Friday, June 26, 2009

ನೀರು ಚಲ್ಲಬೇಡಿ

"ಏನಪ್ಪಾ ಶಿವು, ನಮಗೆ ಬುದ್ದಿ ಹೇಳೋ ಲೆವೆಲ್'ಗೆ ಬಂದ್ಬಿಟ್ಯ ?"
"ಅಯ್ಯೋ, ಕ್ಷಮಿಷಿ ಮಹಾಸ್ವಾಮಿ. ನಾನು ಅಸ್ಟೊಂದು ದೊಡ್ಡ ವ್ಯಕ್ತಿ ಅಲ್ಲ. ನನ್ನ ಲೇಖನಕ್ಕೆ ಶೀರ್ಷಿಕೆ ಅದೇ ಸರಿ ಅನಿಸ್ತು, ಅದಕ್ಕೆ ಹಾಕಿದೆ. ಅಸ್ಟೆ."
ಸರಿ, ನೇರವಾಗಿ ನಡೆದ ಘಟನೆಗೆ ಬರ್ತೀನಿ.

ನಮ್ಮ ಊರಿಂದ ೩೫ ಕಿಲೋಮೀಟರು ದೂರದಲ್ಲಿ ಒಂದು ಬೆಟ್ಟ ಇದೆ. ಆ ಬೆಟ್ಟದಲ್ಲಿ ಒಂದು ದೇವಸ್ಥಾನವಿದೆ. ಆ ದೇವಸ್ಥಾನಕ್ಕೆ ಶ್ರಾವಣ ಸೋಮವಾರಗಳಲ್ಲಿ ಬಹಳ ಜನ ಹೋಗ್ತಾರೆ. ಆ ದಿನ ರಾತ್ರಿ ಅಲ್ಲೇ ಇದ್ದು, ಮರುದಿನ ಬೆಳಿಗ್ಗೆ ಹಿಂದಿರುಗುತ್ತಾರೆ.
ಒಂದು ಶ್ರಾವಣ ಸೋಮುವಾರ ನಾನು, ನನ್ನ ತಮ್ಮ ಹಾಗು ನನ್ನ ಸ್ನೇಹಿತರು ಸೇರಿ ಹೋಗಿದ್ವಿ.
ಸಾಯಂಕಾಲದ ವೇಳೆಗೆ ದೇವರ ದರ್ಶನ ಆಯ್ತು.
ರಾತ್ರಿ ಚನ್ನಾಗಿ ಒಂದು ಹೋಟೆಲಿನಲ್ಲಿ ಊಟ ಮಾಡಿ, ದೇವಸ್ತಾನದ ಆವರಣದಲ್ಲಿದ್ದ ದೊಡ್ಡ ಸಭಾಂಗಣಕ್ಕೆ ಹೋದೆವು. ದೇವಸ್ತಾನಕ್ಕೆ ಬರುವ ಭಕ್ತರು ರಾತ್ರಿ ಅಲ್ಲೇ ಮಲಗೋದು. ಸಭಾಂಗಣ ಕಿಕ್ಕಿರಿದು ತುಂಬಿತ್ತು. ಹೇಗೋ ನಾವು ಅಲ್ಲಿ ಮಲಗಲು ಜಾಗ ಮಾಡಿಕೊಂಡೆವು.
ಅಲ್ಲೇ ಕೂತು, ಸ್ವಲ್ಪ ಹೊತ್ತು ಸ್ನೇಹಿತರೆಲ್ಲ ಸೇರಿ ಹರಟೆ ಮಾತುಗಳನ್ನಾಡಿ, ಅಲ್ಲೇ ಮಲಗಲು ಸಿದ್ದರಾದೆವು.
ಆಸ್ಟರಲ್ಲಿ ನನ್ನೊಬ್ಬ ಗೆಳೆಯ "ಲೋ, ನೀರು ಚಲ್ಲಿ ಬಂದು ಮಲಗೋಣ, ಯಾರಾದ್ರೂ ನೀರು ಚಲ್ಲೋಕೆ ಬರ್ತಿರಾ ?" ಅಂತ ಕೇಳಿದ.
ಅಲ್ಲೇ ಪಕ್ಕದಲ್ಲಿ ಚಿಕ್ಕ ಮಗುವಿನ ಜೊತೆಗಿದ್ದ ಮಹಿಳೆಗೆ ಅದು ಕೇಳಿಸಿತು, ಆಗ ಆ ಮಹಿಳೆ ಹೇಳಿದ್ಲು:
"ಅಣ್ಣ, ನೀರು ಚೆಲ್ಲಬೇಡಿ, ದಯವಿಟ್ಟು ಇಲ್ಲಿ ಕೊಡಿ.
ಮಗುಗೆ ಬಾಯಾರಿಕೆಯಾಗಿದೆ. ನೀರು ಕುಡಿಸಲು ಆಸ್ಟು ದೂರ ಹೋಗ್ಬೇಕು,
ನೀರು ಚೆಲ್ಲಿ ಯಾಕೆ ವೇಸ್ಟ್ ಮಾಡ್ತಿರ ?, ಇಲ್ಲಿ ಕೊಡಿ,
ಮಗುಗೆ ಕುಡಿಸ್ತೀನಿ"

