Monday, April 7, 2014

ಸಂಬಂಧಗಳೇ ಹೀಗೆ

ಸಂಬಂಧಗಳೇ ಹೀಗೆ 
ಅರ್ಥವಾದರೂ ಅರ್ಥವಾಗದ ಹಾಗೆ...

ಹಿಡಿದರೆ 
ಚುಚ್ಚುವ 
ಮುಳ್ಳಿನ 
ಗುಲಾಬಿಯಂತೆ,

ಹಿಡಿವುದ ಬಿಟ್ಟರೆ
ಚುಚ್ಚಿದ
ಮುಳ್ಳಿನ 
ಮಾಸದ ರಕುತದ ಕಲೆಯಂತೆ 

ಹತ್ತಿರವಿದ್ದಸ್ಟು
ನೋಯಿಸುವ,
ದೂರವಿದ್ದಸ್ಟು,
ಕಾಡಿಸುವ,
ಬೂದಿ ಮುಚ್ಚಿದ
ಕೆಂಡದಂತೆ... 

ಮಾತಿಗೊಂದರ್ಥ,
ನಡತೆಗೊಂದರ್ಥ,
ಕಲ್ಪಿಸುವ, 
ಕೊಂಕು ಮಾತಿನ,
ಡೊಂಕು ಬಾಲದ,
ನಾಯಿಯಂತೆ.. 

ಹೃದಯದಲ್ಲಿನ,
ಪ್ರೀತಿ,
ಪ್ರೇಮ,
ಕಾಣುವ ಸುಳ್ಳಲಿ,
ಮುಚ್ಚಿ ಹೋದ,
ಕಾಣದ ಸತ್ಯದಂತೆ... 

ನುಂಗಲು ಆಗದ, 
ಉಗುಳಲು ಆಗದ,
ಸಂಬಂಧಗಳೇ ಹೀಗೆ,
ಅರ್ಥವಾದರೂ ಅರ್ಥವಾಗದ ಹಾಗೆ... !!!


-- 
ಪ್ರೀತಿಯಿಂದ ,
ಶಿವಪ್ರಕಾಶ್ 

Share/Save/Bookmark

Friday, April 4, 2014

ಹವ್ಯಾಸಕೊಂದು Break ಬಿದ್ದಾಗ..!!!

ಅಂದು ಸೋಮವಾರ, ವಾರದ ಮೊದಲನೇ ದಿನವಾಗಿದ್ದರಿಂದ ನಾನು ಶಾಲೆಗೆ ಹೋಗಲು ತಯಾರಾಗಿದ್ದೆ. ಅಂದು ನನ್ನ ಏಳನೇ ತರಗತಿಯ ಮೊದಲನೇ ವಾರ್ಷಿಕ ಕಿರುಪರಿಕ್ಷೆಯ ದಿನವಾಗಿತ್ತು. ನಾನು ಕೂಡ ತುಂಬಾ ಚನ್ನಾಗಿ ತಯಾರಾಗಿ ಹೋಗಿದ್ದೆ. ಪರೀಕ್ಷೆ ಮುಗಿಯಿತು. ಮಧ್ಯಾನ ಊಟ ಮುಗಿಸಿ ನಂತರ ಶಾಲೆಗೆ ಹೋಗುವಾಗ ನಾನು ಬರೆದ ನನ್ನ ಮೊದಲ ಕವನ ತೆಗೆದುಕೊಂಡು ಹೋದೆ. ಏಕೆಂದರೆ ನನ್ನ ಗುರುಗಳು ಹೇಳಿದ್ದರು, ವಿದ್ಯಾರ್ಥಿಗಳು ಕೇವಲ ಓದುವ ಹವ್ಯಾಸಗಳನ್ನು ಬೆಳಸಿಕೊಳ್ಳದೆ ಇತರೆ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕು ಎಂದು. ಆಗ ನನಗೆ ತೋಚಿದ್ದು ಕವನ ಬರೆಯುವ ಹವ್ಯಾಸ. ಏಕೆಂದರೆ ಕುವೆಂಪು, ದಾ. ರಾ. ಬೇಂದ್ರೆ ತರಹ ನಾನೊಬ್ಬ ದೊಡ್ಡ ಸಾಹಿತಿ ಆಗಬೇಕೆಂಬ ಹಂಬಲ ಬಹಳ ಇತ್ತು. 

