
(ಚಿತ್ರ ಕೃಪೆ: ಅಂತರ್ಜಾಲ)
ಎಂದಿನಂತೆ ಬೆಳಿಗ್ಗೆ ಬೇಗನೆ ಎದ್ದು (ನಿಜ ಹೇಳ್ತಾ ಇದೀನಿ ರೀ) ಕಾಲೇಜ್'ಗೆ ಹೋದೆ. ಕಾಲೇಜ್'ನ ಆವರಣದ ಒಳಗೆ, ಕ್ಲಾಸ್ ಗೆ ಹೋಗುವ ದಾರಿಯಲ್ಲಿ Placement ಆಫೀಸಿನ ಮುಂದೆ ಕಾಲೇಜ್'ನ ಹುಡುಗರು ದೊಡ್ಡದಾದ ಒಂದು ಸಾಲಿನಲ್ಲಿ ನಿಂತಿದ್ದರು. ನನ್ನ ಕೆಲವು ಮಿತ್ರರು ಕೂಡ ಅದೇ ಸಾಲಿನಲ್ಲಿ ನಿಂತಿದ್ದರು. ಅಲ್ಲೇ ಹಾಕಿದ್ದ ಬ್ಯಾನೆರ್ ನೋಡಿದೆ. "ಉಚಿತ ಕಣ್ಣಿನ ಪರೀಕ್ಷೆ" ಎಂದಿತ್ತು. ನನ್ನ ಮಿತ್ರರು ನನ್ನನ್ನು ಕರೆದು "ಸಾಲಿನಲ್ಲಿ ನಿಂತ್ಕೋ" ಎಂದರು. ನಾನು ಸಾಲಿನಲ್ಲಿ ನಿಂತೆ.
ಒಬ್ಬೊಬ್ಬರು ಕಣ್ಣು ಪರೀಕ್ಷೆ ಮಾಡುತ್ತಿದ್ದ ಕೋಣೆಯ ಒಳಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಹೊರ ಬರುತ್ತಿದ್ದರು. ಹೀಗೆ ಹೊರಬಂದ ನನ್ನ ಸ್ನೇಹಿತರು, ಕೈಯಲ್ಲಿ ಹಿಡಿದ ಒಂದು ಚೀಟಿಯನ್ನು ತೋರಿಸಿ "ಮಗ, ನನಗೆ ೦.೨೫ ಇದೆ", "ಮಗ, ನನಗೆ ೪.೫ ಇದೆ"... ಎಂದು ಒಬ್ಬೊಬ್ಬರು ಒಂದೊಂದು ಅಂಕಿ ಹೇಳುತ್ತಿದ್ದರು. ಅದು ಅವರಿಗೆ ಇರುವ ದೃಷ್ಟಿ ದೋಷದ ಅಂಕಿ. ತಪಾಸಣೆ ಮಾಡಿದ ವೈದ್ಯರು, ಅವರಿಗೆ ಕನ್ನಡಕ ಧರಿಸಲೋ, ಅಥವಾ ಇರುವ ಕನ್ನಡಕವನ್ನು ಬದಲಿಸಲೋ ಹೇಳಿರುವುದಾಗಿ ಹೇಳಿಕೊಂಡರು.
ನನಗೂ ಕನ್ನಡಕ ಧರಿಸಲು ಹೇಳಬಹುದು ಎಂದುಕೊಂಡು ಸಾಲಿನಲ್ಲಿ ನಿಂತೆ.
ನನ್ನ ಸರದಿ ಬಂತು. ಕೋಣೆಯ ಒಳ ಹೋದೆ.
ಅಲ್ಲೊಂದು ಕಣ್ಣಿನ ಪರೀಕ್ಷೆಯ ಉಪಕರಣವನ್ನು ಇಟ್ಟಿದ್ದರು.
ಅದರ ಒಂದು ತುದಿಯಲ್ಲಿ ಅವರು ಕೂತು, ಇನ್ನೊಂದು ತುದಿಯಲ್ಲಿ ನನ್ನನ್ನು ಕೂರಲು ಹೇಳಿದರು. (ಮೇಲಿನ ಚಿತ್ರದಲ್ಲಿ ಇರುವ ಹಾಗೆ).