ಆಗ ನನ್ನ ಸ್ನೇಹಿತರಿಗೆಲ್ಲ ಸಿಕ್ಕಾಪಟ್ಟೆ ನಗು ಬರುತ್ತಿದ್ದರೂ ತಡೆದುಕೊಂಡು, ಹೀಗೆ ಹೇಳಿದರು.. "ಅಕ್ಕ, ಈ ನೀರು ಕೆಟ್ಟು ಹೊಗಿದವೇ. ಇವು ಕೊಡಿಯಲು ಯೋಗ್ಯವಲ್ಲ."

ಅಂದಹಾಗೆ... ಮೂತ್ರ ವಿಸರ್ಜನೆಗೆ ನಮ್ಮ ಭಾಷೆಯಲ್ಲಿ "ನೀರು ಚಲ್ಲೋದು", "ಟ್ಯಾಂಕ್ ಕಾಲಿ ಮಾಡೋದು" ಅಥವಾ "ಹಾಡು ಹಾಡೋದು" ಅಂತ ಹೇಳ್ತಿವಿ.
ಸಾರ್ವಜನಿಕ ಸ್ಥಳಗಳಲ್ಲಿ ಬಾಯ್ಬಿಟ್ಟು ಹೇಳಲು ನಾಚಿಕೆ ಆಗುತ್ತೆ ಆಲ್ವಾ...?
Share/Save/Bookmark

Monday, June 22, 2009

ಬಿಲಿಯನ್

ಮೊನ್ನೆ ಹೀಗೆ ಯಾವುದೋ ಪುಸ್ತಕ ಓದುತ್ತ ಇದ್ದೆ. ಅದ್ರಲ್ಲಿ ಬಿಲಿಯನ್ ಹಾಗು ಮಿಲಿಯನ್ ಎನ್ನುವ ಪದಗಳನ್ನು ನೋಡಿದೆ.
೧ ಬಿಲಿಯನ್ ಅಂದ್ರೆ ಎಷ್ಟು. ?
ನನಗೆ ಒಂದು ಮಿಲಿಯನ್ ಅಂದ್ರೆ ೧೦ ಲಕ್ಷ ಅಂತ ಗೊತ್ತಿತ್ತು.
೧ ಮಿಲಿಯನ್ = ೧,೦೦೦,೦೦೦
ಸರಿ, ಒಂದು ಮಿಲಿಯನ್ ಗೆ ಒಂದರ ಮುಂದೆ ೬ ಸೊನ್ನೆ ಇದೆ.