ನಂತರ ಅಂದು ಮಧ್ಯಾನ ಯಾಕೆ ಕವನ ತಗೆದುಕೊಂಡು ಹೋದೆ  ಎಂದರೆ, ಪ್ರತಿ ಸಾರಿ ನಾನು ಕಿರುಪರಿಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದಾಗ ನನ್ನ ಗುರುಗಳು "ನಂದು, ನೀನು ಬರಿ ಓದಿನ ಕಡೆ ಅಷ್ಟೇ ಅಲ್ಲ ಇತರ ಆರೋಗ್ಯಕರ ಹವ್ಯಾಸವನ್ನು ಬೆಳಸಿಕೊಳ್ಳಬೇಕು ಪುಟ್ಟ. ಏಕೆಂದರೆ ವಿದ್ಯೆ ಒಂದೇ ಜೀವನ ಅಲ್ಲ ಮನುಷ್ಯನಿಗೆ ಜ್ಞಾನದ ಜೊತೆಗೆ, ಮಾನಸಿಕ ಸಂತೋಷ ಕೂಡ ಮುಖ್ಯ" ಅಂತ ಹೇಳಿದ್ದರು . 

ನಾನು ಅಂದು ಒಂದು ಕವನ ಬರೆದಿದ್ದರಿಂದ ಅದನ್ನು ಶಿಕ್ಷಕರಿಗೆ ತೋರಿಸಬೇಕು, ಅವರಿಂದ ಪ್ರಶಂಸೆಯನ್ನು ಪಡೆಯಬೇಕೆಂಬ ತವಕದಿಂದ ಆತುರಾತುರವಾಗಿ ಊಟ ಮಾಡಿ ಶಾಲೆಗೇ ಹೋದೆ. ಹೋದ ನಂತರ ಮತ್ತೆ ಅದೇ ಪ್ರಥಮ ಸ್ಥಾನದಲ್ಲಿ ನಾನು ರಾರಾಜಿಸುತ್ತಿದ್ದೆ. 

ನನ್ನ ಗುರುಗಳು ಕೇಳಿದರು, "ಏನಮ್ಮ ನಂದು, ಈ ಸಾರಿಯಾದರು ಹವ್ಯಾಸ ಬದಲಿಸಿಕೊಂಡಿದ್ದಿಯಾ?"
ನಾನು ಸ್ವಲ್ಪವೂ ತಡ ಮಾಡದೆ ನಾನು ಬರೆದ ಕವನದ ಸಾಲನ್ನು ನನ್ನ ಗುರುಗಳಿಗೆ ತೋರಿಸಿದೆ. ನನಗೆ ನೆನಪಿರುವ ಹಾಗೆ ಆ ಕವನದ ಸಾಲುಗಳು ಈ ರೀತಿಯಾಗಿದೆ:
ಅಪ್ಪನ ಹಾಗೆ ಓದುವೆನು,
ಅಪ್ಪನ ಹಾಗೆ ಬರೆಯುವೆನು,
ಅಪ್ಪನ ಪ್ರೀತಿ - ಕಲಿಸಿದ ಪಾಠವ,
ಎಂದು ಅದನು ಮರೆಯನು...  
-------  ಇತ್ಯಾದಿಯಾಗಿದೆ....        


ಇದನ್ನು ನೋಡಿದ ನನ್ನ ಗುರುಗಳು ಅದ್ಭುತವಾಗಿ ಬರೆದಿದ್ದೀಯ ಪುಟ್ಟ ನೀನು, ಈವಾಗ್ಲೆ ಈ ರೀತಿಯಾಗಿ ಬರೆಯುತ್ತೀಯಾ ಅಂದರೆ ಮುಂದೆ ನೀನು ದೊಡ್ಡ ಕವಯತ್ರಿಯಾಗುವುದರಲ್ಲಿ ಯಾವುದೆ ಸಂಶಯವೇ ಇಲ್ಲ ಅಂದ್ರು. ಅಲ್ಲದೆ ಅದನ್ನು ಓದಿ ನನ್ನ ಸಹಪಾಠಿಗಳಿಂದ ಚಪ್ಪಾಳೆಯನ್ನು ಹೊಡೆಸಿದರು. ಆಗ ನನಗಾದ ಸಂತೋಷ ಹೇಳತೀರದು.