ಆ ಉಪಕರಣದ ಒಂದು ತುದಿಯಲ್ಲಿ ಕಣ್ಣಿಟ್ಟು ನೋಡಲು ಹೇಳಿದರು. ಇನ್ನೊಂದು ತುದಿಯಲ್ಲಿ ಅವರು ನೋಡುತ್ತಿದ್ದರು.
ಅವರು ನೋಡುತ್ತಾ... "ಸರಿಯಾಗಿ ಕಣ್ಣಿಟ್ಟು ನೋಡ್ತಾ ಇದ್ದೀರಾ...?" ಎಂದು ಕೇಳಿದರು.
"ಹಾ ಸರ್, ನೋಡ್ತಾ ಇದೀನಿ" ಎಂದು ಹೇಳಿದೆ.
ಎರೆಡು ಮೂರು ಬಾರಿ ಹೀಗೆ ಕೇಳಿದರು.
"ನಾನು ನೋಡುತ್ತಲೇ ಇದ್ದೇನೆ" ಎಂದು ಹೇಳಿದೆ.
ಒಂದು ನಿಮಿಷ ಇನ್ನೊಂದು ತುದಿಯಿಂದ ನನ್ನ ಕಣ್ಣನ್ನು ನೋಡಿ, ಪರೀಕ್ಷಿಸಿದರು.
ನಂತರ... ಒಂದು ಚೀಟಿಯಲ್ಲಿ ಏನೋ ಅಂಕಿ ಬರೆದು ನನ್ನ ಕೈಯಿಗೆ ಇಟ್ಟರು.
ನಾನು "ಸರ್, ಕನ್ನಡಕ ಏನಾದ್ರು ಬೇಕಾಗುತ್ತ...?" ಎಂದೆ.
"ಏನು ಬೇಕಿಲ್ಲ ಹೋಗಿ" ಎಂದರು.
"ಎಸ್ಟಿದೆ ಸರ್..." ಎಂದೆ.
"ಎಷ್ಟು ಇಲ್ಲ ಹೋಗಿ" ಎಂದರು.
ಆ ಚೀಟಿಯನ್ನೊಮ್ಮೆ ತೆರೆದು ನೋಡಿದೆ. ಅದರಲ್ಲಿ ಒಂದು ದೊಡ್ಡ "೦" (ಸೊನ್ನೆ) ಬರೆದಿದ್ದರು. ಸ್ವಲ್ಪ ನಿರಾಸೆಯಲ್ಲೇ ಆ ಚೀಟಿಯನ್ನು ಜೇಬಿನಲ್ಲಿಟ್ಟುಕೊಂಡು ಹೊರಬಂದೆ.
ಹೊರಗಡೆ ನಿಂತಿದ್ದ ಸ್ನೇಹಿತರೆಲ್ಲ ನನ್ನ ಕರೆದು... "ಎಸ್ಟಿದೆ ಮಗ...?" ಎಂದರು.
ತಾಪಸನೆ ಮಾಡಿದ ವೈದ್ಯರು ಕೊಟ್ಟ ಆ ಚೀಟಿಯನ್ನು ಅವರ ಕೈಗಿಟ್ಟೆ.
ಅದನ್ನು ನೋಡುತ್ತಾ.... "ಮಗ.. ನೀನು ಇಂಜಿನಿಯರಿಂಗ್'ನಲ್ಲಿ ಏನಾದ್ರು ಓದಿದಿಯೋ, ಇಲ್ವೋ.?... ಎಲ್ಲ ಸೆಮಿಸ್ಟರ್ ಓದಿ ಪಾಸಗಿದಿಯೋ ಅಥವಾ ಕಾಪಿ ಹೊಡೆದು ಪಾಸ್ ಆಗಿದಿಯಾ...?" ಎಂದು ಕೀಟಲೆ ಮಾಡಿದರು.
ನಿಮ್ಮೆಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.