ಹಾಗೆ, ೧ ಬಿಲಿಯನ್ ಗೆ ಎಷ್ಟು ಸೊನ್ನೆ ಇರಬಹುದು ಎಂದು ಆಲೋಚಿಸುತ್ತ ಇರುವಾಗ ನನ್ನ ರೂಮಿನಲ್ಲಿ ನನ್ನ ಗೆಳೆಯ ನಟ ಬಂದ.
ನಾನು ತಕ್ಷಣ ಅವನನ್ನು ಇದೆ ಪ್ರೆಶ್ನೆ ಕೇಳಿದೆ.. "ಲೋ ನಟ, ೧ ಬಿಲಿಯನ್'ನಲ್ಲಿ ಒಂದರ ಮುಂದೆ ಎಷ್ಟು ಸೊನ್ನೆ ಇರ್ತವೆ... ?"
ಅವನು: "ಎಸ್ಟೋ ಇರ್ಬೇಕು ಕಣೋ, ಜ್ಞಾಪಕ ಇಲ್ಲ. ಶಬ್ದಕೋಶ ನೋಡು"

ನನ್ನ ಹತ್ತಿರ ಇದ್ದ "English to Kannada" ಶಬ್ದಕೋಶ ತೆರೆದೆ.
ಅದನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು.
ಆ ಶಬ್ದಕೋಶದಲ್ಲಿ ೧ ಬಿಲಿಯನ್ = ೧, ೦೦೦,೦೦೦,೦೦೦,೦೦೦ ಎಂದಿತ್ತು.
ಹಾಗಾದರೆ ಒಂದು ಬಿಲಿಯನ್ ಗೆ ಒಂದರ ಮುಂದೆ ೧೨ ಸೊನ್ನೆಯೇ...?
ನನಗೆಗೋ ಸಂಶಯ ಬಂತು.
ಬೇರೆ ಇಂಗ್ಲಿಷ್ ಶಬ್ದಕೋಶ ತೆಗೆದು ನೋಡಿದೆ. ಅದ್ರಲ್ಲಿ ಹೀಗಿತ್ತು...
Billion: 1. [Brit] The number that is represented as a one followed by 12 zeros; in the United Kingdom the usage followed in the United States is frequently seen
2. The number that is represented as a one followed by 9 zeros.
ಆಗ ಗೊತ್ತಾಯ್ತ UK ನಲ್ಲಿ ಒಂದರ ಮುಂದೆ ೧೨ ಸೊನ್ನೆ. ಅದೇ ಬೇರೆ ದೇಶದಲ್ಲಿ ಒಂದರ ಮುಂದೆ ೯ ಸೊನ್ನೆ.
ನಮ್ಮ ನಟ ಕೂಡ ಅದನ್ನು ನೋಡಿದ.
ತಕ್ಷಣ ನಟ ಹೇಳಿದ : " ಲೋ, ಎಂತ ಅನಾಹುತ ಆಗಿಬಿಡ್ತಾ ಇತ್ತೋ..."
ನಾನು ಆಶ್ಚರ್ಯದಿಂದ " ಯಾಕೋ ? " ಅಂದೆ.
ಆಗ ಅವನು: "ನಿನ್ನ ಶಬ್ದಕೋಶ ನೋಡಿ, ಒಂದು ವೇಳೆ ನಾನು ಯಾರಿಗಾದರು ಒಂದು ಬಿಲಿಯನ್ ಬ್ಯಾಂಕ್ ಚೆಕ್(Bank Check) ಕೊಡುವಾಗ ಒಂಬತ್ತರ ಬದಲು ಹನ್ನೆರೆಡು ಸೊನ್ನೆ ಹಾಕಿದ್ರೆ ಏನು ಕಥೆ ?.
ಯಪ್ಪಾ, ಮುಂದಿನ ಸಾರಿ ನೋಡಿ ಸಹಿ ಹಾಕಬೇಕು...".