ನಂತರ ಆ ಸಂತೋಷವನ್ನು ಪೂರ್ಣವಾಗಿ ಅನುಭವಿಸಬೇಕು ಎಂದುಕೊಳ್ಳುವಸ್ಟರಲ್ಲಿ ನನ್ನೊಬ್ಬ ಸಹಪಾಠಿ ಥಾಮಸ್ ಅಣ್ಣ ಅಂತ ನಮ್ಮ ತರಗತಿಯಲ್ಲಿ ಹಿರಿಯ ಅಣ್ಣನಂತೆ ಒಬ್ಬ ಇದ್ದ. ಆತ ನನ್ನ ನೋಡಿ "ಸಾರ್, ಎಲ್ಲಾದ್ರು ಈ ಪುಟಾಣಿ ಹುಡುಗಿ ಇಂತ ಕವಿತೆ ಬರೆಯೋದಕ್ಕೆ ಆಗುತ್ತಾ ..? ಎಲ್ಲೋ ಕದ್ದು ಬರೆದಿದ್ದಾಳೆ." ಅಂತ ಹೇಳಿದ.
ಆ ಮಾತನ್ನು ಕೇಳಿ ನನಗೆ ಏನಾಯಿತೋ ಗೊತ್ತಿಲ್ಲ ಇಂದಿನವರೆಗೂ ನನಗೆ ಕವಿತೆ ಕವನಗಳೆಂದರೆ ಪ್ರೀತಿಯೇ ಹೋಗಿದೆ. ಅಂದು ನನ್ನ ಗುರುಗಳು ಏನೋ ಬೈದು ಅವನನ್ನು ಕೂರಿಸಿದರು. ಆದರೆ ನನಗೆ ಮಾತ್ರ ಅದು ಇಂದಿಗೂ ಕಹಿಯಾದ ಘಟನೆಯಾಗಿಯೇ ಉಳಿದಿದೆ. 

ಆದರೆ ಇಂದು ನನಗೆ ನನ್ನ ತಪ್ಪಿನ ಅರಿವಾಗಿದೆ, ಏಕೆಂದರೆ "You can stop a person, but not an idea whose time has come" ಅಂದರೆ "ನೀವು ವ್ಯಕ್ತಿಯನ್ನು ತಡೆಗಟ್ಟಬಹುದು, ಆದರೆ ಕಾಲ ಸನ್ನಿಹಿತವಾಗಿರುವ ಒಂದು ಕಲ್ಪನೆಯನ್ನಲ್ಲ..." ಎಂಬ ಮಾತು ನಿಜಕ್ಕೂ ಅದ್ಭುತವಾಗಿದೆ. ಏಕೆಂದರೆ ನಮ್ಮ ತರಗತಿಯಲ್ಲಿ ಇದ್ದ ಥಾಮಸ್ ಅಂತವರು ಸಾವಿರ ಜನ ಇದ್ದಾರೆ ಪ್ರಪಂಚದಲ್ಲಿ. ಆದರೆ ನನಗೆ ಆ ವಯಸ್ಸಿನಲ್ಲಿ ಈ ಯೋಚನೆ ಯಾಕೆ ಬರಲಿಲ್ಲ ಅಂತ ಗೊತ್ತಾಗ್ತಾ ಇಲ್ಲ.
 ಏನೇ ಆಗಲಿ ಒಂದು ಅಂತು ನಿಜ. ನನ್ನ ಕವನ ಎಂದೋ ಅಳಿಸಿ ಹೋದ ಒಂದು ಮುಗಿದ ಕಥೆ. ಆದ್ರೆ ನನ್ನ ಪ್ರಬಂಧಗಾರಿಕೆಯನ್ನು ಎಂದು ಸಹ ಕೈಬಿಡುವುದಿಲ್ಲ. ಇಂದು ನಾನು ಪ್ರಬುದ್ಧಳಾಗಿದ್ದೇನೆ ಅಂತಹ ಎಷ್ಟೇ ಥಾಮಸ್ ಗಳು ಬಂದರೂ ಹೆದರುವುದಿಲ್ಲ ಬದಲಿಗೆ ಅವರನ್ನು ಎದರಿಸುವ ಧೈರ್ಯ ಬಂದಿದೆ. 

