾಗಿದ್ದ ಮನೆಯನ್ನೆಲ್ಲ ತೋರಿಸಿ, ಹಣದ ಮಾತುಕತೆ ನಡೆಸಿ ಒಪ್ಪಂದ ಸೂಚಿಸಲಾಯಿತು.
ಕೊನೆಯಲ್ಲಿ ಅಂಕಲ್ "ನೋಡಿ ಮಂಜುನಾಥ್, ನಮ್ ಶಿವು ಹೇಳಿದ್ದರಿಂದ, ನಿಮ್ಮನ್ನು ನಂಬಿ ಈ ಕೆಲಸ ನಿಮಗೆ ಒಪ್ಪಿಸಿದ್ದೇವೆ. ಕೆಲಸ ಚನ್ನಾಗಿ ಮಾಡ್ಬೇಕು. ಹೇಳಿದ ಸಮಯದಲ್ಲಿ ಮುಗಿಸಬೇಕು" ಎಂದು ಹೇಳಿದರು.
ಅದಕ್ಕೆ ಮಂಜುನಾಥ "ಸರ್, ನಮಗೆ ಕೆಲಸ ಕೊಟ್ಟಿದಿರಲ್ಲ... ಇನ್ನು ಮರೆತುಬಿಡಿ... ಕೆಲಸ ಆದ್ಮೇಲೆ ನೋಡಿ ಹೇಳಿ... ನಮ್ ಕೆಲಸ ನೋಡಿ ನೀವೇ ಇನ್ನೊಬ್ಬರಿಗೆ ಹೇಳ್ಬೇಕು... ನಮ್ ಕೆಲಸ ಎಲ್ಲ ಕುಯಿಕ್... ಕುಯಿಕ್..."
ಅಂಕಲ್ ಹಾಗು ನಾನು ಈ "ಕುಯಿಕ್, ಕುಯಿಕ್" ಅಂದ್ರೆ ಏನು ಎಂದು ಅರ್ಥ ಆಗದೆ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು.
ನಾನು ಮಂಜುನಾಥನಿಗೆ "ಕುಯಿಕ್..?" ಎಂದು ಪ್ರಶ್ನಿಸುವ ಧಾಟಿಯಲ್ಲಿ ಅದರ ಅರ್ಥ ಕೇಳಿದೆ..
ಅದಕ್ಕೆ ಮಂಜುನಾಥ ಮತ್ತದೇ ಧಾಟಿಯಲ್ಲಿ "ಹ್ಞೂ ಸರ್... ಕುಯಿಕ್... ಕುಯಿಕ್... ಮಾಡ್ತೀವಿ" ಅಂದ...
ಅರ್ಥವಾಗದೆ ಇದೊಳ್ಳೆ ಕುಯಿಕ್ ಆಯ್ತಲ್ಲಪ್ಪಾ ಎಂದು ಯೋಚಿಸುತ್ತಿರುವಾಗ, ಊಹೆಯಿಂದ "ಕ್ವಿಕ್ (Quick) ಆ...?" ಎಂದೇ...
ಅದಕ್ಕೆ ಮಂಜುನಾಥ "ಹಾಂ ಸರ್... ಕುಯಿಕ್..." ಎಂದ..


ಪ್ರೀತಿಯಿಂದ,
ಶಿವಪ್ರಕಾಶ್

Share/Save/Bookmark

2 comments:

  1. ನಿಮ್ಮ ಬರಹಗಳೇ ಹೀಗೆ: ಬಹಳ ಕುಯಿಕ್!

    ReplyDelete