ನಾನು ಬಿದ್ದು ಬಿದ್ದು ನಕ್ಕೆ...
Share/Save/Bookmark

Tuesday, June 16, 2009

ಹದಿನಾರು

ಸ್ನೇಹಿತರಲ್ಲ ಸೇರಿ ಮೈಸೂರಿನಲ್ಲಿದ್ದಾಗ ಚಾಮುಂಡಿ ಬೆಟ್ಟಕ್ಕೆ ಹೋಗಲು ನಿರ್ಧರಿಸಿದೆವು.
ಚಾಮುಂಡಿ ಬೆಟ್ಟಕ್ಕೆ ಮೊದಲ ಬಾರಿಗೆ ಹೋಗ್ತಾ ಇರೋದು.
ಸರಿ, ನಮ್ಮ ಏರಿಯಾದಿಂದ ನಗರ ಬಸ್ ನಿಲ್ದಾಣಕ್ಕೆ ಹೋದೆವು. ಅಲ್ಲಿಂದ ಇನ್ನೊಂದು ಬಸ್ ಹಿಡಿದು ಚಾಮುಂಡಿ ಬೆಟ್ಟಕ್ಕೆ ಹೋಗಬೇಕಾಗಿತ್ತು.

ನಗರ ಬಸ್ ನಿಲ್ದಾಣದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಹೀಗೆ ಕೇಳಿದೆ:
ನಾನು: "ಸಾರ್, ಇಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಬಸ್ ಎಲ್ಲಿ ನಿಲ್ತಾವೆ ? ".
ಆ ವ್ಯಕ್ತಿ: " ಓ ಅಲ್ಲಿ ಒಂದು ಬಸ್ ಕಾಣಿಸ್ತಾ ಇದೆಯಲ್ಲ, ಅಲ್ಲೇ ಬಸ್ ನಿಲ್ಲೋದು. ಅಲ್ಲಿ ಯಾವದೋ ಬಸ್ಸ ನಿಂತ ಹಾಗಿದೆ ನೋಡು. ಆ ಬಸ್ ಹೋದರು ಹೋಗಬಹುದು, ಹೋಗಿ ನೋಡಿ.." ಎಂದು ದೂರದಲ್ಲಿದ್ದ ಒಂದು ಬಸ್ ತೋರಿಸುತ್ತಾ ಹೇಳಿದ.

ನಾವು ಸ್ನೇಹಿತರೆಲ್ಲ ಸೇರಿ ಆ ಬಸ್ಸಿನತ್ತ ಓಡಿ ಹೋಗಿ, ಆ ಬಸ್ ಒಳಹೊಕ್ಕು, ಆ ಬಸ್ಸಿನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಕೇಳಿದೆ:
ನಾನು: " ಸಾರ್, ಈ ಬಸ್ಸು ಎಲ್ಲಿಗೆ ಹೋಗುತ್ತೆ..? "
ಆ ವ್ಯಕ್ತಿ: "ಹದಿನಾರು"
ನಾನು: "ಹದಿನಾರು..?.. ಬಸ್ ನಂಬರ್ ಅಲ್ಲ ಸ್ವಾಮಿ.., ಬಸ್ ಎಲ್ಲಿಗೆ ಹೋಗುತ್ತೆ..?"
ಆ ವ್ಯಕ್ತಿ: "ಅಯ್ಯೋ, ಹದಿನಾರು ಸ್ವಾಮಿ"
ನಾನು: "ಅಲ್ಲ ರೀ, ನಾನು ಕೇಳ್ತಾ ಇರೋದು, ಈ ಬಸ್ಸು ಎಲ್ಲಿಗೆ ಹೋಗುತ್ತೆ ..?"
ಆ ವ್ಯಕ್ತಿ ಮತ್ತದೇ ರಾಗದಲ್ಲಿ "ಹದಿನಾರು" ಎಂದ.
ನನಗೆ ತೆಲೆಬಿಸಿಯಾಯ್ತು.
ಸರಿ, ಬಸ್ಸಿನ ಫಲಕದಲ್ಲಿ ಏನು ಹಾಕಿದರೆ ನೋಡಲು ಬಸ್ಸಿನಿಂದ ಇಳಿದು, ಫಲಕ ನೋಡಿದೆ.
ಆಗ ಗೊತ್ತಾಯ್ತ.. ಆ ಬಸ್ಸು ಹೋಗುತ್ತಿದ್ದ ಸ್ಥಳದ ಹೆಸರೇ "ಹದಿನಾರು". ಬಸ್ಸಿನ ನಂಬರ್ ಬೇರೆಯೇ ಇತ್ತು.
ನಾವೆಲ್ಲರೂ ಗಹಗಹಿಸಿ ನಕ್ಕೆವು.