Share/Save/Bookmark

Monday, August 12, 2013

ಕೆ. ಅರ್. ಎಸ್ ಜಲಾಶಯದ ಹಿನ್ನೀರು

ಕೆ. ಅರ್. ಎಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಹೇಮಾವತಿ ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರಿವ ಜಲಾಶಯವೇ ಕನ್ನಂಬಾಡಿ ಕಟ್ಟೆ ಅಥವಾ ಕೃಷ್ಣರಾಜಸಾಗರ. ಇದು ಬುದ್ದಿಶಕ್ತಿಗೆ ಹೆಸರಾದ ಭಾರತರತ್ನ ವಿಶ್ವೇಶ್ವರಯ್ಯನವರ ಕೊಡುಗೆಯಲ್ಲಿ ಪ್ರಮುಖವಾದದ್ದಾಗಿದೆ.

ವಿಶ್ವೇಶ್ವರಯ್ಯ ಎಂದ ತಕ್ಷಣ ನೆನಪಿಗೆ ಬರುವುದು ಅವರ ಯುವ ಶಕ್ತಿಯನ್ನು ಬಡಿದೆಬ್ಬಿಸುವ ಮಾತು. ಹೀಗೆ ಒಮ್ಮೆ, ವಿಶ್ವೇಶ್ವರಯ್ಯನವರ ಆಪ್ತರು ಕೇಳಿದರು "ಸರ್, ಒಂದು ವೇಳೆ ನೀವು ಇಂಜಿನಿಯರ್ ಆಗದೇ, ಇಲ್ಲಿ ಕಸಗುಡಿಸುವ ಕೆಲಸ ದೊರೆತಿದ್ದರೆ ಭಾರತರತ್ನ ಸಿಕ್ತಾ ಇತ್ತಾ ?" ಅಂತ ಕೇಳಿದ್ರು. ಅದಕ್ಕೆ ವಿಶ್ವೇಶ್ವರಯ್ಯನವರು ಮುಗುಳ್ನಕ್ಕು "ನಾನು ಒಂದು ವೇಳೆ ಇಂಜಿನಿಯರ್ ಆಗದೆ ಕಸಗುಡಿಸುವ ಕೆಲಸ ದೊರೆತಿದ್ದರೆ ಆ ಕೆಲಸಕ್ಕೆನೆ ಭಾರತರತ್ನ ಕೊಡಬೇಕು" ಹಾಗೆ ಮಾಡ್ತಾ ಇದ್ದೆ ಎಂದರಂತೆ. ಇದನ್ನು ಕೇಳಿದ ವ್ಯಕ್ತಿ ತಬ್ಬಿಬ್ಬನಾದನಂತೆ. ಎಷ್ಟು ಅಧ್ಬುತ ಅಲ್ವಾ ಅವರ ಮಾತು?. ವಿಶ್ವೇಶವರಯ್ಯನವರು ಹೇಳಿದ ಮಾತು ಅಕ್ಷರಶಃ ನಿಜ ಏಕೆಂದೆರೆ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಜವಾದ ಪ್ರಾಮಾಣಿಕತನ, ಶ್ರದ್ದೆ, ಭಿನ್ನತೆ, ಛಲ ಇದ್ದರೆ ಖಂಡಿತ ಅವರ ಮಾತು ಸುಳ್ಳಲ್ಲ. 

ಎಲ್ಲರಿಗೂ ಈ ರೀತಿಯ ಭಿನ್ನವಾದ ಯೋಚನೆಗಳು ಬರುವುದು ಅಸಾಧ್ಯವೇ ಸರಿ!!. ಅದಕ್ಕೆ ಹೇಳೋದು "ಎಲ್ಲಾ ಬುದ್ದಿವಂತರು ಸೃಜನಶೀಲರಲ್ಲ ಆದರೆ ಎಲ್ಲಾ ಸೃಜನಶೀಲರು ಬುದ್ದಿವಂತರೇ ಆಗಿರುತ್ತಾರೆ". ಮತ್ತೊಮ್ಮೆ ವಿಶ್ವೇಶ್ವರಯ್ಯನವರು ಮಾಡಿದ ಸಾಧನೆಯನ್ನು ಸ್ಮರಿಸುತ್ತಾ ನಾ ಕಂಡ ಕೆ. ಅರ್. ಎಸ್ ಜಲಾಶಯದ ಹಿಂಬಾಗದ ಒಂದು ಲಘು ಪ್ರವಾಸ ಹೀಗಿತ್ತು. 

