(ಫೋಟೋ ಕೃಪೆ: ಅ೦ತರ್ಜಾಲ) ನಾನು ರಾತ್ರಿ ಊರಿಗೆ ಹೊರಡಬೇಕಿತ್ತು.
ಆದರೆ ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವ-
ಕಪ್ ನ ಫೈನಲ್ ಪಂದ್ಯ ವೀಕ್ಷಿಸುತ್ತ ಕೂತಿದ್ದೆ.
ರಾತ್ರಿ ಎಸ್ಟೇ ಹೊತ್ತಾದರೂ ಸರಿಯೇ,
ಪಂದ್ಯವನ್ನು ಮುಗಿಸಿಯೇ ಹೋಗಬೇಕು ಎಂದುಕೊಂಡು ಸ್ನೇಹಿತರೊಡನೆ ಪಂದ್ಯ ವೀಕ್ಷಿಸುತ್ತಾ,
ಭಾರತ ತಂಡ ವಿಕೆಟ್ ಕಬಳಿಸಿದಾಗ,
ಭಾರತ ತಂಡದ ಆಟಗಾರರು ಹೊಡೆಯುವ ಪ್ರತಿಯೊಂದು ಫೋರ್,
ಸಿಕ್ಸ್ ಗಳಿಗೆಲ್ಲ ಕುಣಿದು,
ಕುಪ್ಪಳಿಸುತ್ತ ಸಂಭ್ರಮಿಸುತ್ತ ಕೂತುಬಿಟ್ಟೆ.
ಪಂದ್ಯ ಮುಗಿದು ವಿಶ್ವ-ಕಪ್ (ಅಸಲಿಯೋ, ನಕಲಿಯೋ) ಪಡೆದ ಸಂಭ್ರಮದಲ್ಲಿ ಊರಿಗೆ ಹೋಗಲು ಹೊರಟುನಿಂತೆ. ಮನೆ ಬಿಟ್ಟಾಗ ಮಧ್ಯರಾತ್ರಿ ಹನ್ನೆರಡು ಗಂಟೆ. ಪ್ರತಿಯೊಂದು ಮನೆ ಮನೆಗಳ ಮುಂದೆ ಗಂಡಸರು, ಹೆಂಗಸರು, ಚಿಕ್ಕಮಕ್ಕಳು ಎಲ್ಲರೂ ಸೇರಿ ಪಟಾಕಿ ಹಚ್ಚುವ ಸಂಭ್ರಮವ ಕಂಡೆ. ರಸ್ತೆಗಳಲ್ಲಿ ಕುಣಿದು ಕುಪ್ಪಳಿಸುವವರ ಕಂಡೆ. ಭಾವುಟ ಹಿಡಿದುಕೊಂಡು ದ್ವಿಚಕ್ರ ವಾಹನಗಳಲ್ಲಿ, ಕಾರುಗಳಲ್ಲಿ ಸುತ್ತುವ ಜನರ ಕಂಡೆ. ಎಲ್ಲರಲ್ಲಿಯೂ ಸಂಭ್ರಮವೋ, ಸಂಭ್ರಮ... ಅದೊಂದು ಅದ್ಭುತ ರಾತ್ರಿ. ನನ್ನಿಂದ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದನ್ನು ನೋಡಿ, ಸಂಭ್ರಮಿಸಿದ ನನ್ನ ಕಣ್ಣುಗಳಿಗೆ ಮಾತ್ರ ಹೇಳಲು ಸಾಧ್ಯ.
ರಸ್ತೆಯಲ್ಲಿ ಕಂಡ ಆಟೋ ಒಂದಕ್ಕೆ ಕೈ ಮಾಡಿ ಕೇಳಿದೆ... "ಮೆಜಸ್ಟಿಕ್...?"
"ಹಾ ಬನ್ನಿ ಹತ್ತಿ ಸರ್..." ಎಂದ ಆಟೋದವ.
ಮಧ್ಯಾರಾತ್ರಿ ಹತ್ತುತ್ತಿರುವುದರಿಂದ, ಆಟೋದವರು ಕಡಿಮೆ ಎಂದರೂ ೧೫೦ ರೂಪಾಯಿ ಕೇಳುವರೆಂದು ಹಿಂದೆ ಅನುಭವವಾಗಿತ್ತು.
ಆಟೋ ಹತ್ತಿ..."ಎಷ್ಟು ಕೊಡಬೇಕು...??" ಎಂದೆ.
ಆಟೋದವನು... "ಸರ್, ಇವತ್ತು ನಾವು ವಿಶ್ವ-ಕಪ್ ಗೆದ್ದಿದೀವಿ. ನೀವು ಎಲ್ಲಿಗೆ ಬೇಕಾದ್ರೂ ಕರೆದುಕೊಂಡು ಹೋಗಿ... ನಿಮ್ಮೂರಿಗೆ ಬೇಕಾದ್ರು ಸರಿಯೇ... ಫ್ರೀ ಆಗಿ ಬರ್ತೀನಿ... ದುಡ್ಡು ಮಾತ್ರ ಕೊಡಬೇಡಿ.." ಅಂದ.
ಕೇಳಿ ಆಶ್ಚರ್ಯವಾಯಿತು.
ಹಾಗೆ ಮೆಜೆಸ್ಟಿಕ್ ತಲುಪುವವವರೆಗೂ ಆಟೋದವನೊಂದಿಗೆ ಫೈನಲ್ ಪಂದ್ಯದ ವಿಮರ್ಶೆ ಮಾಡುತ್ತಾ 'ಧೋನಿ ಹಂಗಾಡಿದ, ಗಂಭೀರ್ ಹಿಂಗಾಡಿದ... ಹಾಗೆ ಹೀಗೆ..." ಎನ್ನುವ ಸಂಭಾಷಣೆ ನಡೆಯುತ್ತಿರುವಾಗ ಮಜೆಸ್ಟಿಕ್ ಬಂದೇಬಿಟ್ಟಿತು.
ಆಟೋದಿಂದ ಇಳಿಯುವಾಗ ನಾನು ಎಸ್ಟೇ ದುಡ್ಡು ಕೊಡಲು ಪ್ರಯತ್ನಿಸಿದರೂ ಆಟೋದವನು ತೆಗೆದುಕೊಳ್ಳಲಿಲ್ಲ. "ಇಲ್ಲ ಸರ್.. ವಿಶ್ವ-ಕಪ್ ಗೆದ್ದ ಈ ಸಂತೋಷಕ್ಕೆ, ಇವತ್ತು ರಾತ್ರಿಯೆಲ್ಲ ಫ್ರೀ ಯಾಗಿ ಆಟೋ ಹೊಡಿತೀನಿ.." ಎನ್ನುತ್ತಾ ಸಂಭ್ರಮದಿಂದ ಆಟೋ ಸ್ಟಾರ್ಟ್ ಮಾಡಿ ಹೊರಟ...
ವಿಶ್ವ-ಕಪ್ ಗೆದ್ದು, ಕ್ರಿಕೆಟ್ ಪ್ರೇಮಿಗಳಿಗೆ
ಇಂತಹ ಅದ್ಭುತ ಖುಷಿಯನ್ನು ತಂದುಕೊಟ್ಟ ಭಾರತ ತಂಡಕ್ಕೆ ನನ್ನ ಅಭಿನಂದನೆಗಳು.

ವಿಶ್ವ-ಕಪ್ ಗೆದ್ದ ಸಂಭ್ರಮದ ರಾತ್ರಿ