ನಮ್ಮ ಕೆಲವು ಊರುಗಳ ಹೆಸರುಗಳು ಹೀಗೆ ಅಲ್ಲವೇ..?
ಉದಾಹರಣೆಗೆ:
ಸೋಮುವಾರಪೇಟೆ, ಶನಿವಾರಸಂತೆ...
Share/Save/Bookmark

Tuesday, June 2, 2009

ಹೆಡ್ ಲೈಟ್

ಇದು ಮೈಸೂರಿನಲ್ಲಿದ್ದಾಗ ನಡೆದ ಘಟನೆ.
ನಾನು ಬೆಳಿಗ್ಗೆ ೭ ಗಂಟೆಗೆ, ನನ್ನ ದ್ವಿಚಕ್ರ ವಾಹನದ ಮೇಲೆ ಕುಳಿತು ಹೊರಟಿದ್ದೆ.
ಮೈಸೂರು ಅಂದ್ರೆ ಕೇಳಬೇಕೆ ? ತುಂಬಾ ಪ್ರಶಾಂತವಾದ ಊರು.
ಕಾಲಿ ಕಾಲಿ ರಸ್ತೆಗಳಲ್ಲಿ ನನ್ನ ಸವಾರಿ ಹೊರಟಿತ್ತು.
ಒಂದು ಸುಂದರವಾದ ಹುಡುಗಿ ಸ್ಕೂಟಿಯಲ್ಲಿ ಕುಳಿತು ನನಗೆ ಎದುರು ಬರುತ್ತಿದ್ದಳು. ಅವಳ ಸ್ಕೂಟಿಯ ಹೆಡ್ ಲೈಟ್ (Head Light) ಬೆಳಗುತ್ತಿತ್ತು.
ಬೆಳಕಾಗಿದ್ದರೂ ಇನ್ನು ಹೆಡ್ ಲೈಟ್ ಹಾಕೊಂಡು ಬರ್ತಾ ಇರೋದನ್ನ ನೋಡಿ ಮನಸಲ್ಲೇ "ಇವಳಿಗೆ ಇನ್ನು ಬೆಳಕಾರ್ದಂಗಿಲ್ಲ....." ಅನ್ಕೊಂಡೆ.
ಹೋಗ್ಲಿ ಬಿಡು. ಹೆಡ್ ಲೈಟ್ ಉರಿತಾ ಇದೆ ಅಂತ ಅವಳಿಗೆ ಸನ್ನೆ ಮಾಡಿ ಹೇಳೋಣ ಅನಿಸಿತು.
ಸರಿ, ಹೇಳಲು ಕೈ ಮುಂದೆ ಮಾಡಲು ಹೋದಾಗ ಮನಸೇಕೋ ತಡೆಯಿತು.
ಆ ಥರ ಸನ್ನೆ ಮಾಡಿದರೆ ಅಪಾರ್ಥವಾಗಬಹುದು ಎನಿಸಿತು.
ಸನ್ನೆ ಮಾಡಲು ಹೋದ ಕೈ ಹಿಂತೆಗೆದೆ.
ಅವಳು, ನನ್ನ ಗಾಡಿಗೆ ಹತ್ತಿರ ಬರುತ್ತಿದ್ದಂತೆ, ನಾನು ಮಾಡಬೇಕೆಂದುಕೊಂಡಿದ್ದ ಸನ್ನೆ ಅವಳು ಮಾಡಿದಳು.
ನಾನಗೆ ಆಶ್ಚರ್ಯವಾಯಿತು.
ಆಗ ಗೊತ್ತಾಯ್ತ, ನನ್ನ ಗಾಡಿಯ ಹೆಡ್ ಲೈಟ್ ಕೂಡ ಉರಿತಾ ಇದೆ ಅಂತ.
Share/Save/Bookmark