ಫ್ರೆಂಡ್ಸ್, ಈ ಕೆ. ಅರ್. ಎಸ್. ಜಲಾಶಯ ನಿರ್ಮಾಣಕ್ಕೆ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಆ ಊರಲ್ಲಿ ಆರುನೂರು ವರ್ಷಗಳಷ್ಟು ಹಳೆಯದಾದ ಜೋಳರ ಕಾಲದ ವೇಣುಗೋಪಾಲ ಸ್ವಾಮಿ ದೇವಾಲಯವು ಇತ್ತು. ಈಗ ಕಾವೇರಿ ಹಿನ್ನೀರಿನಲ್ಲಿ ಇದು ಮುಳುಗಿಹೋಗಿದೆ. 

ಶ್ರೀ ಹರಿ ಖೋಡೆ ಅವರು ಪೂರ್ಣ ಮೂಲ ವೈಭವ ದೇವಸ್ಥಾನ ಸ್ತಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದೊಂದು ಅಮೋಘವಾದ ಪ್ರವಾಸಿತಾಣವಾಗಿದೆ. ಈ ಸ್ಥಳಕ್ಕೆ ನಾನು, ನನ್ನ ಪತಿ ಹಾಗು ನನ್ನ ಪತಿಯ ಸ್ನೇಹಿತ ಮಂಜು ಅಣ್ಣ ಹಾಗು ಅವರ ಪತ್ನಿ ಚಿಟ್ಟಿ ಹೀಗೆ ನಮ್ಮ ಪ್ರಯಾಣ ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಕೆ. ಅರ್, ಎಸ್ ತಲುಪಬೇಕೆಂಬ ಉತ್ಸಾಹದಲ್ಲಿ ಹೊರೆಟೆವು. 

ಮೊದಲು ಕೆ. ಅರ್. ಎಸ್  ಜಲಾಶಯದಿಂದ ನೀರು ದುಮ್ಮಿಕ್ಕಿ ಹರಿಯುವುದನ್ನು ದೂರದಿಂದಲೇ ಸೇತುವೆ ಮೇಲೆ ನಿಂತು ನೋಡಿದೆವು. ಎಂಥಾ ಅದ್ಭುತ ನೋಟವದು..!!! ಒಂದು ಕ್ಷಣ ಗಂಧರ್ವ ಲೋಕವೇ ಧರೆಗಿಳಿದಂತಿತ್ತು. ಹಾಲಿನ ಪರ್ವತವೇನೋ ಎನ್ನುವಂತೆ ಭಾಸವಾಗುತ್ತಿತ್ತು. 
ಆ ನೋಟವನ್ನು ಕಣ್ತುಂಬಿಸಿಕೊಂಡು ಮುಂದೆ ಹೊರೆಟೆವು. 
ನಾವಂದುಕೊಂಡ ಸ್ಥಳ ಬಂದೇ ಬಿಟ್ಟಿತು. ಅದೇ ಕೆ. ಅರ್. ಎಸ್. ಜಲಾಶಯದ ಹಿನ್ನಿರಿನ ಸ್ಥಳ. ಅಬ್ಬಾ ಎಂಥಹ ಸ್ಥಳವದು....!!!! ಆ ಸ್ಥಳವನ್ನು ನೋಡಿ ನಾನು ಮೂಕವಿಸ್ಮಿತಳಾದೆ. ಜಲಾಶಯದ ದಡದ ನೀರಿನಲ್ಲಿ ನಾವೆಲ್ಲಾ ಸೇರಿ ಕುಣಿದಾಡಿದೆವು. ಮತ್ತೊಮ್ಮೆ ನಾನು ನನ್ನ ಬಾಲ್ಯಕ್ಕೆ ಹೋಗಿ ಬಂದಂತ ಅನುಭವಾಯಿತು. ಆ ನೀರಿನ ಅಲೆಗಳು ನನ್ನ ಪಾದವನ್ನು ಆಗಾಗ್ಗೆ ಬಂದು ಸ್ಪರ್ಶ ಮಾಡುತ್ತಿದ್ದುದ್ದು ಕಚಗುಳಿ ಇಡುವಂತೆ ಭಾಸವಾಗುತ್ತಿತ್ತು. 

ಈ ಕಚಗುಳಿಯ ನಡುವೆ ಜಿನಿ ಜಿನಿ ಮಳೆಯ ಸಿಂಚನವೂ ಆಯಿತು. ಒಟ್ಟಿನಲ್ಲಿ ಆ ವೇಳೆ ಸ್ವರ್ಗವೇ ಧರೆಗಿಳಿದಂತಿತ್ತು. ನಂತರ ನಿರ್ಮಾಣಗೊಳ್ಳುತ್ತಿರುವ ವೇಣುಗೋಪಾಲ ಸ್ವಾಮಿ ದೇವಾಲಯದ ಮುಂಬಾಗಕ್ಕೆ ಬಂದು ನಾನು ಮತ್ತು ನನ್ನ ಗೆಳತಿ ಚಿಟ್ಟಿ ಕೈ ಹಿಡಿದು ಚಿಕ್ಕ ಮಕ್ಕಳ ಹಾಗೆ ಕುಣಿದು ಕುಪ್ಪಳಿಸಿದೆವು. ದೂರದ ತುದಿಯಲ್ಲಿ ಹಸಿರಿನ ಜೊತೆ ಆಕಾಶವೂ ಸೇರಿ ನೀರಿನ ಹೊದಿಕೆಯನ್ನು ಹೊದಿಸಿದಂತಿತ್ತು. ಒಟ್ಟಿನಲ್ಲಿ ಆ ಕ್ಷಣಗಳು ನನ್ನ ನೆನಪಿನ ಪುಟದಲ್ಲಿ ಬೆರೆತು ಹೋಗಿದೆ. 


 ಪ್ರವಾಸದ ಕೆಲವು ಚದುರಿದ ಚಿತ್ರಗಳು:
ಶತದ್ರುವಂಶ ಯೋಧುಡು
ತುಂಬಾ ಕಷ್ಟ ಪಟ್ಟು ಕೆಲಸ ಮಾಡ್ತಾ ಇದ್ದೀನಿ.. ಯಾರು ಡಿಸ್ಟರ್ಬ್ ಮಾಡ್ಬೇಡಿ
ನಿಧಾನ ಚಿಟ್ಟ...
ಅಮರಶಿಲ್ಪಿ ಮಂಜುನಾಥಚಾರಿ

Dhoom 4 na hero-heroine

ಬಾಲ್ಯದ ಆಟ ಆ ಹುಡುಗಾಟ ಇನ್ನು ಮರೆತಿಲ್ಲ

Kriah part 4 Hero


ಹಾರುವ ಹಕ್ಕಿಗೆ ಪೈಪೋಟಿ ಪತಿರಾಯರದು


ಇಂತಿ,
ನಂದುಶಿವು

Share/Save/Bookmark

Monday, May 13, 2013

ಕನಸು ನನಸಾದಾಗ

ಇಷ್ಟ ಪಡುವ ಕೆಲವು ವಿಷಯಗಳೇ ಹಾಗೆ. ಕನಸಾಗಿ ಬಂದು ನಮ್ಮನ್ನು ಕಾಡುತ್ತಿರುತ್ತವೆ. ಕನಸು ನನಸಾಗುವವರೆಗೆ ಏನೋ ಒಂದು ರೀತಿಯ ಸಂಕಟ ಅಸಮಾಧಾನ.

ಪಕ್ಕದ ಬೀದಿಯ ಮನೆಯೊಂದರಲ್ಲಿದ್ದ ವಾಸವಾಗಿದ್ದ ರಿಕ್ಷ ಓಡಿಸುತ್ತಿದ್ದ ರಾಮಣ್ಣನಿಗೆ ಹೀಗೆ ಒಂದು ಕನಸು ಸದಾ ಕಾಡುತ್ತಿತ್ತು. ತನ್ನ ಆ ಕನಸನ್ನು ಯಾರಲ್ಲೂ ಹೇಳಿಕೊಂಡಿರಲಿಲ್ಲ. ಕನಸನ್ನು ನನಸು ಮಾಡಿ ತನ್ನ ಹೆಂಡತಿಯನ್ನು ಅಚ್ಚರಿಗೊಳಿಸಬೇಕು ಎಂದು ಅವಳಿಗೂ ತನ್ನ ಕನಸಿನ ಬಗ್ಗೆ ಹೇಳಿಕೊಂಡಿರಲಿಲ್ಲ.
ಇಂದಲ್ಲ ನಾಳೆ ತನ್ನ ಕನಸು ನನಸಾಗುತ್ತೆ ಎಂದು ನಂಬಿದ್ದ. ಹಾಗೆಂದು ನಂಬಿ ಸುಮ್ಮನೆ ಕುಳುತುಕೊಳ್ಳುವ ಜಾಯಮಾನದವನಲ್ಲ ರಾಮಣ್ಣ. ಅದಕ್ಕೆಬೇಕಾದ ಪ್ರಯತ್ನಗಳನ್ನೆಲ್ಲ ಮಾಡುತ್ತಿದ್ದ. 
ಪ್ರತಿದಿನದ ಅವನ ಪ್ರಯತ್ನಗಳು ಅವನನ್ನು ಅವನ ಕನಸಿಗೆ ಹತ್ತಿರ ಮಾಡುತ್ತಿದ್ದವು.

ಹೀಗೆ ಅವನು ಮಾಡುತ್ತಿದ್ದ ಪ್ರಯತ್ನಗಳಿಗೆಲ್ಲ ಉತ್ತರ ಸಿಗುವ ದಿನ ಬಂದೇಬಿಟ್ಟಿತು.ಹೌದು ನಾಳೆ ಅವನ ಕನಸು ನನಸಾಗುವ ದಿನ. ಏನೋ ಸಾಧಿಸಿದ ಹೆಮ್ಮ. ಸಂತೋಷ ತಳವಳ ಹಾಗು ನಾಳೆಯ ಕಾಣುವ ತವಕ ಎಲ್ಲ ಒಟ್ಟೊಟ್ಟಿಗೆ ಆಗುವ ಅನುಭವ. ಅವನ ಮನಸಿನ ಈ ಸ್ಥಿತಿಗೆ ನಿದ್ರೆ ಬಾರದೆ ಹಾಸಿಗೆಯಲ್ಲೇ ಒದ್ದಾಡಿದ.ಈ ತವಕ ತಳಮಳಗಳ ನಡುವೆ ರಾಮಣ್ಣ ನಿದ್ದೆಗೆ ಜಾರಿದಾಗ ರಾತ್ರಿ ೨ ಗಂಟೆಯಾಗಿತ್ತು.

ಬೆಳಿಗ್ಗೆ ೬ ಗಂಟೆಗೆ ಏಳುತ್ತಿದ್ದ ರಾಮಣ್ಣ ಅಂದು ೮ ಗಂಟೆಯಾದರೂ ಏಳಲಿಲ್ಲ.
ಅದೇನೋ ಸಾಧಿಸಿದ ಹೆಮ್ಮೆಯ ನಿದ್ದೆ.
ಹೆಮ್ಮೆಯ ನಿದ್ದೆಯಲ್ಲೊಂದು ಕನಸು.
ಕನಸನ್ನು ಕನಸಲ್ಲೇ ನನಸಾಗಿಸಿಕೊಂಡ ಹೆಮ್ಮೆಯ ಕನಸು.
ರಾಮಣ್ಣನನ್ನು ಚಿರ ನಿದ್ರೆಗೆ ತಳ್ಳಿದ ಕನಸು.

ಪ್ರೀತಿಯಿಂದ,
ಶಿವಪ್ರಕಾಶ್

Share/Save/Bookmark

Tuesday, November 20, 2012

ಸ್ವಲ್ಪ ಸಮಯ ಕೊಡು

ಇಂದು
ನಾ ನಿನಗೆ...
ಪ್ರೇಮ ಪತ್ರ
ಬರೆಯ ಬೇಕು....
ಬರೆಯಲೇ ಬೇಕು...
ಎಂದು ಹಠ ಮಾಡಿ...
ಅದೆಸ್ಟೋ ಏಕಾಗ್ರತೆಯಿಂದ...
ಕುಳಿತೆ...


ಪೆನ್ನಿಂದ...
ಒಂದು ಹನಿ ಇಂಕು...
ಒಂದೇ ಒಂದು ಹನಿ ಇಂಕು...
ಜಾರಲು ಬಿಡದೆ...
ತಂಗಾಳಿಯಂತೆ,
ಕಣ್ಮುಂದೆ ಬಂದು...
ಕರೆದೊಯ್ಯುವೆಯಲ್ಲ...


ಸಮಯ ಕೊಡು...
ನಿನಗಾಗಿ
ನನ್ನ ಮನದಲ್ಲಿ
ಪ್ರೀತಿಯ ಪದಗಳಿಂದ
ಕಟ್ಟಿದ
ಮುತ್ತಿನ ಹಾರ
ತೊಡಿಸಲು...
ಸ್ವಲ್ಪ ಸಮಯ ಕೊಡು...


--
ಇಂತಿ ನಿನ್ನ ಪ್ರೀತಿಯ,
ಶಿವಪ್ರಕಾಶ್

Share/Save/Bookmark

Tuesday, October 16, 2012

ಬದಲಾಗಿರುವುದಾದರು ಏನು...?

ನನ್ನವರಲ್ಲ
ಎಂದುಕೊಂಡವರು...
ನನ್ನವರಾಗುವುರು...!!!

ನನ್ನವರು
ಎಂದುಕೊಂಡವರು...
ನನ್ನವರಾಗದಿರುವುದು....!!!

ನಾ ಬದಲಾಗಿಲ್ಲ...
ಅಂದು ಹೇಗಿದ್ದೇನೋ..
ಇಂದು ಹಾಗೆಯೇ ಇರುವೆ...

ನೀವು...?
ನೀವೂ ಬದಲಾಗಿಲ್ಲ...
ಅಂದು ಹೇಗಿದ್ದಿರೋ ...
ಇಂದು ಹಾಗೆಯೇ ಇರುವಿರಿ...

ಪ್ರಪಂಚ ...?
ಅದು ಕೂಡ ಬದಲಾಗಿಲ್ಲ...
ಅಂದು ಹೇಗಿತ್ತೋ...
ಇಂದು ಹಾಗೆಯೇ ಇದೆ...

ಆದರೆ,
ಬದಲಾಗಿರುವುದಾದರು ಏನು...?
ಹೌದು... ಬದಲಾಗಿರುವುದು....
ದೃಷ್ಠಿ...!!!
ನೀವು ನನ್ನ ನೋಡುವ
ದೃಷ್ಠಿ...!!!


ಪ್ರೀತಿಯಿಂದ,
ಶಿವಪ್ರಕಾಶ್  

Share/Save/Bookmark

Monday, September 24, 2012

ಅನಿಲೋತ್ಪಾದಕರು

ಸಿಕ್ಕಾಪಟ್ಟೆ ಛಳಿಯ ನಡುವೆ,
ಫ್ಯಾನ್ ಆನ್ ಮಾಡಿ,
ಹೊರನಡೆಯುವವರು ...

ಫೋನ್ ಬಾರದಿದ್ದರೂ,
ಫೋನ್ ಹಿಡಿದು 'ಹಲೋ.....!!!' ಎನುತಾ,
ಹೊರನಡೆಯುವವರು ...

ಏನು ತಿಳಿಯದ ಅಮಾಯಕರಂತೆ,
ಮುಗ್ದ ಮುಖವ ತೋರುತ,
ಹೊರನಡೆಯುವವರು ...

ಹೊರನಡೆವರು ಇವರು ಹೊರನಡೆವರು...
ಸದ್ದಿಲ್ಲದೇ ಬಾಂಬ್ ಹಾಕುವ,
ಅನಿಲೋತ್ಪಾದಕರಿವರು...


 

Share/Save/Bookmark